ಕಳ್ಳ ಸಾಗಾಟಕ್ಕೆ ನೆರವಾಗಿದ್ದ ಬಿಎಸ್‌ಎಫ್ ಯೋಧನ ಸೆರೆ
ಮೊಹಾಲಿ,ಜ.12: ಗಡಿಯಲ್ಲಿ ಮಾದಕ ದ್ರವ್ಯಗಳು ಮತ್ತು ಮದ್ದುಗುಂಡುಗಳ ಕಳ್ಳ ಸಾಗಾಟಕ್ಕೆ ನೆರವಾಗಿದ್ದ ಆರೋಪದಲ್ಲಿ ಇನ್ನೋರ್ವ ಬಿಎಸ್‌ಎಫ್ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಇದೇ ಆರೋಪದಲ್ಲಿ ಕಳೆದ ವಾರ ರಾಜಸ್ಥಾನದಲ್ಲಿ ಓರ್ವ ಬಿಎಸ್‌ಎಫ್ ಸಿಬ್ಬಂದಿಯನ್ನು ಬಂಧಿಸಲಾಗಿತ್ತು. ಹವಲ್ದಾರ್ ಪ್ರೇಮ್ ಸಿಂಗ್‌ನನ್ನು ಸೋಮವಾರ ತರನ್ ತರನ್ ಜಿಲ್ಲೆಯಲ್ಲಿರುವ ಆತನ ಸ್ವಗ್ರಾಮ ನೌಶೇರಾ ಧಲ್ಲಾದಿಂದ ಬಂಧಿಸಲಾಗಿದೆ ಎಂದು ಮೊಹಾಲಿ ಎಸ್‌ಎಸ್‌ಪಿ ಗುರುಪ್ರೀತ್ ಸಿಂಗ್ ಭುಲ್ಲರ್ ತಿಳಿಸಿದರು.
ಜ.4ರಂದು ಇಲ್ಲಿಯ ಖರಾರ್‌ನಲ್ಲಿ ತನ್ನಿಬ್ಬರು ಸಹಚರರ ಜೊತೆಗೆ ಬಂಧಿಸಲ್ಪಟ್ಟಿದ್ದ ಮಾದಕ ದ್ರವ್ಯ ಕಳ್ಳ ಸಾಗಾಣಿಕೆದಾರ ಗುರ್ಜಂತ್ ಸಿಂಗ್ ಅಲಿಯಾಸ್ ಭೋಲುವಿನ ವಿಚಾರಣೆ ಸಂದರ್ಭ ಪ್ರೇಮ್ ಸಿಂಗ್ ಪಾತ್ರ ಬೆಳಕಿಗೆ ಬಂದಿತ್ತು.
2014ರಲ್ಲಿ ಫಝಿಲ್ಕಾದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪ್ರೇಮ್ ಸಿಂಗ್ ನೆರವಿನಿಂದ ತಾನು ಎರಡು ಬಾರಿ ಪಾಕಿಸ್ತಾನದಿಂದ ಹೆರಾಯಿನ್ ಮತ್ತು ಮದ್ದುಗುಂಡುಗಳನ್ನು ಕಳ್ಳಸಾಗಣೆ ಮಾಡಿದ್ದಾಗಿ ಭೋಲು ಬಾಯಿಬಿಟ್ಟಿದ್ದ.
Next Story





