ಜಲ್ಲಿಕಟ್ಟು ಕ್ರೀಡೆಗೆ ಸುಪ್ರೀಮ್ ತಡೆ

ಹೊಸದಿಲ್ಲಿ, ಜ.12: ಜಲ್ಲಿಕಟ್ಟು ಹಾಗೂ ಎತ್ತಿನಗಾಡಿ ಸ್ಪರ್ಧೆಗೆ ಅವಕಾಶ ನೀಡಿ ಕೇಂದ್ರ ಸರಕಾರ ಇತ್ತೀಚೆಗೆ ಹೊರಡಿಸಿರುವ ಆದೇಶಕ್ಕೆ ಸುಪ್ರೀಮ್ ಕೋರ್ಟ್ ಇಂದು ತಡೆಯಾಜ್ಞೆ ನೀಡಿದೆ.
ಜಲ್ಲಿಕಟ್ಟು ಸ್ಪರ್ಧೆಯಿಂದ ಪ್ರಾಣಿಗಳಿಗೆ ಹಿಂಸೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಜಲ್ಲಿಕಟ್ಟು ಸ್ಪರ್ಧೆ ಬೇಡ ಎಂದು ಕೇಂದ್ರ ಸರಕಾರದ ಆದೇಶಕ್ಕೆ ತಡೆಯಾಜ್ಞೆ ಕೋರಿ ಇತರ ಸಂಘಟನೆಗಳೊಟ್ಟಿಗೆ ಪ್ರಾಣಿ ದಯಾ ಸಂಘಟನೆ (ಪೇಟಾ) ಸೋಮವಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.
ಭಾರತದ ಪ್ರಾಣಿ ಕಲ್ಯಾಣ ಮಂಡಳಿ (ಎಡಬ್ಲ್ಯುಬಿಐ) ಹಾಗೂ ಅದರ ಇಬ್ಬರು ಸದಸ್ಯರ ನೇತೃತ್ವದಲ್ಲಿ ಸುಪ್ರೀಮ್ ಕೋರ್ಟ್‌ಗೆ ಪೇಟಾ ಅರ್ಜಿ ಸಲ್ಲಿಸಿತ್ತು. ಸೌಮ್ಯಾ ರೆಡ್ಡಿ, ರಾಧಾ ರಾಜನ್ ಹಾಗೂ ಗೌರಿ ಮೌಲೇಖಿ ಅವರು ವ್ಯಕ್ತಿಗತವಾಗಿ ಅರ್ಜಿ ಸಲ್ಲಿಸಿದ್ದರು.
ಇಂದು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ದೀಪಕ್ ಮಿಶ್ರಾ ಮತ್ತು ನ್ಯಾಯಮೂರ್ತಿ ರಮಣ ಅವರನ್ನೊಳಗೊಂಡ ಪೀಠ ಕೇಂದ್ರ ಪರಿಸರ ಇಲಾಖೆಯ ಆದೇಶಕ್ಕೆ ತಡೆ ವಿಧಿಸಿತು. ಇದರ ಜೊತೆಗೆ ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಈ ಸಂಬಂಧ ನೋಟಿಸ್ ನೀಡಿ ನಾಲ್ಕು ವಾರಗಳಲ್ಲಿ ಉತ್ತರಿಸುವಂತೆ ನ್ಯಾಯಪೀಠ ಆದೇಶ ನೀಡಿದೆ.





