ಐದನೆ ಬಾರಿ ಬ್ಯಾಲನ್ ಡಿ 'ಓರ್ ಜಯಿಸಿದ ಅರ್ಜೆಂಟೀನದ ಮೆಸ್ಸಿ

ಝುರಿಕ್, ಜ.12; ಅಜೆಂಟೀನ ಮತ್ತು ಬಾರ್ಸಿಲೋನಾದ ಸೂಪರ್ ಸ್ಟಾರ್ ಫುಟ್ಬಾಲ್ ಆಟಗಾರ ಲಿಯೊನೆಲ್ ಮೆಸ್ಸಿ ಐದನೆ ಬಾರಿ ಫಿಫಾದ ಪ್ರತಿಷ್ಠಿತ ಬ್ಯಾಲನ್ ಡಿ'ಓರ್ ಪ್ರಶಸ್ತಿ ಜಯಿಸಿದ್ದಾರೆ.
ಇದರೊಂದಿಗೆ ಪೋರ್ಚುಗಲ್‌ನ ಪ್ರತಿಭಾವಂತ ಆಟಗಾರ ಕ್ರಿಸ್ತಿಯಾನೊ ರೊನಾಲ್ಡೊ ಸತತ ಮೂರನೆ ಬಾರಿ ಪ್ರಶಸ್ತಿ ಗೆಲ್ಲುವ ಅವಕಾಶ ಕೈ ಜಾರಿದೆ.
ಸೋಮವಾರ ರಾತ್ರಿ ನಡೆದ ಸಮಾರಂಭದಲ್ಲಿ ಫಿಫಾದ ಪ್ರತಿಷ್ಠಿತ ವರ್ಷದ ಪ್ರಶಸ್ತಿಯನ್ನು ಮೆಸ್ಸಿ ಬಾಚಿಕೊಂಡರು. ಮೆಸ್ಸಿ 2009ರಿಂದ 2012ರ ತನಕ ನಾಲ್ಕು ಬಾರಿ ಪ್ರಶಸ್ತಿ ಗೆದ್ದುಕೊಂಡಿದ್ದರು. ಬಳಿಕ ಎರಡು ವರ್ಷ ಈ ಪ್ರಶಸ್ತಿ ಕ್ರಿಸ್ತಿಯಾನೊ ರೊನಾಲ್ಡೊ ಪಾಲಾಗಿತ್ತು.
ಪ್ರಶಸ್ತಿಯ ಆಯ್ಕೆಗೆ ನಡೆದ ಮತದಾನದಲ್ಲಿ ಮೆಸ್ಸಿ ಶೇ 41.33ವೋಟಿಂಗ್ ಪಾಯಿಂಟ್ ದಾಖಲಿಸಿದರು. ಎದುರಾಳಿ ರೊನಾಲ್ಡೊ (ಶೇ 27.76 ) ಎರಡನೆ ಮತ್ತು ಬ್ರೆಝಿಲ್‌ನ ನೇಮಾರ್ (ಶೇ 7.86 ) ಮೂರನೆ ಸ್ಥಾನ ಪಡೆದರು. ಫಿಫಾದ ಸದಸ್ಯ ರಾಷ್ಟ್ರಗಳ ತಂಡದ ನಾಯಕರು,ಮತ್ತು ಕೋಚ್, ಆಹ್ವಾನಿತ ಪತ್ರಕರ್ತರು ಮತ ಚಲಾಯಿಸಿದ್ದರು.
ಅಮೆರಿಕನ್ ಆಟಗಾರ್ತಿ ಕಾರ್ಲಿಲಾಯ್ಡ ಮಹಿಳಾ ವರ್ಷದ ಫುಟ್‌ಬಾಲರ್ ಪ್ರಶಸ್ತಿಗೆದ್ದಿದ್ದಾರೆ. 33 ವರ್ಷದ ಕಾರ್ಲಿ, ಕಳೆದ ವರ್ಷ ಜಪಾನ್ ವಿರುದ್ಧ ವಿಶ್ವಕಪ್ ಫೈನಲ್‌ನಲ್ಲಿ 5-2 ಗೋಲುಗಳ ಜಯ ಸಾಧಿಸುವಲ್ಲಿ ಪ್ರಮುಖ ಪಾತ್ರವಹಿಸಿ, ಹ್ಯಾಟ್ರಿಕ್ ಗೋಲುಗಳಿಸಿದ್ದರು. ಈಕೆ 2008 ಹಾಗೂ2012 ರಲ್ಲಿ ಒಲಿಂಪಿಕ್ಸ್‌ನಲ್ಲಿ ಕೂಡಾ ಗೆಲುವಿನ ಗೋಲು ಬಾರಿಸಿದ್ದರು. ಸ್ಪೇನ್‌ನ ಲೂಯಿಸ್ ಎನ್ರಿಕ್ ವರ್ಷದ ಕೋಚ್ ಪ್ರಶಸ್ತಿಗೆದ್ದಿದ್ದಾರೆ.