ಇನ್ನು 30 ವರ್ಷ ‘ಒಂದು-ಮಗು’ ನೀತಿಯಲ್ಲಿ ಬದಲಾವಣೆಯಿಲ್ಲ: ಚೀನಾ
ಬೀಜಿಂಗ್,ಜ.11: ಚೀನಾದಲ್ಲಿ ಕುಟುಂಬ ಯೋಜನೆ ನಿರ್ಬಂಧಗಳು ಇನ್ನೂ 30 ವರ್ಷಗಳವರೆಗೆ ಮುಂದುವರಿಯಲಿದೆ ಎಂದು ಚೀನಾದ ಹಿರಿಯ ಅಧಿಕಾರಿಯೊಬ್ಬರು ಸೋಮವಾರ ಹೇಳಿದ್ದಾರೆ. ಮಕ್ಕಳ ಸಂಖ್ಯೆಯ ಮೇಲೆ ಹೇರಲಾಗುವ ನಿರ್ಬಂಧ ಹೆಚ್ಚುತ್ತಿರುವ ವೃದ್ಧ ಜನಸಂಖ್ಯೆಗೆ ಆಶ್ರಯ ನೀಡಲು ಅಗತ್ಯವಾದ ಉದ್ಯೋಗಸ್ತರ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ ಎಂಬ ಕಳವಳವನ್ನು ಅವರು ತಳ್ಳಿಹಾಕಿದ್ದಾರೆ.
ಸುದೀರ್ಘ ಕಾಲದಿಂದ ಜಾರಿಯಲ್ಲಿರುವ ವಿವಾದಾಸ್ಪದ ‘ಒಂದೇ ಮಗು ನೀತಿ’ಯನ್ನು ಸಡಿಲಗೊಳಿಸುವುದಾಗಿಯೂ ದಂಪತಿ ಎರಡು ಮಕ್ಕಳನ್ನು ಪಡೆಯಬಹುದೆಂದೂ ಕಳೆದ ವರ್ಷ ಆಡಳಿತಾರೂಢ ಚೈನೀಸ್ ಕಮ್ಯುನಿಸ್ಟ್ ಪಾರ್ಟಿ ಘೋಷಿಸಿರುವುದನ್ನು ಸ್ಮರಿಸಬಹುದು.
ಆದರೆ, ಅಪಾಯಕಾರಿ ಜನಸಂಖ್ಯಾ ಅಸಮತೋಲನವನ್ನು ತಡೆಯುವ ನಿಟ್ಟಿನಲ್ಲಿ ನೀತಿ ಬದಲಾವಣೆಯ ನಿರ್ಧಾರ ತುಂಬ ತಡವಾಗಿ ಬಂದಿದೆ ಹಾಗೂ ಹೆಚ್ಚಿನ ದಂಪತಿಗಳು ಹೆಚ್ಚು ಮಕ್ಕಳನ್ನು ಹೊಂದುವಲ್ಲಿ ಆಸಕ್ತಿ ವಹಿಸಿಲ್ಲ ಎಂಬ ಟೀಕೆಗಳು ವ್ಯಕ್ತವಾಗಿವೆ.
ಚೀನಾದ ಜನಸಂಖ್ಯೆ 2050ರ ವೇಳೆಗೆ 145 ಕೋಟಿಯನ್ನು ತಲುಪುವ ನಿರೀಕ್ಷೆಯಿದೆ. ಆಗ ಪ್ರತಿ ಮೂವರಲ್ಲಿ ಒಬ್ಬ ವ್ಯಕ್ತಿಯ ಪ್ರಾಯ 60 ವರ್ಷಕ್ಕಿಂತ ಹೆಚ್ಚಾಗಿರುತ್ತದೆ. ಆಗ ಅವರ ಆರೈಕೆ ನೋಡಿಕೊಳ್ಳಲು ವಯಸ್ಕ ಉದ್ಯೋಗಸ್ತರ ಪ್ರಮಾಣ ಕಡಿಮೆಯಾಗಿರುತ್ತದೆ.
ಆದಾಗ್ಯೂ, ಕುಟುಂಬ ಯೋಜನೆ ನಿಯಂತ್ರಣಗಳನ್ನು ದೀರ್ಘಾವಧಿಗೆ ಮುಂದುವರಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ ಎಂದು ರಾಷ್ಟ್ರೀಯ ಆರೋಗ್ಯ ಮತ್ತು ಕುಟುಂಬ ಯೋಜನೆ ಆಯೋಗದ ಉಪಾಧ್ಯಕ್ಷ ವಾಂಗ್ ಪೀಯನ್ ಸುದ್ದಿಗೋಷ್ಠಿಯೊಂದರಲ್ಲಿ ತಿಳಿಸಿದರು. ‘‘ಇದು ಇನ್ನೂ ಕನಿಷ್ಠ 20ರಿಂದ 30 ವರ್ಷಗಳ ಅವಧಿಯವರೆಗೆ ಮುಂದುವರಿಯಲಿದೆ’’ ಎಂದರು.
‘‘ನಿರ್ದಿಷ್ಟ ಕಾಲಾವಧಿಯ ಬಳಿಕ, ಜನಸಂಖ್ಯೆಯ ಸ್ವರೂಪದಲ್ಲಿ ಬದಲಾವಣೆಯಾದ ಹಾಗೂ ಜನಸಂಖ್ಯೆಯ ಸಾಮಾಜಿಕ-ಆರ್ಥಿಕ ಅಭಿವೃದ್ಧಿ ಸ್ಥಿತಿಗತಿಯಲ್ಲಿ ಬದಲಾವಣೆಯಾದ ಬಳಿಕ ನಾವು ಭಿನ್ನ ಜನಸಂಖ್ಯೆ ನೀತಿಯನ್ನು ಅನುಸರಿಸುತ್ತೇವೆ’’ ಎಂದು ಅವರು ನುಡಿದರು.