ಭದ್ರತಾ ಕಾರಣ: ವಿಮಾನ ಪ್ರಯಾಣಿಕರಿಗೆ ಪೇಚು

ನವದೆಹಲಿ: ಪಠಾಣ್‌ಕೋಟ್ ದಾಳಿಯ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣಗಳಲ್ಲಿ ಭದ್ರತೆ ಹೆಚ್ಚಿಸಲಾಗಿದ್ದು, ಹೆಚ್ಚುವರಿ ಭದ್ರತೆ ಕಾರಣಗಳಿಂದಾಗಿ ವಿಮಾನ ಪ್ರಯಾಣಿಕರು ಇನ್ನು ವಿಮಾನ ಹೊರಡುವುದಕ್ಕಿಂತ ಮೂರು ಗಂಟೆ ಮುಂಚಿತವಾಗಿಯೇ ತಪಾಸಣೆಗೆ ಹಾಜರಾಗಬೇಕಾಗುತ್ತದೆ. ಏರ್ ಇಂಡಿಯಾ ತನ್ನ ಎಲ್ಲ ಪ್ರಯಾಣಿಕರಿಗೆ ಈ ಸಂಬಂಧ ಮನವಿ ಮಾಡಿಕೊಂಡಿದ್ದು, ವಿಮಾನ ಪ್ರಯಾಣಿಕರಿಗೆ ಪೇಚಿನ ಸ್ಥಿತಿ ನಿರ್ಮಾಣವಾಗಿದೆ.
"ದೇಶದ ಒಳಗಿನ ಪ್ರಯಾಣಕ್ಕೆ ವಿಮಾನ ಹೊರಡುವ 75 ನಿಮಿಷ ಮುನ್ನ ಹಾಗೂ ಅಂತಾರಾಷ್ಟ್ರೀಯ ಪ್ರಯಾಣಗಳಿಗೆ 150 ನಿಮಿಷ ಮುನ್ನ ಹಾಜರಾಗುವುದು ಕಡ್ಡಾಯವಾಗಿದ್ದರೂ, ಎಲ್ಲ ಅನಾನುಕೂಲಗಳನ್ನು ತಪ್ಪಿಸುವ ಸಲುವಾಗಿ ಮೂರು ಗಂಟೆ ಮುಂಚಿತವಾಗಿ ಹಾಜರಾಗಬೇಕು" ಎಂದು ಪ್ರಕಟಣೆ ಹೇಳಿದೆ.
ಪಠಾಣ್‌ಕೋಟ್ ದಾಳಿಯ ಹಿನ್ನೆಲೆಯಲ್ಲಿ ಪ್ರಯಾಣಿಕರ ಬ್ಯಾಗೇಜ್‌ಗಳನ್ನು ಕೂಡಾ ತೀವ್ರ ತಪಾಸಣೆಗೆ ಗುರಿಪಡಿಸಲಾಗುತ್ತದೆ. ಈ ಪ್ರಕ್ರಿಯೆಯಿಂದಾಗಿ ವಿಮಾನಗಳಿಗೆ ವಿಳಂಬವಾಗುವುದನ್ನು ತಡೆಯಲು ಎಲ್ಲ ಪ್ರಯಾಣಿಕರು ಸಾಕಷ್ಟು ಮುಂಚಿತವಾಗಿಯೇ ಕೌಂಟರ್‌ಗಳಲ್ಲಿ ಚೆಕ್ ಇನ್ ಆಗಬೇಕು ಎಂದು ಸೂಚಿಸಲಾಗಿದೆ.





