ಹೆಲ್ಮೆಟ್ ಗೊಂದಲ!
ಸಾರಿಗೆ ಸಚಿವರು ಜನವರಿ ಹನ್ನೆರಡರಿಂದ ಜಾರಿಯಾಗುವಂತೆ ಮಾಡಿದ ‘ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ’ ಉಲ್ಲಂಘಿಸಿದರೆ ‘ನೂರು ರೂಪಾಯಿ ದಂಡ’ ಎಂಬ ನಿಯಮವು ಬೈಕ್ ಸವಾರರಲ್ಲಿ ಗೊಂದಲವನ್ನು ಹುಟ್ಟಿಸಿದೆ.
ಹೆಲ್ಮೆಟ್ ಧರಿಸಿದರೆ ಪ್ರಾಣ ಉಳಿಸಬಹುದೆಂಬ ವಾದವು ಸರಿಯಾದರೂ ರಾಜ್ಯದ ಕಳಪೆ ರಸ್ತೆಗಳ ದೊಡ್ಡ ದೊಡ್ಡ ಹೊಂಡಗಳಿಂದಾಗಿಯೂ ಹಲವಾರು ಅಪಘಾತಗಳು ನಡೆದು ಎಷ್ಟೋ ಜನರು ಪ್ರಾಣ ಕಳಕೊಂಡಿಲ್ಲವೇ..? ಸರಕಾರಗಳು ಅತ್ಯುತ್ತಮ ಗುಣಮಟ್ಟದ ರಸ್ತೆಗಳನ್ನು ನೀಡಲು ಯಾಕೆ ವಿಫಲವಾಗುತ್ತಿವೆ..? ಆ ವಿಷಯದತ್ತ ಯಾಕೆ ಗಮನ ಹರಿಸುವುದಿಲ್ಲ.?
ಕೋಟಿ ರೂಪಾಯಿಗಳ ಹೆಲ್ಮೆಟ್ ವ್ಯವಹಾರಕ್ಕೆ ಹಾಗೂ ಹಿಂಬದಿ ಸವಾರ ಹೆಲ್ಮೆಟ್ ಧರಿಸಿಲ್ಲ ಎಂಬ ನೆಪವೊಡ್ಡಿ ಅಲ್ಲಲ್ಲಿ ಹಣ ಪೀಕಿಸುವ ದಂಧೆಗೆ ಇದು ಉಪಕಾರವಾದೀತೇ ಹೊರತು ಬೈಕ್ ಸವಾರರಿಗಲ್ಲ. ಇಂದು ಗ್ರಾಮೀಣ ಪ್ರದೇಶದಿಂದ ಪಟ್ಟಣಗಳ ಜನರ ವರೆಗೆ ದ್ವಿಚಕ್ರವಾಹನಗಳಿಂದ ಹೆಚ್ಚು ಪ್ರಯೋಜನ ಪಡೆಯುತ್ತಿದ್ದಾರೆ. ಹೆಚ್ಚು ಕಮ್ಮಿ ಪ್ರತಿಯೊಂದು ಮನೆಯಲ್ಲೂ ದ್ವಿಚಕ್ರವಾಹನ ಇದೆ ಎನ್ನಬಹುದು. ಶಾಲೆಯಿಂದ ಮಕ್ಕಳನ್ನು ಕರೆತರಲು, ಕೆಲಸಕ್ಕೆ ಹೋಗಲು, ಪೇಟೆಯಿಂದ ಸಾಮಾನು ತರಲು ಅಗತ್ಯ ಕಾರ್ಯಗಳಿಗೆ ಅತ್ತ ಇತ್ತ ಓಡಾಡಲು ಇನ್ನೂ ಏನೇನೋ ಕೆಲಸಗಳಿಗಾಗಿ ದ್ವಿಚಕ್ರವಾಹನದಿಂದ ಸಿಗುವ ಉಪಕಾರ ಅಷ್ಟಿಷ್ಟಲ್ಲ. ಆದರೆ ಈಗ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ ಮಾಡಿದರೆ ಅದರ ತೊಂದರೆ ಅನುಭವಿಸುವುದು ಮುಂಬದಿ ಸವಾರನಾಗಿರುತ್ತಾನೆ.
ಆದ್ದರಿಂದ ಸಾರಿಗೆ ಸಚಿವರು ಹಿಂಬದಿ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಮಾಡಿರುವುದನ್ನು ಕೂಡಲೇ ಮರು ಪರಿಶೀಲಿಸಬೇಕಾಗಿದೆ.





