ಲೈಂಗಿಕ ಅಲ್ಪಸಂಖ್ಯಾತರಿಗೆ ಕಿರುಕುಳ ಪೊಲೀಸ್ ಕಾಯ್ದೆಗೆ ತಿದ್ದುಪಡಿ: ಹೆಕೋರ್ಟ್‌ಗೆ ಸರಕಾರದ ಸ್ಪಷ್ಟನೆ
ಬೆಂಗಳೂರು, ಜ.12: ಲೈಂಗಿಕ ಅಲ್ಪಸಂಖ್ಯಾತರಿಗೆ ಕಿರುಕುಳ ನೀಡುವ ಕರ್ನಾಟಕ ಪೊಲೀಸ್ ಕಾಯ್ದೆ(36)ಗೆ ತಿದ್ದುಪಡಿ ತರಲಾಗುವುದು ಎಂದು ಹೈಕೋರ್ಟ್‌ಗೆ ಸರಕಾರ ಹೇಳಿದೆ. ಕರ್ನಾಟಕ ಲೈಂಗಿಕ ಅಲ್ಪಸಂಖ್ಯಾತರ ವೇದಿಕೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯ ಮೂರ್ತಿ ಎಸ್.ಕೆ.ಮುಖರ್ಜಿ ಮತ್ತು ನ್ಯಾಯಮೂರ್ತಿ ರವಿ ಮಳೀಮಠ ಅವರಿದ್ದ ನ್ಯಾಯಪೀಠ ಕರ್ನಾಟಕ ಪೊಲೀಸ್ ಕಾಯ್ದೆ ರದ್ದತಿಗೆ ಸಂಬಂಧಿಸಿದಂತೆ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿತ್ತು. ಮಂಗಳವಾರ ಸರಕಾರದ ಪರ ವಕೀಲರು ಕರ್ನಾಟಕ ಪೊಲೀಸ್ ಕಾಯ್ದೆಯಲ್ಲಿ ಅಳವಡಿಸಿರುವ ತೃತೀಯ ಲಿಂಗಿ ಎಂಬ ಪದವನ್ನು ತೆಗೆದು ಹಾಕಲಾಗುವುದು. ಈ ಪದವನ್ನು ತೆಗೆದು ಹಾಕಲು ಹೈಕೋರ್ಟ್‌ಪೀಠ ಆರು ತಿಂಗಳುಗಳ ಕಾಲ ಸಮಯಾವಕಾಶವನ್ನು ನೀಡಬೇಕೆಂಬ ಮನವಿ ಮಾಡಿದರು. ನ್ಯಾಯಪೀಠ ವಾದ ಪ್ರತಿವಾದವನ್ನು ಆಲಿಸಿ ತೃತೀಯ ಲಿಂಗಿ ಎಂಬ ಪದವನ್ನು ತೆಗೆದು ಹಾಕಲು ಸಮಯಾವಕಾಶವನ್ನು ನೀಡಿತ್ತಲ್ಲದೇ, ಅರ್ಜಿಯನ್ನೂ ವಜಾಗೊಳಿಸಿತು.
ಹಿನ್ನೆಲೆ: ಸ್ತ್ರೀ ಮತ್ತು ಪುರುಷರನ್ನು ಬೇರೆಯವರು ಲೈಂಗಿಕ ಕಾರ್ಯಕರ್ತರನ್ನಾಗಿ ಪರಿವರ್ತಿಸಿದರೂ ಲೈಂಗಿಕ ಕಾರ್ಯಕರ್ತರೆ ಈ ಕೆಲಸ ಮಾಡುತ್ತಾರೆಂಬ ಆರೋಪ ವಿದೆ. ಅಲ್ಲದೆ, ಕರ್ನಾಟಕ ಪೊಲೀಸ್ ಕಾಯ್ದೆ ಕೂಡ ಲೈಂಗಿಕ ಕಾರ್ಯಕರ್ತರ ಮೇಲೆ ನಿಗಾಯಿಡುವ ಹಾಗೂ ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿ ರುಜುವನ್ನು ಮಾಡಿ ಬರಬೇಕಾದ ಅಂಶಗಳನ್ನು ಒಳಗೊಂಡಿದೆ. ಇದರಿಂದ, ನಮಗೆ ತೊಂದರೆಯಾಗುತ್ತಿದ್ದು, ಈ ಕಾಯ್ದೆಯನ್ನು ರದ್ದುಗೊಳಿಸಬೇಕೆಂದು ಲೈಂಗಿಕ ಕಾರ್ಯಕರ್ತರು ಹೈಕೋರ್ಟ್ ಮೆಟ್ಟಿಲೇರಿದ್ದರು.





