ರಾಜ್ಯದ 3 ವಿಧಾನಸಭಾ ಕ್ಷೇತ್ರಗಳಿಗೆ ಫೆ.13ರಂದು ಉಪಚುನಾವಣೆ

ಬೆಂಗಳೂರು, ಜ.12: ರಾಜ್ಯದಲ್ಲಿ ಖಾಲಿ ಇರುವ 3 ವಿಧಾನಸಭಾ ಕ್ಷೇತ್ರಗಳಿಗೆ ಫೆ.13ರಂದು ಉಪಚುನಾವಣೆಗಳು ಘೋಷಣೆಯಾಗಿವೆ. ಬೆಂಗಳೂರಿನ ಹೆಬ್ಬಾಳ, ರಾಯಚೂರು ಜಿಲ್ಲೆ ದೇವದುರ್ಗ ಹಾಗೂ ಬೀದರ್ ವಿಧಾನಸಭಾ ಕ್ಷೇತ್ರಗಳಿಗೆ ಫೆ.13ರಂದು ಚುನಾವಣೆಗಳು ನಡೆಯಲಿದ್ದು, ಜ.20 ರಿಂದ ಅಧಿಸೂಚನೆ ಜಾರಿಯಾಗಲಿದೆ.
ಜ.27ರವರೆಗೂ ನಾಮಪತ್ರ ಸಲ್ಲಿಕೆಗೆ ಕಾಲಾವಕಾಶವಿದ್ದು, ಜ.28ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಜ.30ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕವಾಗಿದ್ದು, ಫೆ.13ರಂದು ಮತದಾನ ಹಾಗೂ ಫೆ.16 ರಂದು ಮತ ಎಣಿಕೆ ನಡೆಯಲಿದೆ. ಇಂದು ಕರ್ನಾಟಕದ 3 ವಿಧಾನಸಭಾ ಕ್ಷೇತ್ರಗಳು ಸೇರಿದಂತೆ ವಿವಿಧ ರಾಜ್ಯಗಳ 12 ಕ್ಷೇತ್ರಗಳಿಗೆ ಕೇಂದ್ರ ಚುನಾವಣಾ ಆಯೋಗ ಉಪಚುನಾವಣೆಗಳನ್ನು ಘೋಷಣೆ ಮಾಡಿದೆ. ಇದರೊಂದಿಗೆ ಪಂಚಾಯತ್ ಚುನಾವಣೆಗೂ ಮುನ್ನವೇ ರಾಜಕೀಯ ಪಕ್ಷಗಳಿಗೆ ಬಲಾಬಲ ಪರೀಕ್ಷೆಗೆ ಮತ್ತೊಂದು ಅವಕಾಶ ಸಿಕ್ಕಂತಾಗಿದೆ.
ದೇವದುರ್ಗದ ಶಾಸಕರಾಗಿದ್ದ ವೆಂಕಟೇಶನಾಯಕ್ ಆಂಧ್ರಪ್ರದೇಶದಲ್ಲಿ ರೈಲು ದುರಂತದಲ್ಲಿ ಸಾವನ್ನಪ್ಪಿದ್ದರು. ಬೀದರ್‌ನ ಗುರುಪಾದಪ್ಪನಾಗಮಾರಪಲ್ಲಿ ಮತ್ತು ಬೆಂಗಳೂರಿನ ಹೆಬ್ಬಾಳದ ಜಗದೀಶ್‌ಕುಮಾರ್ ಹೃದಯಾಘಾತದಿಂದ ಅಕಾಲಿಕ ಮರಣಕ್ಕೀಡಾಗಿದ್ದರು.
ತೆರವಾದ ಮೂರು ಕ್ಷೇತ್ರಗಳು ದೇವದುರ್ಗ ಶಾಸಕ ಎಂ.ವೆಂಕಟೇಶ ನಾಯಕ(ಕಾಂಗ್ರೆಸ್), ಬೀದರ್ ಶಾಸಕ ಗುರುಪಾದಪ್ಪ ನಾಗಮಾರಪಳ್ಳಿ ಮತ್ತು ಹೆಬ್ಬಾಳ ಶಾಸಕ ಆರ್. ಜಗದೀಶ ಕುಮಾರ(ಇಬ್ಬರೂ ಬಿಜೆಪಿ) ಅವರ ನಿಧನದಿಂದಾಗಿ ಈ ಕ್ಷೇತ್ರಗಳು ತೆರವಾಗಿವೆ.
ಇತರ 7 ರಾಜ್ಯಗಳಲ್ಲೂ ಉಪಚುನಾವಣೆ
ಉತ್ತರ ಪ್ರದೇಶದ ಮುಝಫರನಗರ, ದೇವಬಂದ್ ಮತ್ತು ಬಿಕಾಪುರ, ಪಂಜಾಬಿನ ಖದೂರ ಸಾಹಿಬ್, ಮಹಾರಾಷ್ಟ್ರದ ಪಾಲ್ಘರ್, ಬಿಹಾರದ ಹರ್ಲಾಖೀ, ತ್ರಿಪುರಾದ ಅಮರಪುರ, ತೆಲಂಗಾಣದ ನಾರಾಯಣಖೇಡ ಮತ್ತು ಮಧ್ಯ ಪ್ರದೇಶದ ಮೈಹಾರಗಳಲ್ಲಿ ಫೆ.13ರಂದು ಉಪಚುನಾವಣೆಯನ್ನು ನಡೆಸುವುದಾಗಿ ಚುನಾವಣಾ ಆಯೋಗವು ಮಂಗಳವಾರ ಪ್ರಕಟಿಸಿದೆ.







