ಇಸ್ಲಾಮಾಬಾದ್‌ನಲ್ಲಿ ಅಫ್ಘಾನ್, ಪಾಕ್, ಚೀನಾ, ಅಮೆರಿಕ ಪ್ರತಿನಿಧಿಗಳ ಸಭೆ

ಇಸ್ಲಾಮಾಬಾದ್, ಜ. 11: ಅತ್ತ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಬಂಡುಕೋರರ ವಿರುದ್ಧದ ಸಮರ ತೀವ್ರ ಗೊಳ್ಳುತ್ತಿರುವಂತೆಯೇ, 15 ವರ್ಷಗಳ ರಕ್ತಪಾತವನ್ನು ಕೊನೆಗೊಳಿಸುವ ಹಾಗೂ ನಿಂತುಹೋಗಿರುವ ಅಫ್ಘಾನ್ ಶಾಂತಿ ಪ್ರಕ್ರಿಯೆಗೆ ಮರು ಚಾಲನೆ ನೀಡುವ ಉದ್ದೇಶದ ಮಾತುಕತೆಗಳನ್ನು ನಡೆಸಲು ಅಫ್ಘಾನಿಸ್ತಾನ, ಪಾಕಿಸ್ತಾನ, ಚೀನಾ ಮತ್ತು ಅಮೆರಿಕಗಳ ಪ್ರತಿನಿಧಿಗಳು ಇಸ್ಲಾಮಾಬಾದ್‌ನಲ್ಲಿ ಸೋಮವಾರ ಸಭೆ ಸೇರಿದರು.
ತಾಲಿಬಾನ್ ಜೊತೆಗೆ ಮಾತುಕತೆ ಆರಂಭಿಸಲು ಸಹಾಯಕವಾಗುವ ಸೂತ್ರವೊಂದನ್ನು ರೂಪಿಸುವ ನಿರೀಕ್ಷೆಯಲ್ಲಿ ಈ ನಾಲ್ಕು ದೇಶಗಳ ಪ್ರತಿನಿಧಿಗಳು ಮಾತುಕತೆ ನಡೆಸಿದರು.
ಪಾಕಿಸ್ತಾನದ ಪ್ರಧಾನಿಯ ವಿದೇಶ ವ್ಯವಹಾರಗಳ ಸಲಹಾಕಾರ ಸರ್ತಾಝ್ ಅಝೀಝ್ ಸಭೆಗೆ ಚಾಲನೆ ನೀಡಿದರು. ಮಾತುಕತೆಗೆಮುಂದಾಗಿ ಹಿಂಸಾಚಾರವನ್ನು ತ್ಯಜಿಸುವ ಬಗ್ಗೆ ಪರಿಶೀಲನೆ ನಡೆಸುವಂತೆ ತಾಲಿಬಾನ್‌ನ ಮನವೊಲಿಸುವುದು ಸಭೆಯ ಪ್ರಾಥಮಿಕ ಗುರಿಯಾಗಿದೆ ಎಂದು ಅವರು ಹೇಳಿದರು.
‘‘ಹಾಗಾಗಿ, ಮಾತುಕತೆ ಪ್ರಕ್ರಿಯೆ ಆರಂಭಕ್ಕೆ ಪೂರ್ವ ಶರತ್ತು ಇರದಂತೆ ನೋಡಿಕೊಳ್ಳುವುದು ಮಹತ್ವದ್ದಾಗಿದೆ. ಪೂರ್ವ ಶರತ್ತು ವಿಧಿಸಿದ್ದೇ ಆದಲ್ಲಿ ಅದು ಪ್ರತಿಕೂಲ ಪರಿಣಾಮವನ್ನು ಉಂಟುಮಾಡುತ್ತದೆ’’ ಎಂದರು.
ಅಫ್ಘಾನ್‌ನ ಸಹಾಯಕ ವಿದೇಶ ಸಚಿವ ಹೆಕ್ಮತ್ ಕರ್ಝಾಯಿ, ಪಾಕಿಸ್ತಾನದ ವಿದೇಶ ಕಾರ್ಯದರ್ಶಿ ಐಝಾಝ್ ಚೌಧರಿ, ಅಫ್ಘಾನಿಸ್ತಾನ ಮತ್ತು ಪಾಕಿಸ್ತಾ ಕ್ಕಾಗಿನ ಅಮೆರಿಕದ ವಿಶೇಷ ಪ್ರತಿನಿಧಿ ರಿಚರ್ಡ್ ಆಲ್ಸನ್ ಮತ್ತು ಪಾಕಿಸ್ತಾನದಲ್ಲಿರುವ ಅಮೆರಿಕದ ಉನ್ನತ ರಕ್ಷಣಾ ಪ್ರತಿನಿಧಿ ಜನರಲ್ ಆ್ಯಂಟನಿ ರಾಕ್ ಮತ್ತು ಚೀನಾದ ಅಫ್ಘಾನ್ ವ್ಯವಹಾರಗಳ ವಿಶೇಷ ಪ್ರತಿನಿಧಿ ಡೆಂಗ್ ಕ್ಸಿಜುನ್ ಸಭೆಯಲ್ಲಿ ಭಾಗವಹಿಸಿದ್ದರು.
2014ರ ಕೊನೆಯ ವೇಳೆಗೆ ಹೆಚ್ಚಿನ ವಿದೇಶಿ ಪಡೆಗಳು ವಾಪಸಾದ ಬಳಿಕ, ಕಳೆದ ವರ್ಷ ಅಫ್ಘಾನಿಸ್ತಾನದಲ್ಲಿ ಹಿಂಸಾಚಾರ ತಾರಕಕ್ಕೇರಿದ ಹಿನ್ನೆಲೆಯಲ್ಲಿ ಶಾಂತಿ ಪ್ರಕ್ರಿಯೆಯ ಪ್ರಯತ್ನಗಳನ್ನು ಪುನಾರಂಭಿಸಲಾಗಿದೆ.
ಇತ್ತೀಚಿನ ತಿಂಗಳುಗಳಲ್ಲಿ ತಾಲಿಬಾನ್ ದಕ್ಷಿಣದ ಹೆಲ್ಮಂಡ್ ರಾಜ್ಯವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ. ಉತ್ತರದ ನಗರ ಕುಂಡುಝನ್ನು ಸ್ವಲ್ಪ ಅವಧಿಗೆ ವಶಪಡಿಸಿಕೊಂಡಿತ್ತು ಹಾಗೂ ರಾಜಧಾನಿ ಕಾಬೂಲ್‌ನಲ್ಲಿ ಸರಣಿ ಆತ್ಮಹತ್ಯಾ ಬಾಂಬ್‌ಗಳನ್ನು ನಡೆಸಿದೆ. ತಾಲಿಬಾನಿಗಳ ಬೆಳೆಯುತ್ತಿರುವ ಪ್ರಾಬಲ್ಯವನ್ನು ತಡೆಗಟ್ಟುವಲ್ಲಿ ಅಫ್ಘಾನ್ ಸರಕಾರಿ ಪಡೆಗಳು ಏದುಸಿರು ಬಿಡುತ್ತಿವೆ.