ಜ.13ರಂದು ಬೆಂಗಳೂರಿನಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವ ಪ್ಯಾಲೆಸ್ತೀನ್ ಸಂಘಟನೆಯ ಜೊತೆ ಸಂವಾದ
ಬೆಂಗಳೂರು: ಪತ್ರಕರ್ತರ ಅಧ್ಯಯನ ಕೇಂದ್ರ ಮತ್ತು ಪ್ರೆಸ್ ಕ್ಲಬ್, ಬೆಂಗಳೂರು ಸಹಭಾಗಿತ್ವದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವ ಪ್ಯಾಲೆಸ್ತೀನ್ ಸಾಂಸ್ಕೃತಿಕ ಸಂಘಟನೆ ‘ದ ಫ್ರೀಡಮ್ ಥಿಯೇಟರ್’ ಜೊತೆಗೆ ಸಂವಾದವು ಜ.13ರಂದು ಬೆಳಗ್ಗೆ 11ಕ್ಕೆ ಪ್ರೆಸ್ ಕ್ಲಬ್, ಬೆಂಗಳೂರುನಲ್ಲಿ ನಡೆಯಲಿದೆ.
ಫೈಸಲ್ ಅಬು ಅಲ್ಲಾಜ್, ಪ್ಯಾಲೆಸ್ತೀನ್; ಸುಧನ್ವ ದೇಶ್ ಪಾಂಡೆ, ನವದೆಹಲಿ; ಸುರೇಂದ್ರ ಟಿ., ಬೆಂಗಳೂರು; ಶ್ರೀಧರ್, ಬೆಂಗಳೂರು ಭಾಗವಹಿಸುವರು.
20ನೇ ಶತಮಾನದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿಯೂ ಯಶಸ್ಸು ಕಾಣದ ನೆಲವೆಂದರೆ ಅದು ಪ್ಯಾಲೆಸ್ತೀನ್ ಮಾತ್ರ. ಇಸ್ರೇಲೀಯರ ನಿರಂತರ ಅತಿಕ್ರಮಣಗಳಿಂದಾಗಿ ಪ್ಯಾಲೆಸ್ತೀನ್ ಇಂದು ವಿನಾಶದ ತುದಿ ತಲುಪಿದೆ. 1936 ರಿಂದ 70 ಲಕ್ಷ ಪ್ಯಾಲೇಸ್ತೀಯನ್ನರು ನಿರಾಶ್ರಿತರಾಗಿದ್ದಾರೆ. 20 ಲಕ್ಷ ಜನ ಪ್ರಾಣ ತೆತ್ತಿದ್ದಾರೆ. ಇನ್ನೂ ಈ ನರಮೇಧ ನಡೆಯುತ್ತಲೇ ಇದೆ. ಇಷ್ಟಾಗಿಯೂ ಎದೆಗುಂದದೆ ಅಲ್ಲಿನ ಜನ ತಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದಾರೆ. ಅದಕ್ಕಾಗಿ ಸಾಧ್ಯವಿರುವ ಎಲ್ಲ ಮಾಧ್ಯಮಗಳನ್ನೂ ಬಳಸಿಕೊಳ್ಳುತ್ತಿದ್ದಾರೆ. “ದ ಫ್ರೀಡಮ್ ಥಿಯೇಟರ್” ಈ ಹೋರಾಟದ ಸಾಂಸ್ಕೃತಿಕ ಅಂಗಭಾಗ.
ಪ್ಯಾಲೆಸ್ತೀನಿನ ಫ್ರೀಡಮ್ ಥಿಯೇಟರಿನೊಂದಿಗೆ ಸಾಂಸ್ಕೃತಿಕವಾಗಿ ಬೆಸೆದುಕೊಂಡಿರುವ ದೆಹಲಿಯ ಜನ ನಾಟ್ಯ ಮಂಚ್, ಹೋರಾಟಕ್ಕೆ ಬೆಂಬಲವಾಗಿ ಭಾರತದಾದ್ಯಂತ “ಫ್ರೀಡಮ್ ಜಾಥಾ” ಹೊರಟಿದೆ.
ಈ ಸಂದರ್ಭದಲ್ಲಿ ಪತ್ರಕರ್ತರ ಅಧ್ಯಯನ ಕೇಂದ್ರವು ಬೆಂಗಳೂರು ಪ್ರೆಸ್ ಕ್ಲಬ್ ಸಹಭಾಗಿತ್ವದಲ್ಲಿ ಫ್ರೀಡಮ್ ಜಾಥಾದೊಂದಿಗೆ ಸಂವಾದ ಹಮ್ಮಿಕೊಂಡಿದೆ. ಜನವರಿ 13ರಂದು ಪ್ರೆಸ್ ಕ್ಲಬ್ ನಲ್ಲಿ ಆಯೋಜನೆಗೊಂಡಿರುವ ಈ ಸಂವಾದದಲ್ಲಿ ಫ್ರೀಡಮ್ ಥಿಯೇಟರ್ ಮುಖ್ಯಸ್ಥರಾದ ಫೈಸಲ್ ಅಬು ಅಲ್ಲಾಜ್, ಜನನಾಟ್ಯ ಮಂಚ್ ಮುಖ್ಯಸ್ಥರಾದ ಸುಧನ್ವ ದೇಶ್ ಪಾಂಡೆ, ಸಮುದಾಯ ಸಂಘಟನೆಯ ಕಾರ್ಯದರ್ಶಿ ಸುರೇಂದ್ರ ಟಿ ಹಾಗೂ ಪ್ರಸ್ ಕ್ಲಬ್ ಅಧ್ಯಕ್ಷರಾದ ಶ್ರೀಧರ್ ಭಾಗವಹಿಸಲಿದ್ದಾರೆ ಎಂದು ಪತ್ರಕರ್ತರ ಅಧ್ಯಯನ ಕೇಂದ್ರ ಮತ್ತು ಪ್ರೆಸ್ ಕ್ಲಬ್, ಬೆಂಗಳೂರು ಪ್ರಕಟನೆಯಲ್ಲಿ ತಿಳಿಸಿದೆ.







