ದ.ಕ ಬಂಡವಾಳ ಹೂಡಿಕೆದಾರರ ಸಮಾವೇಶ 33 ಕಂಪೆನಿಗಳಿಂದ 12,000 ಕೋ.ರೂ. ಹೂಡಿಕೆ ಅಂದಾಜು 5,000 ಮಂದಿಗೆ ಉದ್ಯೋಗ ನಿರೀಕ್ಷೆ
ಮಂಗಳೂರು, ಜ.12: ದ.ಕ. ಜಿಲ್ಲಾಡಳಿತ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಯೋಗದಲ್ಲಿ ಇಂದು ನಗರದ ಟಿಎಂಎ ಪೈ ಕನ್ವೆನ್‌ಶನ್ ಸೆಂಟರ್‌ನಲ್ಲಿ ಆಯೋಜಿಸಲಾದ ದ.ಕ. ಜಿಲ್ಲಾ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಜಿಲ್ಲೆಯ 33ಕ್ಕೂ ವಿವಿಧ ಉದ್ಯಮ ಕಂಪೆನಿಗಳು 12,000 ಕೋ.ರೂ. ಬಂಡವಾಳ ಹೂಡಿಕೆಗೆ ಮುಂದಾಗಿವೆ. ನಾಲ್ಕು ಎಕರೆ ಪ್ರದೇಶದಲ್ಲಿ ಸ್ಥಾಪನೆಯಾಗಲಿರುವ ದಿಯಾ ಸಿಸ್ಟಮ್ಸ್‌ನ ಮಂಗಳೂರು ಪ್ರೈವೇಟ್ ಲಿಮಿಟೆಡ್‌ನ ಐಟಿ ಸೆಂಟರ್ ಮತ್ತು ಬಿಪಿಒ ಸರ್ವಿಸ್ ಮೂಲಕ 1,500 ಉದ್ಯೋಗವಕಾಶದ ಗುರಿ ಹೊಂದಿದ್ದು, ಡಾ.ಬಿ.ಆರ್. ಶೆಟ್ಟಿ ಅಬುದಾಬಿ ಸಂಸ್ಥೆಯು ಫರ್ಮಾಸುಟಿಕಲ್ಸ್ ಉದ್ದಿಮೆಯ ಮೂಲಕ 500 ಉದ್ಯೋಗಾವಕಾಶವನ್ನು ಕಲ್ಪಿಸಲಿದೆ.
ಐಒಸಿಎಲ್ ಸಂಸ್ಥೆಯು ಎಲ್‌ಪಿಜಿ ಬಾಟ್ಲಿಂಗ್ ಸ್ಥಾವರ ಉದ್ದಿಮೆಯ ಮೂಲಕ 400 ಉದ್ಯೋಗಾವಕಾಶ, ನಿಯಾಝ್ ಸೀ ಫುಡ್ ಎಕ್ಸ್‌ಪೋರ್ಟ್ಸ್ 25 ಎಕರೆಯಲ್ಲಿ ಸಮುದ್ರ ಆಹಾರ ಉತ್ಪಾದನಾ ಘಟಕದ ಮೂಲಕ 350 ಮಂದಿಗೆ ಉದ್ಯೋಗಾವಕಾಶ ಕಲ್ಪಿಸಲಿದೆ. ಕಾಂತಿ ಅಪಾರೆಲ್ ಸಂಸ್ಥೆಯು ಗಾರ್ಮೆಂಟ್ ಸ್ಟಿಚ್ಚಿಂಗ್ ಮತ್ತು ಫಿನಿಶಿಂಗ್ ಉದ್ಯಮದ ಮೂಲಕ 300 ಮಂದಿಗೆ ಉದ್ಯೋಗವಕಾಶ, ರಿಲಾಯೆಬಲ್ ಕ್ಯಾಶ್ಯೂ ಇಂಡಸ್ಟ್ರೀಸ್ , ಗೇರುಬೀಜ ಸಂಸ್ಕರಣೆ ಉದ್ಯಮದ ಮೂಲಕ 225 ಮಂದಿಗೆ ಉದ್ಯೋಗ ಕಲ್ಪಿಸುವ ಉದ್ದೇಶ ಹೊಂದಿದೆ. ಪ್ರಸ್ತುತ ಹೂಡಿಕೆಗೆ ಮುಂದೆ ಬಂದಿರುವ 33 ವಿವಿಧ ಕಂಪೆನಿಗಳ ಮೂಲಕ ಒಟ್ಟು 4,665 ಮಂದಿಗೆ ಉದ್ಯೋಗವಕಾಶಗಳು ಲಭ್ಯವಾಗುವ ನಿರೀಕ್ಷೆ ಇದೆ.
ಎನ್‌ಎಂಪಿಟಿಯಲ್ಲಿ ಲಾಂಗ್ ಟರ್ಮಿನಲ್, ರಿಫೈನರಿಗಳನ್ನು ಮೇಲ್ದರ್ಜೆಗೇರಿಸುವ ಯೋಜನೆಗಳಿಗಾಗಿ ಎಂಆರ್‌ಪಿಲ್ ಈ ಸಮಾವೇಶದಲ್ಲಿ 10,000 ಕೋ.ರೂ. ಹೂಡಿಕೆಗೆ ಮುಂದಾಗಿದ್ದು, ಸೈನ್‌ಜಿನ್ ಸಂಸ್ಥೆಯು 600 ಕೋ.ರೂ.ನ್ನು, ರುಚಿ ಸೋಯಾ ಇಂಡಸ್ಟ್ರೀಸ್ 350 ಕೋ.ರೂ., ಡಾ.ಬಿ.ಆರ್. ಶೆಟ್ಟಿ ಅಬುಧಾಬಿ ಹಾಗೂ ಡಾ.ಬಿ.ಆರ್.ಶೆಟ್ಟಿ ಸಂಸ್ಥೆಗಳು ತಲಾ 250 ಕೋ.ರೂ., ಶ್ರೀ ಅನಘ ರಿಫೈನರಿ ಪ್ರೈವೇಟ್ ಲಿಮಿಟೆಡ್ 110 ಕೋ.ರೂ., ಐಒಸಿಎಲ್ ಹಾಗೂ ಅನಿತಾ ಅರೋಮ್ಯಾಟಿಕ್ಸ್ ತಲಾ 100 ಕೋ.ರೂ., ದಿಯಾ ಸಿಸ್ಟಮ್ಸ್ ಮಂಗಳೂರು ಪ್ರೈವೇಟ್ ಲಿ. 50 ಕೋ.ರೂ., ಎವರ್‌ಮೋರ್ ರೆಸಾರ್ಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಗುರುಪುರ ಹೊಟೇಲ್ ಉದ್ಯಮಕ್ಕಾಗಿ 45 ಕೋ.ರೂ., ಸುಧಾಕರ ಪೈ ಮಂಗಳೂರು ಸ್ಟೀಲ್ ಉತ್ಪಾದನಾ ಘಟಕಕ್ಕಾಗಿ 25 ಕೋ.ರೂ., ನಿಯಾಝ್ ಸೀ ಫುಡ್ ಎಕ್ಸ್‌ಪೋರ್ಟ್ ಸಂಸ್ಥೆಯು ಸಮುದ್ರ ಮೀನು ಉತ್ಪನ್ನಗಳ ಉದ್ದಿಮೆಗಾಗಿ 20 ಕೋ.ರೂ., ಪ್ರೆಶಿಯಸ್ ಎಕ್ಸ್‌ಪೋರ್ಟ್ 12 ಕೋ.ರೂ., ಮೆಡೋಗಾರ್ನಿಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ 11.35 ಕೋ.ರೂ., ಪ್ಲಾಂಟ್ ಟೆಕ್ ಇಂಟರ್‌ನ್ಯಾಷನಲ್ ಲಿಮಿಟೆಡ್ 8 ಕೋ.ರೂ., ಜನನಿಯಲ್ ಎಂಟರ್‌ಪ್ರೈಸಸ್ 8 ಕೋ.ರೂ., ಗಣಪತಿ ಆರ್. ಹೆಗ್ಡೆ ಗುಜರಾತ್ 7 ಕೋ.ರೂ., ಮರಿಯಮ್ ಪ್ಯಾನಲ್ಸ್ ಬೈಕಂಪಾಡಿ 6.50 ಕೋ.ರೂ., ಅಕ್ವಾಮ್ಯಾಟರ್ ಸೊಲ್ಯೂಷನ್ಸ್ 5.50 ಕೋ.ರೂ., ಆಯೆಷಾ ಪ್ಯಾನಲ್ಸ್ 5 ಕೋ. ರೂ., ರಿಲಾಯಬಲ್ ಕ್ಯಾಶ್ಯೂ ಇಂಡಸ್ಟ್ರೀಸ್ 4 ಕೋ.ರೂ., ಕಾಂತಿ ಅಪಾರೆಲ್ 3.50 ಕೋ.ರೂ., ಅಮ್ಯಾಕೋ ಮ್ಯಾನುಫ್ಯಾಕ್ಚರಿಂಗ್ ಆ್ಯಂಡ್ ಇಂಡಸ್ಟ್ರಿಯಲ್ ಸರ್ವಿಸ್ ಪ್ರೈವೇಟ್ ಲಿಮಿಟೆಡ್, ಎಂಜಿಯನ್ ಹೋಲ್ಡಿಂಗ್ಸ್, ಹೇರಂಬಾ ಕಂಫರ್ಟ್ಸ್ ತೊಕ್ಕೊಟ್ಟು, ಜಿಪ್ಸಿ ವುಡ್ಸ್ ಮೋಟೆಲ್ಸ್ ಬೆಳುವಾಯಿ, ಸಾಯಿ ಇಂಟರ್‌ನ್ಯಾಷನಲ್ ಪ್ರೈ. ಲಿ. ಪುತ್ತೂರು, ವಿಕ್ರಮ್ ರೆಸಿಡೆನ್ಸಿ ಪುತ್ತೂರು, ವಿವೇಕ್ ಟ್ರೇಡರ್ಸ್ ಧನ್ವಂತರಿ ನಗರ್ ಮೊದಲಾದ ಕಂಪೆನಿಗಳು ತಲಾ 3 ಕೋ.ರೂ.ನ್ನು, ಬೇಲೈನ್ ಪ್ಲಾಸ್ಟಿಕ್ ಇಂಡಸ್ಟ್ರೀಸ್ 2.50 ಕೋ.ರೂ. ಹಾಗೂ ಸ್ಯಾಂಕ್ಟಮ್ ಡೆಂಟಲ್ ಸ್ಪಾ ಸೋಮೇಶ್ವರ 2 ಕೋ.ರೂ.ನ್ನು ವಿವಿಧ ಉದ್ದಿಮೆಗಳಿಗಾಗಿ ಹೂಡಿಕೆ ಮಾಡಲು ಮುಂದಾಗಿವೆ. ಸಮಾವೇಶದಲ್ಲಿ ಕಂಪೆನಿಗಳ ಮುಖ್ಯಸ್ಥರನ್ನು ಅಭಿನಂದಿಸಲಾಯಿತು.







