ಮೆಸ್ಸಿಗೆ ಐದನೆ ‘ಬ್ಯಾಲನ್ ಡಿ’ಒರ್’ ಗೌರವ

ಝೂರಿಕ್, ಜ.12: ಅರ್ಜೆಂಟೀನ ಹಾಗೂ ಬಾರ್ಸಿಲೋನದ ಸ್ಟಾರ್ ಫಾರ್ವರ್ಡ್ ಆಟಗಾರ ಲಿಯೊನೆಲ್ ಮೆಸ್ಸಿ ಫಿಫಾದ ವರ್ಷದ ಆಟಗಾರನಿಗೆ ನೀಡುವ ‘ಬ್ಯಾಲನ್ ಡಿ’ಒರ್’ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮೆಸ್ಸಿ ಐದನೆ ಬಾರಿ ಫಿಫಾದ ಪ್ರತಿಷ್ಠಿತ ಪ್ರಶಸ್ತಿ ಪಡೆದ ವಿಶ್ವದ ಮೊದಲ ಆಟಗಾರನಾಗಿದ್ದಾರೆ.
ಸೋಮವಾರ ಇಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಫುಟ್ಬಾಲ್‌ನ ಉನ್ನತ ವೈಯಕ್ತಿಕ ಗೌರವವಾದ ಬ್ಯಾಲನ್ ಡಿ’ಒರ್ ಪ್ರಶಸ್ತಿಯನ್ನು ಮೆಸ್ಸಿ ಸ್ವೀಕರಿಸಿದರು. ಕಳೆದ ಸತತ ಎರಡು ವರ್ಷಗಳಿಂದ ಪೋರ್ಚುಗೀಸ್‌ನ ಕ್ರಿಸ್ಟಿಯಾನೊ ರೊನಾಲ್ಡೊ ಈ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದರು.
ಕಳೆದ ವರ್ಷ ಬಾರ್ಸಿಲೋನ ಕ್ಲಬ್ ಐದು ಪ್ರಮುಖ ಟೂರ್ನಿಗಳನ್ನು ಜಯಿಸಲು ನೆರವಾಗಿದ್ದ ಮೆಸ್ಸಿ ರಿಯಲ್ ಮ್ಯಾಡ್ರಿಡ್‌ನ ರೊನಾಲ್ಡೊರನ್ನು ಸ್ಪರ್ಧೆಯಲ್ಲಿ ಹಿಂದಿಕ್ಕಿದರು. ಮೆಸ್ಸಿ 41.33 ಶೇ.ರಷ್ಟು ಮತಗಳನ್ನು ಪಡೆದರೆ, ರೊನಾಲ್ಡೊ ಶೇ. 27.76 ಹಾಗೂ ನೇಮರ್ 7.86 ಶೇ. ಮತಗಳನ್ನು ಪಡೆದು ಕ್ರಮವಾಗಿ ಎರಡನೆ ಹಾಗೂ ಮೂರನೆ ಸ್ಥಾನ ಪಡೆದರು. ಫಿಫಾ ಸದಸ್ಯ ರಾಷ್ಟ್ರದ ಫುಟ್ಬಾಲ್ ತಂಡದ ನಾಯಕರು ಹಾಗೂ ಕೋಚ್‌ಗಳು, ವಿಶ್ವದ ಆಹ್ವಾನಿತ ಪತ್ರಕರ್ತರು ಮತದಾನ ಮಾಡಿದ್ದರು.
ಬಾರ್ಸಿಲೋನ ಕ್ಲಬ್ ಚಾಂಪಿಯನ್ಸ್ ಲೀಗ್, ಸ್ಪೇನ್‌ನ ಲಾಲಿಗ ,ಯುಇಎಫ್‌ಎ ಸೂಪರ್ ಕಪ್ ಹಾಗೂ ಕ್ಲಬ್ ವರ್ಲ್ಡ್ ಕಪ್ ಜಯಿಸಲು ಮಾರ್ಗದರ್ಶನ ನೀಡಿದ್ದ ಲೂಯಿಸ್ ಎನ್ರಿಕ್ ಶ್ರೇಷ್ಠ ಕೋಚ್ ಪ್ರಶಸ್ತಿಗೆ ಆಯ್ಕೆಯಾದರು.
ವಿಶ್ವಕಪ್ ಫೈನಲ್‌ನಲ್ಲಿ ಹ್ಯಾಟ್ರಿಕ್ ಗೋಲು ಬಾರಿಸಿದ್ದ ಅಮೆರಿಕ ತಂಡದ ನಾಯಕಿ ಕಾರಿಲ್ ಲಾಯ್ಡಿ ಶ್ರೇಷ್ಠ ಮಹಿಳಾ ಆಟಗಾರ್ತಿ ಪ್ರಶಸ್ತಿಗೆ ಭಾಜನರಾದರು. ಶ್ರೇಷ್ಠ ಮಹಿಳಾ ಕೋಚ್ ಪ್ರಶಸ್ತಿಯು ಇಂಗ್ಲೆಂಡ್‌ನ ಜಿಲ್ ಎಲ್ಲಿಸ್ ಪಾಲಾಯಿತು.
ಅತ್ಯಂತ ಆಕರ್ಷಕ ಗೋಲು ಬಾರಿಸಿದವರಿಗೆ ನೀಡುವ ಪುಸ್ಕಾಸ್ ಪ್ರಶಸ್ತಿಯು ಗೊಯನೇಷಿಯದ ವೆಂಡೆಲ್ ಲಿರಾ ಪಡೆದರು. ಲಿರಾ ಬ್ರೆಝಿಲ್ ಲೀಗ್ ಗೇಮ್‌ನಲ್ಲಿ ಅಟ್ಲೆಟಿಕೊ-ಗೋ ತಂಡದ ವಿರುದ್ಧ ಬೈಸಿಕಲ್ ಕಿಕ್ ಮೂಲಕ ಆಕರ್ಷಕ ಗೋಲು ಬಾರಿಸಿದ್ದರು. ಆನ್‌ಲೈನ್ ಮತದಾನದಲ್ಲಿ 1.6 ಮಿಲಿಯನ್ ಮತಗಳು ಲಿರಾ ಪರವಾಗಿದ್ದವು.
2015ರಲ್ಲಿ ಮೆಸ್ಸಿ ಸಾಧನೆ
ಲಿಯೊನೆಲ್ ಮೆಸ್ಸಿ 2014-15ರ ಸಾಲಿನಲ್ಲಿ ಬಾರ್ಸಿಲೋನ ತಂಡ ಲಾಲಿಗ, ಕೊಪಾ ಡೆಲ್ ರೇ ಹಾಗೂ ಚಾಂಪಿಯನ್ಸ್ ಲೀಗ್ ಟೂರ್ನಿಯನ್ನು ಜಯಿಸಲು ಪ್ರಮುಖ ಪಾತ್ರವಹಿಸಿದ್ದರು. ಬಾರ್ಸಿಲೋನ ಕ್ಲಬ್ ಸತತವಾಗಿ ಈ ಮೂರು ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು. ಮೆಸ್ಸಿ 2014-15ರಲ್ಲಿ 61 ಪಂದ್ಯಗಳನ್ನು ಆಡಿದ್ದು, 52 ಗೋಲುಗಳನ್ನು ಬಾರಿಸಿದ್ದರು. 2015ರಲ್ಲಿ ಆಡಿರುವ ಎಲ್ಲ ಆರು ಕ್ಲಬ್ ಟೂರ್ನಮೆಂಟ್‌ಗಳಲ್ಲಿ ಮೆಸ್ಸಿ ಗೋಲು ದಾಖಲಿಸಿದ್ದರು. ಬಾರ್ಸಿಲೋನ ಆರು ಟೂರ್ನಿಗಳ ಪೈಕಿ ಐದರಲ್ಲಿ ಜಯ ಸಾಧಿಸಿತ್ತು.
ಪೋರ್ಚುಗಲ್ ನಾಯಕ ರೊನಾಲ್ಡೊ 2015ರಲ್ಲಿ 57 ಪಂದ್ಯಗಳಲ್ಲಿ 57 ಗೋಲುಗಳನ್ನು ಬಾರಿಸಿದ್ದ್ದರು. ಇದರಲ್ಲಿ ಚಾಂಪಿಯನ್ಸ್ ಲೀಗ್‌ನಲ್ಲಿ ಬಾರಿಸಿದ್ದ 16 ಗೋಲುಗಳು ಸೇರಿವೆ. ‘‘ಮತ್ತೊಮ್ಮೆ ಬ್ಯಾಲನ್ ಡಿ ಒರ್ ಪ್ರಶಸ್ತಿಯನ್ನು ಸ್ವೀಕರಿಸಿದ ಈ ಕ್ಷಣ ನನ್ನ ಪಾಲಿಗೆ ವಿಶೇಷವಾದುದು. ತಾನು ಐದನೆ ಬಾರಿ ಪ್ರತಿಷ್ಠಿತ ಪ್ರಶಸ್ತಿ ಪಡೆಯುತ್ತಿರುವೆ. ಇದು ನನ್ನ ಬಾಲ್ಯದ ಕನಸಿಗಿಂತಲೂ ಮಿಗಿಲಾದುದು’’ ಎಂದು ಮೆಸ್ಸಿ ಪ್ರತಿಕ್ರಿಯಿಸಿದ್ದಾರೆ.
ಬ್ಯಾಲನ್ ಡಿ’ ಒರ್ ಪ್ರಶಸ್ತಿ ವಿಜೇತರ ಪಟ್ಟಿ
2003: ಪಾವೆಲ್ ನೆಡ್ವೆಡ್
2004: ಆಂಡ್ರಿ ಶೆವ್ಚೆೆಂಕೊ
2005: ರೊನಾಲ್ಡಿನೊ
2006: ಫ್ಯಾಬಿಯೊ ಕಾನಾವರೊ
2007: ಕಾಕಾ
2008: ಕ್ರಿಸ್ಟಿಯಾನೊ ರೊನಾಲ್ಡೊ
2009: ಲಿಯೊನೆಲ್ ಮೆಸ್ಸಿ
2010: ಲಿಯೊನೆಲ್ ಮೆಸ್ಸಿ
2011: ಲಿಯೊನೆಲ್ ಮೆಸ್ಸಿ
2012: ಲಿಯೊನೆಲ್ ಮೆಸ್ಸಿ
2013: ಕ್ರಿಸ್ಟಿಯಾನೊ ರೊನಾಲ್ಡೊ
2014:ಕ್ರಿಸ್ಟಿಯಾನೊ ರೊನಾಲ್ಡೊ
2015: ಲಿಯೊನೆಲ್ ಮೆಸ್ಸಿ







