ಜಲ್ಲಿಕಟ್ಟಿಗೆ ಸುಪ್ರೀಂ ಮೂಗುದಾರ

ಹೊಸದಿಲ್ಲಿ, ಜ.12: ಪೊಂಗಲ್ ಹಬ್ಬಕ್ಕೆ ಕೆಲವೇ ದಿನ ಮೊದಲು ತಮಿಳುನಾಡು ಹಾಗೂ ಮಹಾರಾಷ್ಟ್ರಗಳ ಪಾರಂಪರಿಕ ಗೂಳಿ ಮಣಿಸುವ ಕ್ರೀಡೆಗೆ ಕೇಂದ್ರ ಸರಕಾರ ನೀಡಿದ್ದ ಅನುಮತಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ತಡೆಹಿಡಿದಿದೆ.
ಜಲ್ಲಿಕಟ್ಟು ಹಾಗೂ ಎತ್ತಿನ ಬಂಡಿ ಓಟಗಳಿಗೆ ಅನುಮತಿ ನೀಡಿದ್ದ ಕೇಂದ್ರ ಸರಕಾರದ ಅಧಿಸೂಚನೆಯನ್ನು ಪ್ರಶ್ನಿಸಿರುವ ಅರ್ಜಿಗಳಿಗೆ ನಾಲ್ಕು ವಾರಗಳೊಳಗೆ ಉತ್ತರ ನೀಡುವಂತೆಯೂ ಅದು ಕೇಂದ್ರ ಹಾಗೂ ಇತರ ರಾಜ್ಯ ಸರಕಾರಗಳಿಗೆ ನೋಟಿಸ್‌ಗಳನ್ನು ನೀಡಿದೆ.
ಕಳೆದ ವಾರ ಹೊರಡಿಸಿದ್ದ ಗೆಜೆಟ್ ಅಧಿಸೂಚನೆಯೊಂದರಲ್ಲಿ ಸರಕಾರವು, ಗೂಳಿಗಳನ್ನು ಸಾರ್ವಜನಿಕ ಪ್ರದರ್ಶನಕ್ಕೆ ನಿಷೇಧಿಸಲಾಗಿರುವ ಪ್ರಾಣಿಗಳ ಪಟ್ಟಿಯಿಂದ ಹೊರಗಿಟ್ಟಿತ್ತು.
ಆ ಮೂಲಕ ಅದು ಪೊಂಗಲ್ ಹಬ್ಬದ ಪಾರಂಪರಿಕ ಕ್ರೀಡೆಗೆ ಅನುವು ಮಾಡಿಕೊಟ್ಟಿತ್ತು. ಇದರಿಂದಾಗಿ ಗೂಳಿಗಳನ್ನು ಜಲ್ಲಿಕಟ್ಟುವಿನಲ್ಲಿ ಪ್ರದರ್ಶನದ ಪ್ರಾಣಿಗಳಾಗಿ ಬಳಸುವುದಕ್ಕೆ ಹಾಗೂ ಗುಜರಾತ್, ಹರ್ಯಾಣ, ಕರ್ನಾಟಕ, ಕೇರಳ, ಮಹಾರಾಷ್ಟ್ರ ಹಾಗೂ ಪಂಜಾಬ್‌ಗಳಲ್ಲಿ ಎತ್ತಿನ ಬಂಡಿ ಓಟದ ಸ್ಪರ್ಧೆಗೆ ಅವಕಾಶ ಲಭಿಸಿದಂತಾಗಿತ್ತು.
ಪ್ರಾಣಿ ಕಲ್ಯಾಣ ಮಂಡಳಿ, ಪೆಟಾ ಹಾಗೂ ಪ್ರಾಣಿಗಳ ಹಕ್ಕುಗಳ ಬಗ್ಗೆ ಕೆಲಸ ಮಾಡುತ್ತಿರುವ ಸುಮಾರು 10-12 ಸರಕಾರೇತರ ಸಂಘಟನೆಗಳು(ಎನ್‌ಜಿಒ), ಚುನಾವಣೆಯು ನಡೆಯಲಿರುವ ತಮಿಳುನಾಡಿನಲ್ಲಿ ಜಲ್ಲಿಕಟ್ಟಿಗಿದ್ದ ನಿಷೇಧವನ್ನು ತೆರವುಗೊಳಿಸಿದ ಕೇಂದ್ರ ಸರಕಾರದ ಕ್ರಮದ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದವು.
ನ್ಯಾಯಮೂರ್ತಿ ಭಾನುಮೂರ್ತಿ ಭಾನುಮತಿ ಈ ಅರ್ಜಿಗಳ ವಿಚಾರಣೆಯಿಂದ ಹಿಂದೆ ಸರಿದ ಬಳಿಕ, ಮಂಗಳವಾರ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠ ವಾದ-ಪ್ರತಿವಾದಗಳನ್ನು ಆಲಿಸಿತ್ತು.







