ದೃಶ್ಯವೊಂದು ವಿಸ್ಮಯಕಾರಿ ಅನುಭವವಾಗುವ ಪ್ರಕ್ರಿಯೆಯೇ ಕತೆ:
* ನಿಮ್ಮ ಸ್ವಾಭಾವಿಕ(casual)
"The Female eunuch"
ಕಥನ/ ಬರಹ ಶೈಲಿ ಹಲವರಿಗೆ (ನನ್ನನ್ನು ಸೇರಿಸಿ) ಇಷ್ಟವಾಗುತ್ತದೆ. ಏಕೆ ಎಂದು ಚಿಂತಿಸಿದರೆ ಕಾರಣಗಳನ್ನು ಪಟ್ಟಿಮಾಡಬಹುದು. ಆದರೆ ನೀವು ಅದನ್ನು ಆರಿಸಿಕೊಂಡಿದ್ದು ಹೇಗೆ?
ಶೈಕ್ಷಣಿಕವಾಗಿ ಕನ್ನಡವನ್ನು ದ್ವಿತೀಯ ಭಾಷೆಯಾಗಿ ಆರಿಸಿ ಕೊಂಡಿದ್ದು, ಅದರಲ್ಲಿ ಕತೆ ಬರೆಯಲು ಬೇಕಾದ ಒಂದು ಮಿನಿಮಮ್ ಆವಶ್ಯಕತೆ ಪೂರೈಸಿರಬಹುದು. ಆದರೆ ಚಿಕ್ಕಂದಿನಿಂದಲೇ ತುಂಬ ಪುಸ್ತಕಗಳನ್ನು ಓದಿಕೊಂಡಿದ್ದೆ. ತುಮಕೂರಿನ ನಮ್ಮ ಮನೆಯಲ್ಲಿ ರೂಮ್‌ಗಟ್ಟಲೆ ಪುಸ್ತಕಗಳಿದ್ದವು. ವೈದ್ಯರಾಗಿದ್ದ ನನ್ನ ತಂದೆ ತಮ್ಮ ಸಂಗ್ರಹದಿಂದ ನನಗಾಗಿ ಪುಸ್ತಕಗಳನ್ನು ವಯೋಮಾನಕ್ಕೆ ತಕ್ಕಂತೆ ಆಯ್ಕೆಮಾಡಿಕೊಟ್ಟು ಓದಿಸುತ್ತಿದ್ದರು. ತಾಯಿ (ಫಿಸಿಕ್ಸ್ ಆನರ್ಸ್ ಪದವೀಧರೆ) ಮಹಿಳಾ ಸಮಾಜದಲ್ಲಿ ಉಚಿತ ಸೇವೆಯ ಲೈಬ್ರರಿ ನಡೆಸುವುದು ಮುಂತಾದ ಹವ್ಯಾಸ ಬೆಳೆಸಿಕೊಂಡಿದ್ದರು. ಅಲ್ಲಿಂದ ನನಗೆ ಕನ್ನಡದ ಆರಂಭಿಕ ಕತೆಗಾರ್ತಿ-ತ್ರಿವೇಣಿ, ಆರ್ಯಾಂಬ ಪಟ್ಟಾಭಿ, ಅನುಪಮಾ ನಿರಂಜನರ ಪುಸ್ತಕಗಳೆಲ್ಲ ದೊರೆಯುತ್ತಿದ್ದವು. ಹೀಗಾಗಿ 12-13ನೆ ವರ್ಷಕ್ಕೆ ಸಾಕಷ್ಟು ಓದಿಕೊಂಡಿದ್ದೆ. ಹತ್ತೊಂಬತ್ತನೆ ವರ್ಷಕ್ಕೆ ಮದುವೆಯಾಗಿ ಮುಂಬೈ ಸೇರಿದೆ. ದಶಕ ಕಳೆದ ಮೇಲೆ ಅಂದಿನ ಇಂಗ್ಲಿಷ್ ಬರಹಗಾರರೊಂದಿಗೆ ಒಡನಾಟ, ವಿನಿಮಯ ಇತ್ಯಾದಿ ಸೊಪೈಯಾ ಕಾಲೇಜಿನಲ್ಲಿ ಆಯೋಜಿತವಾಗುತ್ತಿದ್ದ 12-16 ತರಗತಿಗಳ ಅಲ್ಪಾವಧಿ ಸಾಹಿತ್ಯ ಕೋರ್ಸ್‌ಗಳ ಮೂಲಕ ಸಿಕ್ಕಿತು. ಒಂದು ರೀತಿಯಲ್ಲಿ ವಿಶ್ವಸಾಹಿತ್ಯದ ಆಯಕಟ್ಟಿನ ಕ್ಷಣನೋಟ (ಕಾಫ್ಕಾ, ಬ್ಹೋರೆಸ್, ಜೇಮ್ಸ್ ಜಾಯ್ಸ್)ಗಳೆಲ್ಲ ಅಲ್ಲಿ ಲಭಿಸಿದವು ಎನ್ನಬಹುದು. ಆ ಸಂಜೆ ತರಗತಿಗಳಿಗೆ ನಾವಿದ್ದ ಅಣುಶಕ್ತಿ ನಗರದಿಂದ ಕೊಲಾಬಾಗೆ ಹೋಗುತ್ತಿದ್ದೆ. ನಮ್ಮೆಂದಿಗೆ ಸಂವಾದಿಸಲು ಇಂಡಿಯನ್-ಇಂಗ್ಲಿಷ್ ಕವಿ, ನಿಝೀಮ್ ಎಝ್‌ಕಿಲ್ ಮುಂತಾದವರು ಬರುತ್ತಿದ್ದರು. (1970) ಬರೆದು ಪ್ರಸಿದ್ಧರಾಗಿದ್ದ ಜೆರ್ಮೇನ್ ಗ್ರೀರ್ (ಆಸ್ಟ್ರೇಲಿಯಾದ ಸ್ತ್ರೀವಾದಿ ಚಿಂತಕಿ) ಸಹ ಒಮ್ಮೆ ಬಂದಿದ್ದರು. ಆ ವೇಳೆಗೆ ನನ್ನ ‘ಶೂ ಪಾಲಿಷ್ ಹುಡುಗ’ ಮತ್ತು ‘ಸಿಂಧು’ ಕತೆಗಳು ಪ್ರಕಟವಾಗಿದ್ದವು. ಆದರೆ ಹೀಗೆ (ಸ್ವಾಭಾವಿಕ ಶೈಲಿಯಲ್ಲಿ) ಬರೆಯಬಾರದೇನೋ ಎಂಬ ಅನುಮಾನದಲ್ಲಿದ್ದೆ. ಆದರೆ ಅದೇ ರೀತಿ ಇಂಗ್ಲಿಷ್‌ನಲ್ಲಿ ಬರೆದದ್ದನ್ನು ಸಹಪಾಠಿಗಳು ಮೆಚ್ಚುತ್ತಿದ್ದುದು ಧೈರ್ಯ ಕೊಟ್ಟಿತು. * ಎಡ-ಬಲ, ಮುಂದೆ-ಹಿಂದೆ, ದೂರ-ಸಮೀಪ ನೋಟಗಳಲ್ಲಿ ವಿವರಗಳನ್ನು ಪೋಣಿಸುತ್ತ, ಹನಿ ನೀರಾವರಿಯಂತೆ, ಮೇಲ್ಮೈಯನ್ನು ಇಂಚೂ ಬಿಡದೆ ಹನಿಸುವ ನಿರೂಪಣೆಯಲ್ಲಿ (ಇತ್ತೀಚಿನ ಕತೆ ‘ಐದನೆಯ ಗೋಪುರ’ ಒಂದು ನಿದರ್ಶನ) ತೀವ್ರತೆ, ನಾಟಕೀಯತೆಗೆ ಅವಕಾಶ ಕಡಿಮೆ. ಇವು ನೀವು ‘ಬೇಡ’ ಎಂದು ಬಿಟ್ಟ ಕ್ರಮಗಳೆ? ಅಷ್ಟೇ ಅಲ್ಲದೆ, ನೇರ ನಿರೂಪಣೆ ಹೊರತುಪಡಿಸಿದ ಇನ್ನಿತರ ‘ಕಥನ ತಂತ್ರ’ಗಳನ್ನೂ ನೀವು ನೆಚ್ಚಿಕೊಂಡಂತಿಲ್ಲ?
ನನ್ನ ಪ್ರತಿ ಕತೆಯೂ, ನನ್ನ ಯಾವ ಪ್ರಯತ್ನವೂ ಇಲ್ಲದೆಯೇ ಬೇರೆ ಬೇರೆ ರೂಪದಲ್ಲಿ ಅಭಿವ್ಯಕ್ತವಾಗುತ್ತದೆ ಎಂದು ನನಗನ್ನಿಸುತ್ತದೆ. ತೀವ್ರತೆ, ನಾಟಕೀಯತೆಯೂ ಆವಶ್ಯಕತೆಗೆ ತಕ್ಕಷ್ಟು ಅವುಗಳಲ್ಲಿ ಹಾಸುಹೊಕ್ಕಾಗಿರುತ್ತದೆ. ಗಂಡು/ಹೆಣ್ಣು ನಿರೂಪಕರಿಬ್ಬರೂ ಇರುತ್ತಾರೆ. ಸಾಹಿತ್ಯ ಕೋರ್ಸ್‌ನಲ್ಲಿ ಜೇಮ್ಸ್ ಜಾಯ್ಸ್‌ನನ್ನು ಪರಿಚಯಿಸಿಕೊಂಡಿದ್ದೆ ಎಂದೆನಲ್ಲ?...ನನ್ನ ಹಿಂದಿನ ಕೆಲ ಕೃತಿ ಗಳಲ್ಲಿ ‘ಪ್ರಜ್ಞಾಪ್ರವಾಹ ತಂತ್ರ’ ಬಳಕೆಯಾಗಿದೆ. ಈಗ ಅವೆಲ್ಲ ಹಳೆಯದಾಗಿವೆ...
* ಆದರೆ ಅವನ್ನು ತುಂಬಿಕೊಡಲೋ ಎಂಬಂತೆ ಕಟ್ಟಕಡೆಯಲ್ಲಿ ಗುಟ್ಟು ಬಿಟ್ಟುಕೊಡುವ ಒಂದು ಥ್ರಿಲ್ಲರ್ ಗುಣ (ಹಾವಾಡಿಗ), ಆರಂಭದಿಂದಲೂ ಪೋಷಿಸಿಕೊಂಡು ಬಂದು, ಉದ್ವಿಗ್ನತೆ ಹೆಚ್ಚಿಸುತ್ತ ಕೊನೆಯಲ್ಲಿ ಓದುಗರನ್ನು ಅಚಾನಕ್ಕಾಗಿ ಆಕ್ರಮಿಸುವ ಯಾವುದೋ ಸ್ಫೋಟ (ಪರಕೀಯ) ಇತ್ಯಾದಿ ಇರುತ್ತವೆ. ...ಇದು ನಿರಾಯಾಸವಾಗಿ ಸಾಧ್ಯವಾಗುತ್ತವೆಯೆ ಅಥವಾ ‘ಯೋಜಿತ’ವಾಗಿರುತ್ತದೆಯೆ?
ನಾನು ಹೆಚ್ಚು ಸಾರಿ ‘ರೀರೈಟ್’ ಮಾಡುವುದಿಲ್ಲ...ಒಮ್ಮೆ ಕತೆಯ ಸರಕನ್ನೆಲ್ಲ ಬರಿದಾಗಿಸಿದ ಮೇಲೆ ಕೆಲ ಸೂಕ್ತ ತಿದ್ದುಪಡಿಗಳನ್ನು ಮಾಡಿ ಮುಗಿಸುತ್ತೇನೆ. ಒಮ್ಮೆಮ್ಮೆ ‘ಥ್ರಿಲ್ಲರ್’ ಅಂಶ ಜಾಸ್ತಿಯಾಯಿತೇನೋ ಎಂದೂ ಅನ್ನಿಸಿದೆ! ನಿಜ ಜೀವನದಲ್ಲಿ ನನ್ನನ್ನು ತತ್ತರಿಸುವಂತೆ ಮಾಡಿದ ವೈಯಕ್ತಿಕ ಅನುಭವಗಳು, ಆ ಮೂಲಸೌಧದ ಮೇಲೆ ಹರಡುವ ನನ್ನ ಕಲ್ಪನಾಲೋಕ, ಬದುಕಿನ ಬೇರೆ ಬೇರೆ ಹಂತದಲ್ಲಿ ಎದುರಾದ ವ್ಯಕ್ತಿಗಳು, ಪ್ರಸಂಗಗಳು, ಬೆಚ್ಚಿಬೀಳಿಸಿದ ವಿಚಾರಗಳು, ಬದಲಾದ ವೌಲ್ಯಗಳು...ಎಲ್ಲ ಸೇರಿ ಕತೆ ರೂಪ ತಾಳುತ್ತವೆ. ಹಾಗೆ ನೈಜ ಜೀವನದಲ್ಲಿ ಆದ ಅನುಭವಕ್ಕೂ, ಕತೆ ರೂಪುಗೊಳ್ಳುವ ಹಂತಕ್ಕೂ ನಡುವಿನ ಅಂತರ ಹಲವಾರು ವರ್ಷಗಳಿರಬಹುದು ಅಥವಾ ಕೆಲವೇ ಕ್ಷಣಗಳಿರಬಹುದು...ಒಟ್ಟಾರೆ ಒಂದು ಪುಟ್ಟ ಕತೆಯಲ್ಲಿ ನನ್ನ ಅದುವರೆಗಿನ ಜೀವನದ ಬೇರೆ ಬೇರೆ ಹಂತದ ಅನುಭವಗಳು ಕಿಕ್ಕಿರಿದು ನಿಂತಿರುತ್ತವೆ. ಇನ್ನು ವ್ಯಾಖ್ಯಾನ, ವಿಶ್ಲೇಷಣೆ ಕುರಿತಂತೆ: ಕತೆ ಬರೆಯುವ ಕ್ರಿಯೆ ಸಾಗುತ್ತಿರುವಾಗ, ಕತೆಗಾರನಿಗೆ ಅರಿವಿರುವ, ಅರಿವಿಲ್ಲದಿರುವ ಆಯಾ ಮಗಳು ಅದಾಗಿಯೇ ಸೃಷ್ಟಿಯಾಗುತ್ತಾ ಹೋಗುತ್ತವೆ. ‘ಸಿಲೋನ್ ಸುಶೀಲ’ ಕತೆಯಲ್ಲಿ ಆಗುವಂತೆ, ಬಾಲ್ಯದ ಅನುಭವ, ಸದ್ಯದ ತಿಳುವಳಿಕೆಯಲ್ಲಿ ಹೊಸದೇನನ್ನೋ ಬಿಟ್ಟುಕೊಡುವುದೂ ನಡಯುತ್ತದೆ. ಓದುಗನ ದೃಷ್ಟಿಕೋನದಿಂದ ನೋಡಿದರೆ, ಪ್ರತಿ ಓದುಗನಿಗೂ ಒಂದೊಂದು ರೀತಿ ಕತೆ ತಟ್ಟಬಹುದು. ಅದು ಬೇರೆ ಆಯಾಮದ್ದೂ, ಕತೆಗಾರನ ಮನಸ್ಸಿನಲ್ಲೇ ಎಂದೂ ಹೊಳೆಯದಿದ್ದ ಮಗ್ಗುಲೂ (ನೀವು ‘ಹಾವಾಡಿಗ’ ಕುರಿತು ಸೂಚಿಸಿದಂತೆ) ಆಗಿರಬಹುದು...ಮತ್ತೂ ಕೆಲವು ಅವರಿಗೆ ದಕ್ಕದೆಯೂ ಹೋಗಬಹುದು! ಉದಾಹರಣೆಗೆ ‘ಪರಕೀಯ’ದ ವೃದ್ಧೆಯ ಹಿಡಿತದಲ್ಲಿಟ್ಟುಕೊಳ್ಳುವ ಪ್ರೀತಿಯ ‘ಡಿಸ್ಟರ್ಬಿಂಗ್’ ಗುಣ ಹೆಚ್ಚು ಓದುಗರಿಗೆ ದಾಟಿದಂತಿಲ್ಲ. * ನೀವು ನಿರ್ವಹಿಸಿರುವ ಕೆಲ ‘ಆಧುನಿಕ ಕಥಾವಸ್ತು’ಗಳ ಹಿನ್ನೆಲೆಯಾಗಿ ಮುಂಬೈ ವಾಸ, ದೇಶ-ವಿದೇಶಗಳ ತಿರುಗಾಟ, ಚುರುಕು ಓದು, ಪಲ್ಲಟಗೊಳ್ಳುತ್ತ ಸಾಗುವ ಸಾಮಾಜಿಕ ಸಂದರ್ಭಗಳ ಗ್ರಹಿಕೆ...ಇತ್ಯಾದಿ ಇದ್ದರೆ, ಗ್ರಾಮೀಣ ಪರಿಸರ, ಸಂವೇದನೆ, ಜನಜೀವನ ಮೈಗೂಡಿಕೊಂಡಿರುವ ‘ವನಜಮ್ಮನ ಸೀಟು’ ಹೊಸತೊಂದು ಬಾಗಿಲನ್ನೇ ತೆರೆಯುತ್ತದೆ. ಈ ಮಹತ್ವಾಕಾಂಕ್ಷಿ ರಚನೆ ಕುರಿತು ವಿಸ್ತಾರವಾಗಿ ಹೇಳಿ? ಈ ನಾಯಕಿಯ ಪಡಿಪಾಟಲುಗಳು (travails) ನೀವು ಒಡನಾಡುವ ಪರಿಸರಕ್ಕಿಂತ ತುಂಬ ಭಿನ್ನವಾಗಿದ್ದರೂ, ಅಷ್ಟೊಂದು ನಂಬಲರ್ಹವಾಗಿದ್ದು ಹೇಗೆ?
ನನ್ನ ಬಾಲ್ಯದ ದಟ್ಟ ಅನುಭವ, ನನ್ನ ಬರವಣಿಗೆ ಅವಧಿಯ ಸುಮಾರು ಮಧ್ಯಬಿಂದುವಿನಲ್ಲಿ, ಈ ಕಿರುಕಾದಂಬರಿಯಲ್ಲಿ ಮೈದಾಳಿತು! ಆರೇಳುವರ್ಷದವಳಿದ್ದಾಗ ನಾನಿದ್ದ ತುಮಕೂರು, ಆಗಿನ್ನೂ, 50,000-60,000 ಜನಸಂಖ್ಯೆಯಿದ್ದ ಪುಟ್ಟ ಊರು. ಅಲ್ಲಿ ನಮ್ಮದು ದೊಡ್ಡ ಮನೆ, ವಿಶಾಲವಾದ ಕಾಂಪೌಂಡು. ಬಸರಿ, ಮಾವು, ಹಲಸು, ನೇರಳೆ, ನೆಲ್ಲಿ, ಎಲಚಿ ಹೀಗೆ ಹತ್ತಾರು ಮರಗಳು. ಮನೆಯ ಸುತ್ತ ಹೂಗಿಡಗಳು. ಹಿಂದೆ ಕೊಟ್ಟಿಗೆ. ಅಲ್ಲಿ ಒಂದು ಬಿಳಿ ಹಸು ಪದ್ಮ, ಸೀಮೆ ಹಸು ಲಕ್ಷ್ಮೀ, ಅದರ ಮಗಳು ಕಮಲ, ಕರು ಬಸಣ್ಣ...ಒಂದು ಸಿಹಿನೀರಿನ ಬಾವಿ. ಒಂದು ಊರಿನ ಕತೆಯಾಗಿಯೂ ‘ವನಜಮ್ಮನ ಸೀಟು’ ರೂಪುಗೊಳ್ಳಲು ಇಂತಹ ಪರಿಸರ ತನ್ನ ಕಾಣಿಕೆ ಸಲ್ಲಿಸಿದೆ. ಅಂತಹ ಊರಿಗೆ, ದೊಡ್ಡ ನಗರದಿಂದ ಬಂದು ಹೊಂದಿಕೊಳ್ಳಲು ಪಾಡುಪಟ್ಟ ಮಹಿಳೆಯ ವಾಸ್ತವ ಪ್ರಸಂಗ ನನ್ನ ಸ್ಮತಿಕೋಶದಲ್ಲಿ ಸ್ಪಷ್ಟವಿವರಗಳಲ್ಲಿ ನೆಲೆಯಾಗಿತ್ತು.
ಸಣ್ಣ ಊರಿನಿಂದ ಮುಂಬೈಗೆ ವಲಸೆ ಬಂದು, ಮೊದಲಿಗೆ ಅವಸ್ಥೆ ಪಟ್ಟು, ಆನಂತರ ದೊಡ್ಡ ಪ್ರದೇಶ ನೀಡುವ ಅವಕಾಶಗಳಿಂದ ವಿಮುಕ್ತಿ ಕಂಡುಕೊಂಡ ನಾಯಕಿ, ಇದಕ್ಕಿಂತ ಮುಂಚೆ ಬರೆದ, ಇನ್ನೊಂದು ಕಾದಂಬರಿಯಲ್ಲಿ ಬರುತ್ತಾಳೆ. ಅವಳೊಂದಿಗೆ ವನಜಮ್ಮನನ್ನು ಹೋಲಿಸಿದಾಗ, ಇಬ್ಬರದೂ ಒಂದೇ ಮೂಲದ ಪಡಿಪಾಟಲು ಎಂದು ಹೊಳೆಯಿತು: ಇಬ್ಬರೂ ‘ಆವರಣ ಭಯ’ (claustrophobic
)ದಿಂದ ನಲುಗುತ್ತಾರೆ... ವೇಗವಾಗಿ ಬರೆಸಿಕೊಂಡು ಹೋಯಿತು...ಪಾತ್ರಗಳ್ಯಾವುವನ್ನೂ ನಾನು ಸೃಷ್ಟಿಸಲೇ ಇಲ್ಲ, ಅವರೇ ಬಂದು ಸ್ಥಾಪಿತರಾದರು ಎನಿಸಿತು. ಐವತ್ತರ ದಶಕದ ತುಮಕೂರಿನ ಚಿತ್ರಣವಾಗಿ ‘ಸೀಟು’ ಇನ್ನೊಂದು ಆಯಾಮವನ್ನೂ ಪಡೆದುಕೊಳ್ಳುತ್ತದೆ. ಎಲ್ಲ ಹೇಳುವ ಹಾಗೆ ಅದು ದೊಡ್ಡ ಪಟ್ಟಣವಾಗಿ ವಿಕಸಿತಗೊಳ್ಳಲಿಲ್ಲ, ಬರಿದೇ ಒಂದು ದೊಡ್ಡ ಪೇಟೆಯಾಯಿತು ಎನ್ನುವ ನಿರೀಕ್ಷಣೆಯನ್ನೂ ದಾಖಲಿಸಿದ್ದೇನೆ. * ಮನೆ ಕೆಲಸ, ಮಕ್ಕಳ ಪೋಷಣೆ ಅದಕ್ಕೂ ಮುಂಚೆ ಮದುವೆಯಾಗಬೇಕೆ? ಆದರೆ ಮಕ್ಕಳು ಬೇಕೆ?...ಈ ಆಯ್ಕೆಗಳನ್ನು ಆಧುನಿಕ ಮಹಿಳೆ- ವಿಜ್ಞಾನಿ, ಕಲಾವಿದೆ, ಬರಹಗಾರ್ತಿ, ಉನ್ನತಸ್ಥಾನದಲ್ಲಿರುವ ವರಿಷ್ಠೆ- ಯಾರೂ ಆಗಿರಬಹುದು ತುಂಬ ಎಚ್ಚರದಿಂದ ಇಡುತ್ತಿರುವುದು. ಅದು ಬೀರಬಹುದಾದ ನೇತ್ಯಾತ್ಮಕ ಪರಿಣಾಮಗಳು. ಉದಾಹರಣೆಗೆ, "civilization will come to an end'' ಬಗೆಯ ಅಭಿಪ್ರಾಯ ಒಂದು ಸಂದರ್ಭದಲ್ಲಿ ವ್ಯಕ್ತವಾಯಿತು... ಈ ಕುರಿತು ನಿಮ್ಮ ಯೋಚನೆಗಳೇನು?
ದಾಂಪತ್ಯದಲ್ಲಿ ಗಂಡು-ಹೆಣ್ಣು ಮಾಡಬೇಕಾದ ಪಾತ್ರನಿರ್ವಹಣೆ, ಪಿತೃಪ್ರಧಾನ ಸಮಾಜಗಳಲ್ಲಿ ಹೀಗೇ ಇರತಕ್ಕದ್ದು ಎಂದು ನಿಷ್ಕರ್ಷೆಯಾಗಿರುವುದು ಸಮಸ್ಯೆಯ ಮೂಲ. ಮನೆಕೆಲಸದ ನಾಯಕ-ನಾಯಕಿ ಇದನ್ನು ಕೊಂಚಮಟ್ಟಿಗೆ ದಾಟಿದ್ದಾರೆ. ಅಂದರೆ ಆ ಕಾಲಘಟ್ಟಕ್ಕೆ ಸೇರಿದವರು. ಗಂಡ ತತ್ಕಾಲಕ್ಕೆ ಕೆಲಸ ಇಲ್ಲದೇ ಮನೆಯಲ್ಲಿರುವುದು ಅವಮಾನಕಾರಿ, ಪುರುಷ ಲಕ್ಷಣವಲ್ಲ ಎಂದು ಹೆಂಡತಿ ಭಾವಿಸುತ್ತಿಲ್ಲ. ಹಾಗೂ ಮಗುವಿನ ಶಿಕ್ಷಣ ಮತ್ತು ತಾವು ಮೂವರೂ ಸೇರಿದ ಕುಟುಂಬದ ಖರ್ಚುವೆಚ್ಚ, ಉಳಿತಾಯ, ರಂಜನೆಗಳನ್ನು ಹೆಂಡತಿಯೊಬ್ಬಳೇ ಭರಿಸುತ್ತಿರುವುದು ಗಂಡನಲ್ಲಿ ತಕ್ಷಣಕ್ಕೆ ಯಾವ ಅಸುರಕ್ಷೆಯನ್ನೂ ಹುಟ್ಟಿಸಿಲ್ಲ. ಆದರೆ ದೀರ್ಘವಾಗಿ ಇದು ಮುಂದುವರಿದಾಗ ಸಂಕೀರ್ಣ ಆಯಾಮಗಳು ಸೇರಿ ಕೊಳ್ಳುತ್ತವೆ. ಕಚೇರಿ ದುಡಿತ ತರುವ ಆರ್ಥಿಕ ಸ್ವಾತಂತ್ರ್ಯ, ಸ್ವಾವಲಂಬನೆ, ಹೊರಜಗತ್ತಿನಲ್ಲಿ ಅದು ತಂದುಕೊಡುವ ಗೌರವ, ವರ್ಚಸ್ಸು ಉದ್ಯೋಗಸ್ಥ ಮಹಿಳೆಯರಿಗೆ, ಎಷ್ಟೋ ವರ್ಷಗಳ ನಂತರ ಕೈಗೆಟುಕಿದ ಕನಸಾಗಿ ಅತಿ ಆಪ್ಯಾಯಮಾನವೂ ಆಗಿದೆ. ಹೀಗಿರುವಲ್ಲಿ ಗಂಡಸನ್ನು ಮನೆಕೆಲಸಕ್ಕೆ ಅಂಟಿಸಿದ ನಂತರ, ಮತ್ತೆ ಅವನನ್ನು ಹೊರ ದುಡಿತಕ್ಕೆ ಬಿಟ್ಟುಕೊಡಲು, ತಾನು ಮನೆಕೆಲಸಕ್ಕೆ ಮರಳಲು ಕಷ್ಟವಾಗುತ್ತೇನೋ...ಎಲ್ಲ ಕೆಲಸಗಳನ್ನೂ ಅರ್ಧರ್ಧ ಹಂಚಿಕೊಂಡು ಮಾಡುವುದೇ ಉಪಾಯ. * ಆಧುನಿಕ ಕತೆಗಾರ್ತಿಯಾಗಿ ಅನುಭವಗಳನ್ನು ಮಹಿಳೆ ತನ್ನದಾಗಿಸಿಕೊಂಡು ಬರೆಯುವ ಸವಾಲುಗಳ ಕುರಿತು...
ಮುಂಬೈ ಸಬರ್ಬನ್ ರೈಲುಗಳು ಒಂದು ಲೆವೆಲರ್ ಆಗಿ ಒದಗಿದ್ದು ನನಗೆ ನೆನಪಾಗುತ್ತದೆ. ಊರಿನ ಲಕ್ಷಾಧೀಶರಿಂದ ಹಿಡಿದು ಬೀದಿ ಪೋಕರಿಗಳವರೆಗೂ ಗಂಡಸು ಹೆಂಗಸರೆನ್ನದೆ ಒಂದು ಬೋಗಿಯಲ್ಲಿ ಒಂದೇ ಏಟಿಗೆ ಎತ್ತಿ ಹಾಕಿಕೊಂಡು ಓಡುತ್ತಾ ಮುಂದಿನ ಸ್ಟೇಶನ್ನಿನಲ್ಲಿ ಉದುರಿಸುತ್ತಿದ್ದ ಅವು ಎಲ್ಲ ವರ್ಗಗಳ ಅನುಭವಗಳ, ಕತೆಗಳ, ಅಶ್ಲೀಲ ಬೈಗಳ, ಬೇರೆ ಬೇರೆ ಆಡುಭಾಷೆಗಳ, ಕಳ್ಳಾಟಗಳ, ಚಿತ್ರ ವಿಚಿತ್ರ ಉಡುಪುಗಳ, ಬೆವರುಗಳ, ಸೆಂಟುಗಳ ಮಿಲನದ ಖಜಾನೆಯಾಗಿರುತ್ತಿದ್ದವು. ಅದರಲ್ಲಿ ಪ್ರಯಾಣ ಮಾಡಿದಾಗ ಮುಂಬೈ ಬದುಕಿನ ಅಚ್ಚರಿಗಳ, ಎಲ್ಲಾ ರೀತಿಯ ತಾಕಲಾಟಗಳ, ನೀತಿ ಸಂಹಿತೆಗಳ, ಬೇರೆಬೇರೆ ಸ್ತರದ ವ್ಯಾಪಾರಗಳ, ವ್ಯಾಕರಣಗಳ, ತರತರದ ಬದುಕಿನ ಕತೆಗಳ ಮೇಲ್ಪದರದೊಂದಿಗಾದರೂ ಮುಖಾಮುಖಿ ಆಗುತ್ತದೆ.
ಇಷ್ಟನ್ನೇ ಪ್ರಾಮಾಣಿಕವಾಗಿ, ವಸ್ತುನಿಷ್ಠವಾಗಿ, ಅದು ನನ್ನಲ್ಲಿ ಮೂಡಿಸಿದ ಭಾವನೆ/ಯೋಚನೆಗಳೊಂದಿಗೆ ದಾಖಲಿಸುವುದು ನನ್ನ ರೀತಿ. ಅನುಭವ ಅರಸುತ್ತ, ಸಹಮಾನವರನ್ನು ವಸ್ತು ಆಗಿಸುವುದೂ ಸಲ್ಲ. ಇನ್ನು ಭಾಷೆಯ ಬಗ್ಗೆ ಹೇಳಬೇಕೆಂದರೆ, ಯಾವುದೇ ಕತೆ ಕಾದಂಬರಿಯ ಸೊಗಡು ತಾವು ಬದುಕುವ ಪರಿಸರಕ್ಕೆ ಹೊಂದಿಕೊಂಡಂತೆ ಅಲ್ಲಿನ ಪಾತ್ರಗಳು ಆಡುವ ಭಾಷೆಯೇ ಆಗಿರುತ್ತದೆ. ಹಳ್ಳಿಗಳಿಂದ ಬಂದು ಪಟ್ಟಣಗಳಲ್ಲಿ ತಮ್ಮದೇ ಮನೆಗೆಲಸ ಮಾಡುವ ಹೆಂಗಸರ ಮನೆಯ ಪರಿಸರ, ಭಾಷೆ ಎಷ್ಟು ಜನಕ್ಕೆ ಪರಿಚಯವಿರುತ್ತದೆ? ಇನ್ನು ಎಲ್ಲೋ ಭೂಗತ ಜಗತ್ತಿನಲ್ಲೊ, ಪೊಲೀಸ್ ಸ್ಟೇಶನ್‌ಗಳಲ್ಲೋ, ಕೊಳೆಗೇರಿ ಹೆಂಗಸರ ಕಾದಾಟದಲ್ಲೋ, ಅತಿ ಸಿರಿವಂತರ ಕಾರ್ಡ್ಸ್ ಪಾರ್ಟಿಗಳಲ್ಲೋ ಆಡುವ ಭಾಷೆಯ ಶೈಲಿಯಂತೂ ಮಧ್ಯಮವರ್ಗದ ಮಹಿಳೆಯರಿಗೆ ಪರಿಚಯ ಇರುವ ಸಾಧ್ಯತೆ ತುಂಬಾ ಕಡಿಮೆ. ಆವಶ್ಯಕತೆ ಇರುವ ಕಡೆಗಳಲ್ಲೂ, ಅಶ್ಲೀಲ ಬೈಗಳನ್ನು ಉಪಯೋಗಿಸುವ ಮೊದಲು ಬರಹಗಾರ್ತಿಯಾದ ನನಗೆ ಕಾಣಿಸಿಕೊಳ್ಳುವ ಹಿಂಜರಿಕೆಯನ್ನು ಹೇಗೆ ವಿವರಿಸಿಕೊಳ್ಳುವುದು?!
ನನ್ನ ತಂದೆ ವೈದ್ಯರಾಗಿದ್ದರು, ಚಿಕ್ಕಪ್ಪ ವಕೀಲರಾಗಿದ್ದರು. ಅವರೆಲ್ಲ ನೀಡುತ್ತಿದ್ದ ವಿವರಣೆಗಳಿಂದ ಮಹಿಳೆಯರಿಗೆ ಅಲಭ್ಯವಾಗಿರುವ ಪರಿಸರದ ಇಣುಕು ನೋಟ ಸಿಕ್ಕಿದೆ. ಮುಂಬೈ ಗಲಭೆ ವೇಳೆ ಹತ್ತಾರು ಹೃದಯ ವಿದ್ರಾವಕ ಘಟನೆಗಳಿಗೆ ವೈದ್ಯನಾಗಿ ಸಾಕ್ಷಿಯಾದ ಮಗ ಹೇಳುತ್ತಿದ್ದ ಪ್ರಸಂಗಗಳಿಗೆ, ಅವನ್ನು ಪರಿಭಾವಿಸುತ್ತಾ ಕಿವಿಯಾಗಿದ್ದು ಸಹ (ಬಹುಶಃ ಅಪ್ರಜ್ಞಾಪೂರ್ವಕವಾಗಿ) ಇಂತಹ ಮಿತಿ ಮೀರುವ ಒಂದು ಪ್ರಯತ್ನ ಎನ್ನಬಹುದು.
* ಸಾಂದ್ರ ನೇಯ್ಗೆಯ ಅನೇಕ ‘ಶಾರ್ಟ್‌ಫಿಲ್ಮ್’ಗಳು ಬರುತ್ತಿರುವ ಈ ವೇಳೆ ನಿಮ್ಮ ಕಿರುಗತೆಗಳನ್ನು (ದಿವಾಕರ್ ಅವನ್ನು ‘ಪ್ರಸಂಗ’ ಎಂದು ಕರೆದಿದ್ದಾರೆ) ಅವಕ್ಕೆ ಹೋಲಿಸಬಹುದು ಅನಿಸಿತು. ಒಂದು ಶುದ್ಧ ವಿಷ್ಯುಅಲ್. ತಾಳಮೇಳವಿಲ್ಲದ, ಕಾರ್ಯಕಾರಣ ಇಲ್ಲದ, ಆದರೆ ಅಮೂರ್ತ, ಭಾಷಾರಹಿತ ಸಂವೇದನೆಯನ್ನು ತುಂಬಿಬಿಡುವ ಇದೆಲ್ಲ ಇವರಿಗೆ ಹೇಗೆ ಹೊಳೆಯುತ್ತಪ್ಪಾ! ಅನ್ನಿಸಿ ಹೊಟ್ಟೆಕಿಚ್ಚಾಯಿತು. ಪ್ರತಿಕ್ರಿಯಿಸಿ? ನನ್ನ ಕತೆಯ ಮೊಳಕೆಗಳು ವಿಷ್ಯುಅಲ್‌ಗಳೇ. ವರ್ಷಗಳ ಹಿಂದಿನ ಕರಾಳ ಕನಸು, ಅಗಾಧ ಜನಜಂಗುಳಿಯಲ್ಲಿ ಎದುರಾದ ಅಪರಿಚಿತ ವೃದ್ಧ, ಬ್ಯಾಂಕಾಕ್‌ನ ನೈಟ್ ಮಾರ್ಕೆಟ್‌ನಲ್ಲಿ ದಿನಾ ಕಂಬ ಸುತ್ತುವ ಚೆಲುವೆ. ಮಾಂಖುರ್ದ್ ಸ್ಟೇಶನ್ನಿನ ಚಾ ದುಕಾನ್ ಪಕ್ಕ ನಿಂತು ಎಲ್ಲ ಬರಹೋಗುವವರನ್ನು ಮರುಳು ನಗೆಯೊಂದಿಗೆ ‘‘ಠೀಕ್ ಹೈ ನ’’ ಎಂದು ಕೇಳುವ ಹರಕಲು ಸೀರೆಯ ಹುಚ್ಚಿ, ‘‘ನಾನು ಬೈಸೆಕ್ಷುಯಲ್ ಎಂದು ನಿನಗೆ ಗೊತ್ತಾ’’ ಎಂದು ಯಾವುದೋ ಪಬ್ಬಿನಲ್ಲಿ ತುಂಟತನದಿಂದ ಕೇಳುವ ಹೊಂಗೂದಲ ಹಸಿರು ಕಣ್ಣಿನ ಚೆಲುವೆ, ಬಾಲಕಲ್ಯಾಣ ನಗರಿಯಲ್ಲಿ ಯಾರೂ ದತ್ತು ತೆಗೆದುಕೊಳ್ಳಲೊಪ್ಪದ ಎರಡು ವರ್ಷದ ಹರಕು ತುಟಿಯ ಹುಡುಗಿ, ಇತ್ತೀಚೆಗೆ ವೃದ್ಧಾಶ್ರಮದಲ್ಲಿ ಒಬ್ಬಂಟಿಯಾಗಿ ಪ್ರಾಣ ಬಿಟ್ಟ ನಮ್ಮ ಪ್ರೈಮರಿ ಸ್ಕೂಲು ಕನ್ನಡ ಮೇಷ್ಟ್ರು...ಮನಸ್ಸಿನ ಒಂದು ಮೂಲೆಯಲ್ಲಿ ಉಳಿದು, ಬೆಳೆದು ಕತೆಯಾಗಲು ಹವಣಿಸುತ್ತಾರೆ.
ಇಂತಹ ಕಾಣ್ಕೆ, ಕತೆ ಮೊಳೆಯಲು ನೆರವಾಗುವ ಒಂದು ಸೆಲೆ ಅಷ್ಟೇ. ಅಲ್ಲಿಂದಲೇ ಕತೆ ಶುರುವಾಗಬೇಕೆಂದಿಲ್ಲ ಅಥವಾ ಕೊನೆಗಾಣ ಬೇಕೆಂದಿಲ್ಲ. ಅದು ಕತೆಯ ನಡುವೆಯೂ ಇರಬಹುದು ಅಥವಾ ಇಡೀ ಕತೆಯ ಹುಟ್ಟಿಗೆ ಕಾರಣವಾಗಿಯೂ ಮೂರ್ತವಾಗದೇ ಹೋಗಬಹುದು...ಮನಸ್ಸಿನಲ್ಲಿ ಬೇರುಬಿಟ್ಟು, ದಟ್ಟವಾಗಿ ಬೆಳೆದು, ಇನ್ನೂ ಅದೆಷ್ಟನ್ನೋ ಮೈಗೂಡಿಕೊಂಡು, ದೃಶ್ಯವೊಂದು ವಿಸ್ಮಯಕಾರಿ ಅನುಭವವಾಗುವ ಪ್ರಕ್ರಿಯೆಯೇ ಕತೆ!