ಸಿರಿಯ ಉಪಪ್ರಧಾನಿ ಜೊತೆ ಸುಷ್ಮಾ ಸ್ವರಾಜ್ ಮಾತುಕತೆ
ಹೊಸದಿಲ್ಲಿ,ಜ.12: ಭಾರತ ಪ್ರವಾಸದಲ್ಲಿರುವ ಸಿರಿಯದ ಉಪಪ್ರಧಾನಿ ಹಾಗೂ ವಿದೇಶಾಂಗ ಸಚಿವ ವಾಲಿದ್ ಅಲ್ ವೌಲಿಮ್ ಅವರನ್ನು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಮಂಗಳವಾರ ಭೇಟಿಯಾಗಿ, ದ್ವಿಪಕ್ಷೀಯ ಹಿತಾಸಕ್ತಿಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚಿಸಿದರು.
ಮೂರು ದಿನಗಳ ಭಾರತ ಭೇಟಿಗಾಗಿ ಸೋಮವಾರ ಹೊಸದಿಲ್ಲಿಗೆ ಆಗಮಿಸಿದ ವಾಲಿದ್ ಅಲ್ ವೌಲಿಮ್,ತನ್ನ ಪ್ರವಾಸದ ಸಂದರ್ಭದಲ್ಲಿ ಇತರ ಭಾರತೀಯ ನಾಯಕರನ್ನು ಭೇಟಿಯಾಗುವ ನಿರೀಕ್ಷೆಯಿದೆ. ಯುದ್ಧಪೀಡಿತ ಸಿರಿಯದಲ್ಲಿ ಶಾಂತಿ ಸ್ಥಾಪನೆಗಾಗಿ ವಿಶ್ವಸಂಸ್ಥೆ ನೂತನ ಉಪಕ್ರಮಗಳನ್ನು ಕೈಗೊಂಡಿರುವ ಹಿನ್ನೆಲೆಯಲ್ಲಿ, ವಾಲಿದ್ ಅವರ ಭಾರತ ಭೇಟಿಯು ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿದೆ. ಭೀಕರ ಅಂತರ್ಯುದ್ಧದಿಂದ ಜರ್ಝರಿತವಾಗಿರುವ ಸಿರಿಯದಲ್ಲಿ,ಕಳೆದ ನಾಲ್ಕು ವರ್ಷಗಳಲ್ಲಿ 3 ಲಕ್ಷಕ್ಕೂ ಅಧಿಕ ಮಂದಿ ಹಿಂಸೆಗೆ ಬಲಿಯಾಗಿದ್ದಾರೆ ಹಾಗೂ ಎಪ್ಪತ್ತು ಲಕ್ಷಕ್ಕೂ ಅಧಿಕ ಮಂದಿ ಇತರ ದೇಶಗಳಿಗೆ ಪಲಾಯನಗೈದಿದ್ದಾರೆ. ಯುದ್ಧದ ಪರಿಣಾಮವಾಗಿ, ಯುರೋಪಿನ ರಾಷ್ಟ್ರಗಳಿಗೆ ಸಿರಿಯ ನಿರಾಶ್ರಿತರ ಪ್ರವಾಹವೇ ಹರಿದುಬರುತ್ತಿದೆ.
ಪ್ರಧಾನಿ ನರೇಂದ್ರ ಮೋದಿ,ಕಳೆದ ಡಿಸೆಂಬರ್‌ನಲ್ಲಿ ಮಾಸ್ಕೊಗೆ ಭೇಟಿ ನೀಡಿದ ಸಂದರ್ಭದಲ್ಲಿ, ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಜೊತೆಗೆ, ಐಸಿಸ್ ಭಯೋತ್ಪಾದಕ ಗುಂಪಿನ ಹೆಚ್ಚುತ್ತಿರುವ ಬೆದರಿಕೆ ಹಾಗೂ ಸಿರಿಯ ಬಿಕ್ಕಟ್ಟಿನ ಬಗ್ಗೆ ವಿಸ್ತೃತವಾದ ಚರ್ಚೆ ನಡೆಸಿದ್ದರು. ರಶ್ಯವು, ಬಶರ್ ಅಲ್ ಅಸ್ಸಾದ್ ನೇತೃತ್ವದ ಸಿರಿಯ ಸರಕಾರದ ಪ್ರಬಲ ಬೆಂಬಲಿಗ ರಾಷ್ಟ್ರವಾಗಿದೆ.
ಪ್ಯಾರಿಸ್ ಭಯೋತ್ಪಾದಕ ದಾಳಿ ಘಟನೆಯ ಬಳಿಕ, ಐಸಿಸ್‌ನ ಚಟುವಟಿಕೆಗಳನ್ನು ಮಟ್ಟಹಾಕಲು ಅಮೆರಿಕ, ಬ್ರಿಟನ್ ಸೇರಿದಂತೆ ಹಲವು ಪಾಶ್ಚಾತ್ಯ ರಾಷ್ಟ್ರಗಳು, ಸಿರಿಯದ ಜೊತೆ ನೇರ ಅಥವಾ ಪರೋಕ್ಷವಾಗಿ ಸಿರಿಯ ಸರಕಾರದ ದೊತೆ ಸಂಪರ್ಕವನ್ನು ಬೆಳೆಸಿವೆ. ಸಿರಿಯ ಅಧ್ಯಕ್ಷರ ವಿಶೇಷ ಸಲಹೆಗಾರರಾದ ಬುಥಿನಾ ಶಬಾನ್, 2013ರ ಮಾರ್ಚ್‌ನಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು.







