ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ: ನೀರಸ ಪ್ರತಿಕ್ರಿಯೆ

ಬೆಂಗಳೂರು, ಜ.12: ದ್ವಿಚಕ್ರವಾಹನಗಳ ಹಿಂಬದಿ ಸವಾರರಿಗೂ ಇಂದಿನಿಂದ ಹೆಲ್ಮೆಟ್ ಕಡ್ಡಾಯಗೊಳಿಸಿರುವುದು ಸಾರ್ವಜನಿಕರ ಪೇಚಿಗೆ ಕಾರಣವಾಗಿದೆ. ಬೈಕ್ ಸವಾರರು ಹೆಲ್ಮೆಟ್ ಕಡ್ಡಾಯ ಆದೇಶವನ್ನೇ ಸರಿಯಾಗಿ ಪರಿಪಾಲನೆ ಮಾಡದ ಸಂದರ್ಭದಲ್ಲಿ ಹಿಂಬದಿ ಸವಾರರಿಗೆ ಕಡ್ಡಾಯಗೊಳಿಸಿರುವುದು ಜನ ಸಾಮಾನ್ಯರ ಗೊಂದಲಗಳಿಗೆ ಕಾರಣವಾಗಿದೆ.
ಹೊಸದಾಗಿ ಹೆಲ್ಮೆಟ್ ಖರೀದಿಸಲು ಅನುಕೂಲವಾಗುವಂತೆ ಜ.20ರವರೆಗೆ ನಿಯಮಗಳನ್ನು ಸಡಿಲಗೊಳಿಸಲಾಗಿದ್ದು, 20ರ ನಂತರ 12 ವರ್ಷ ಮೇಲ್ಪಟ್ಟ ಮಕ್ಕಳೂ ಸೇರಿದಂತೆ ದ್ವಿಚಕ್ರ ವಾಹನಗಳಲ್ಲಿ ಪ್ರಯಾಣಿಸುವ ಎಲ್ಲರೂ ಹೆಲ್ಮೆಟ್ ಹಾಕಿಕೊಳ್ಳಲೇಬೇಕಾಗಿದೆ.
ಜಾರಿಯಾದ ಕಾನೂನಿನ ಬಗ್ಗೆ ಪೊಲೀಸರು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಆದೇಶ ಪಾಲಿಸದಿದ್ದರೆ ಮೊದಲ ಮೂರು ಬಾರಿ ಬಾರಿ ದಂಡ ವಿಧಿಸಲಾಗುತ್ತದೆ. ನಂತರ ಚಾಲನಾ ಪರವಾನಗಿಯನ್ನೇ ರದ್ದುಪಡಿಸಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಈ ಮಧ್ಯೆ ಹೆಲ್ಮೆಟ್ ಕಡ್ಡಾಯ ನಿಯಮವನ್ನು ಜಾರಿಗೊಳಿಸಿದರೂ, ಇಂದು ಸಾರ್ವಜನಿಕರು ಅಷ್ಟಾಗಿ ಸ್ಪಂದಿಸಿದಂತೆ ಕಂಡುಬರಲಿಲ್ಲ. ಕೆಲವರು ಹೆಲ್ಮೆಟ್ ಖರೀದಿಯಲ್ಲಿ ತೊಡಗಿದ್ದರೆ ಮತ್ತೆ ಕೆಲವರು ಹಿಂಬದಿ ಸವಾರರಿಗೂ ಹೆಲ್ಮೆಟ್ ಹಾಕಿಸಿಕೊಂಡು ವಾಹನ ಚಲಾಯಿಸುತ್ತಿದ್ದ ದೃಶ್ಯ ಕೆಲವೆಡೆ ಕಂಡುಬಂತು.
20ರಿಂದ ದಂಡ
ಹಿಂಬದಿ ಸವಾರರು ಹೆಲ್ಮೆಟ್ ಧರಿಸದಿದ್ದರೆ ಜ.20ರಿಂದ ದಂಡ ವಸೂಲಿ ಮಾಡುವುದಾಗಿ ನಗರ ಸಂಚಾರಿ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಎಂ.ಎ.ಸಲೀಂ ತಿಳಿಸಿದ್ದಾರೆ.
ಆರಂಭದಲ್ಲಿ ಹೊಸ ನಿಯಮಾವಳಿಗಳು ಬಂದಾಗ ಅದಕ್ಕೆ ವಿರೋಧಗಳು ಸಹಜ. ಈ ಹಿಂದೆ ಹೆಲ್ಮೆಟ್ ಕಡ್ಡಾಯಗೊಳಿಸಿದಾಗಲೂ ವಿರೋಧವಿತ್ತು. ಕಾರಿಗೆ ಸೀಟ್ ಬೆಲ್ಟ್ ಕಡ್ಡಾಯಗೊಳಿಸಿದಾಗಲೂ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ್ದರು. ಕ್ರಮೇಣ ಅದನ್ನು ಒಪ್ಪಿಕೊಂಡು ಅನುಸರಿಸುತ್ತಿದ್ದಾರೆ. ಇದೇ ರೀತಿ ಹಿಂಬದಿ ಸವಾರರಿಗೆ ಹೆಲ್ಮೆಟ್ ಕಡ್ಡಾಯ ನಿಯಮಾವಳಿಯು ಮುಂದಿನ ದಿನಗಳಲ್ಲಿ ಪಾಲನೆಯಾಗಲಿದೆ ಎಂದು ಹೇಳಿದರು.







