ಸುಬ್ರಹ್ಮಣ್ಯ: ಮತ್ತೆ ಕಾಡಾನೆ ದಾಳಿ

ಸುಬ್ರಹ್ಮಣ್ಯ, ಜ.11: ಒಂದು ವಾರದಿಂದ ಸುಬ್ರಹ್ಮಣ್ಯ ಸಮೀಪದ ಕುಲ್ಕುಂದ ರುದ್ರ ಫಾರ್ಮ್ಸ್ ತೋಟಕ್ಕೆ 4 ಭಾರಿ ಕಾಡಾನೆ ದಾಳಿ ನಡೆಸಿದೆ. ಈ ಹಿಂದೆ 3 ಬಾರಿ ದಾಳಿ ನಡೆಸಿ ಅಪಾರ ಕೃಷಿ ನಾಶ ಮಾಡಿದ ಕಾಡಾನೆ, ರವಿವಾರ ರಾತ್ರಿಯಿಂದ ಸೋಮವಾರ ಮುಂಜಾನೆ ತನಕ ತೋಟದಲ್ಲಿದ್ದ ಸುಮಾರು 150ಕ್ಕೂ ಹೆಚ್ಚು ಫಲಭರಿತ ಅಡಿಕೆ ಮರಗಳನ್ನು ನೆಲಕ್ಕುರುಳಿಸಿದೆ. 100ಕ್ಕೂ ಅಧಿಕ ಬಾಳೆಗಿಡಗಳನ್ನು ನಾಶಪಡಿಸಿದೆ. ತೋಟಕ್ಕೆ ಅಳವಡಿಸಿದ 250 ಸ್ಪಿಂಕ್ಲೇರ್ ಪಾಯಿಂಟ್‌ಗಳಲ್ಲಿ 130ಕ್ಕಿಂತಲೂ ಅಧಿಕ ಪಾಯಿಂಟ್‌ಗಳಿಗೆ ತುಳಿದು ಹಾನಿಮಾಡಿದೆ. ಬಯಲು ಸೀಮೆ ಪ್ರದೇಶದಲ್ಲಿ ಕೃಷಿಬೆಳೆಗಳಿಗೆ ನಾನಾ ರೋಗಗಳು ಭಾದಿಸಿ ಸಾಲಭಾದೆಯಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಮಲೆನಾಡು ಪ್ರದೇಶದಲ್ಲಿ ಆ ಪರಿಸ್ಥಿತಿ ಇಲ್ಲ. ಬೆಳೆಗಳು ಹುಲುಸಾಗಿ ಬೆಳೆದು ಎಲ್ಲ ಅನುಕೂಲತೆಗಳಿದ್ದರೂ ಕೂಡ ಕಾಡುಪ್ರಾಣಿಗಳ ಹಾವಳಿಯಿಂದ ಗುಳೆಹೋಗುವ ಬದಲು ಆತ್ಮಹತ್ಯೆ ಮಾಡಿಕೊಳ್ಳುವಂತಹ ಪರಿಸ್ಥಿತಿ ಎದುರಾಗಬಹುದು ಎಂದು ಆನೆದಾಳಿಯಿಂದ ಕೃಷಿ ಹಾನಿಗೊಳಗಾಗಿ ನೊಂದ ಕೃಷಿಕರು ಅಳಲು ತೋಡಿಕೊಂಡಿದ್ದಾರೆ.





