ವಂಚನೆಗಾಗಿ ಅಮೆರಿಕನ್ನರ ಕ್ಷಮೆ ಕೋರಿದ ಫೋಕ್ಸ್ ವ್ಯಾಗನ್
ಡೆಟ್ರಾಯಿಟ್ (ಅಮೆರಿಕ), ಜ. 11: ತನ್ನ ಡೀಸೆಲ್ ಕಾರುಗಳ ವಾಯು ಮಾಲಿನ್ಯ ಪರೀಕ್ಷೆಯಲ್ಲಿ ವಂಚನೆ ನಡೆಸಿರುವುದಕ್ಕಾಗಿ ಫೋಕ್ಸ್ ವ್ಯಾಗನ್ ಕಾರು ತಯಾರಿಕಾ ಸಂಸ್ಥೆಯ ಮುಖ್ಯಸ್ಥ ಮಥಾಯಸ್ ಮುಲ್ಲರ್ ಡೆಟ್ರಾಯಿಟ್ ವಾಹನ ಪ್ರದರ್ಶನದಲ್ಲಿ ಅಮೆರಿಕನ್ನರ ಕ್ಷಮೆ ಕೋರಿದ್ದಾರೆ.
ಸೆಪ್ಟಂಬರ್‌ನಲ್ಲಿ ಹಗರಣ ಬಯಲಿಗೆ ಬಂದ ಬಳಿಕ ಕಂಪೆನಿಯ ನೂತನ ಸಿಇಒ ಮಥಾಯಸ್ ಅಮೆರಿಕಕ್ಕೆ ಮೊದಲ ಅಧಿಕೃತ ಭೇಟಿ ನೀಡಿದ್ದು, ಪರಿಸ್ಥಿತಿಯನ್ನು ಸುಧಾರಿಸಲು ಜರ್ಮನ್ ಕಾರು ತಯಾರಿಕಾ ಸಂಸ್ಥೆ ಸಂಪೂರ್ಣವಾಗಿ ಬದ್ಧವಾಗಿದೆ ಎಂದು ಹೇಳಿದರು.
‘‘ಅಮೆರಿಕದ ಗ್ರಾಹಕರು, ಅಧಿಕಾರಿಗಳು, ನಿಯಂತ್ರಕರು ಮತ್ತು ಸಾರ್ವಜನಿಕರ ವಿಶ್ವಾಸವನ್ನು ಉಳಿಸಿಕೊಳ್ಳಲು ನಾವು ವಿಫಲರಾಗಿದ್ದೇವೆ ಎಂಬುದು ನಮಗೆ ಗೊತ್ತು’’ ಎಂದು ವಾಹನ ಪ್ರದರ್ಶನದ ಮುನ್ನಾ ದಿನ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹೇಳಿದರು.
ಜಗತ್ತಿನಾದ್ಯಂತ ಮಾರಾಟವಾದ ತನ್ನ ಫೋಕ್ಸ್‌ವ್ಯಾಗನ್, ಆಡಿ, ಸಿಯಟ್ ಮತ್ತು ಸ್ಕೋಡ ಬ್ರಾಂಡ್‌ಗಳ 1.1 ಕೋಟಿ ಡೀಸೆಲ್ ಕಾರುಗಳಲ್ಲಿ ನೈಜ ವಾಯುಮಾಲಿನ್ಯ ಮಟ್ಟವನ್ನು ಮರೆಮಾಚುವ ಸಾಫ್ಟ್‌ವೇರ್ ಅಳವಡಿಸಿರುವುದನ್ನು ಜರ್ಮನಿಯ ವುಲ್ಫ್ಸ್‌ಬರ್ಗ್ ನಲ್ಲಿ ನೆಲೆ ಹೊಂದಿರುವ ಕಂಪೆನಿ ಒಪ್ಪಿಕೊಂಡಿರುವುದನ್ನು ಸ್ಮರಿಸಬಹುದಾಗಿದೆ.
ಅಮೆರಿಕದ ವಾಯು ಮಾಲಿನ್ಯ ನಿಯಂತ್ರಕರು ಈ ವಂಚನೆಯನ್ನು ಮೊದಲಿಗೆ ಪತ್ತೆ ಹಚ್ಚಿದ್ದರು.