ಅಮೆರಿಕನ್ ಸಿಖ್ಖರ ಸುರಕ್ಷತೆಗೆ ಶ್ವೇತಭವನದ ಅಭಯ
ವಾಶಿಂಗ್ಟನ್, ಜ. 12: ಅಮೆರಿಕದಲ್ಲಿರುವ ಸಿಖ್ ಸಮುದಾಯದ ವಿರುದ್ದ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಬೆದರಿಕೆಗಳು ಮತ್ತು ದ್ವೇಷ ಅಪರಾಧಗಳ ಹಿನ್ನೆಲೆಯಲ್ಲಿ, ಸಮುದಾಯದವರ ಸುರಕ್ಷತೆ ಖಾತರಿಪಡಿಸುವುದಾಗಿ ಶ್ವೇತಭವನ ಅಮೆರಿಕನ್ ಸಿಖ್ಖರಿಗೆ ಭರವಸೆ ನೀಡಿದೆ.
ಅಪರೂಪದ ಬೆಳವಣಿಗೆಯೊಂದರಲ್ಲಿ, ಅಧ್ಯಕ್ಷ ಬರಾಕ್ ಒಬಾಮರ ವಿಶೇಷ ಸಹಾಯಕಿ ಹಾಗೂ ಶ್ವೇತಭವನದ ಧಾರ್ಮಿಕ ವಿಷಯಗಳಿಗೆ ಸಂಬಂಧಿಸಿದ ಕಚೇರಿಯ ಮುಖ್ಯಸ್ಥೆ ಮೆಲಿಸಾ ರೋಜರ್ಸ್ ಮೇರಿಲ್ಯಾಂಡ್‌ನಲ್ಲಿರುವ ಗುರುದ್ವಾರವೊಂದಕ್ಕೆ ಭೇಟಿ ನೀಡಿ ಅಧ್ಯಕ್ಷರ ಅಭಯದ ಸಂದೇಶವನ್ನು ತಲುಪಿಸಿದರು.
ಅಮೆರಿಕದಲ್ಲಿರುವ ಸಿಖ್ಖರ ಬಗ್ಗೆ ಅಮೆರಿಕ ಸರಕಾರದ ಧೋರಣೆಯನ್ನು ಸ್ಪಷ್ಟಪಡಿಸಿದ ಮೆಲಿಸಾ, ಇತ್ತೀಚಿನ ದಿನಗಳಲ್ಲಿ ಸಿಖ್ಖರ ವಿರುದ್ಧ ನಡೆದ ಹಿಂಸಾಚಾರದ ಘಟನೆಗಳ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿದರು ಹಾಗೂ ಲಾಸ್ ಏಂಜಲಿಸ್‌ನ ಗುರುದ್ವಾರದಲ್ಲಿ ನಡೆದ ದಾಂಧಲೆಯನ್ನು ಖಂಡಿಸಿದರು.
‘‘ಇಂಥ ವರದಿಗಳು ನಿಮಗೆ ಎಷ್ಟು ಆಘಾತಕಾರಿಯೋ ಅಷ್ಟೇ ನಮಗೂ ಆಘಾತಕಾರಿ. ಈ ಅಪರಾಧಗಳ ಬಲಿಪಶುಗಳ ಸಂಕಟವನ್ನು ನಾವು ಹಂಚಿಕೊಳ್ಳುತ್ತೇವೆ’’ ಎಂದು ಗುರು ಗೋಬಿಂದ್ ಸಿಂಗ್ ಫೌಂಡೇಶನ್ ಗುರುದ್ವಾರದಲ್ಲಿ ಸಮುದಾಯ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಮೆಲಿಸಾ ಹೇಳಿದರು.