ಕಕ್ಕಿಂಜೆ: ವೃದ್ಧ ದಂಪತಿಯ ಹತ್ಯೆ; ಮಹತ್ವದ ಸುಳಿವು ಲಭ್ಯ
ಬೆಳ್ತಂಗಡಿ, ಜ.12: ಚಾರ್ಮಾಡಿ ಗ್ರಾಮದ ಕಕ್ಕಿಂಜೆಯಲ್ಲಿ ಸೋಮವಾರ ವೃದ್ಧ ದಂಪತಿಯನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಎಎಸ್ಪಿ ರಾಹುಲ್ ಕುಮಾರ್ ನೇತೃತ್ವದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದು, ಕೆಲವೊಂದು ಮಹತ್ವದ ಸುಳಿವುಗಳು ಲಭಿಸಿರುವುದಾಗಿ ತಿಳಿದು ಬಂದಿದೆ.
ಮನೆಯಲ್ಲಿ ಸುಮಾರು 20 ಪವನ್‌ನಷ್ಟು ಚಿನ್ನದ ಆಭರಣಗಳು ಇದ್ದಿರಬಹುದು ಎಂದು ಅಂದಾಜಿಸಲಾಗಿದೆ. ಆದರೆ ನಗದು ಬಗ್ಗೆ ಸಂಬಂಧಿಕರಿಗೂ ಸ್ಪಷ್ಟ ಮಾಹಿತಿಯಿಲ್ಲ ಎನ್ನಲಾಗಿದೆ. ಬೇರೆ ಯಾವುದೇ ದಾಖಲೆ ಪತ್ರಗಳು ಕಳ್ಳತನವಾದ ಬಗ್ಗೆ ಮಾಹಿತಿ ಇಲ್ಲ. ಯಾರೋ ಪರಿಚಯದವರೇ ಈ ಕೃತ್ಯ ಎಸಗಿರಬಹುದು ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
ಇದಕ್ಕೆ ಪೂರಕವಾಗಿ ರಾತ್ರಿಯ ವೇಳೆ ಯಾರೇ ಬಂದರೂ ಯಾರೆಂದು ತಿಳಿಯದೆ ಬಾಗಿಲು ತೆಗೆಯುತ್ತಿರಲಿಲ್ಲ ಎಂಬ ಮಾಹಿತಿಯನ್ನು ಸ್ಥಳೀಯರು ನೀಡುತ್ತಿದ್ದಾರೆ. ಮನೆಯಲ್ಲಿ ಕಳ್ಳತನದ ವೇಳೆ ಯಾವುದೇ ಬಾಗಿಲುಗಳನ್ನು ಬಲವಂತವಾಗಿ ತೆರೆಯಲಾಗಿರಲಿಲ್ಲ. ಮನೆಯವರೇ ಬಾಗಿಲು ತೆರೆದಿರುವಂತೆ ಕಾಣಿಸುತ್ತಿದೆ ಹಾಗೂ ವೃದ್ಧನನ್ನು ಮನೆಯಿಂದ ಹೊರಗೆ ಕರೆದು ಹತ್ಯೆ ಮಾಡಿರುವುದು ವಿಶೇಷವಾಗಿದೆ. ಪರಿಚಿತರು ಯಾವುದೋ ನೆಪ ಹೇಳಿ ಇವರನ್ನು ಮನೆಯಿಂದ ಹೊರತಂದು ಹತ್ಯೆ ಮಾಡಿದ್ದಾರೆ ಎಂದು ಪೊಲೀಸರ ಅಭಿಪ್ರಾಯಪಟ್ಟಿದ್ದಾರೆ. ಅದರ ಆಧಾರದ ಮೇಲೆ ಮುಂದಿಟ್ಟು ಪೊಲೀಸರ ತನಿಖೆ ಮುಂದುವರಿಯುತ್ತಿದೆ. ಅನುಮಾನಿತರ ಚಲನವಲನ ಹಾಗೂ ಮೊಬೈಲ್ ಕರೆಗಳ ಮೇಲೂ ನಿಗಾ ಇಡಲಾಗಿದೆ. ಮನೆಯಲ್ಲಿ ದೊರೆತ ಕೆಲವು ವಸ್ತುಗಳನ್ನು ಹಿಂದಿನ ದಿನ ತಂದದ್ದಾಗಿದ್ದು, ಇದನ್ನು ಹೊರಗಿಂದ ಬಂದವರು ತಂದಿರಬಹುದೇ ಎಂಬ ಅನುಮಾನವಿದೆ. ಒಟ್ಟಿನಲ್ಲಿ ಪೊಲೀಸರ ಮೂರು ತಂಡಗಳು ತನಿಖೆಯಲ್ಲಿ ನಿರತವಾಗಿದ್ದು, ಒಂದೆರಡು ದಿನಗಳಲ್ಲಿ ಆರೋಪಿಗಳನ್ನು ಬಂಧಿಸುವ ವಿಶ್ವಾಸದಲ್ಲಿದ್ದಾರೆ. ಮಂಗಳವಾರ ಮೃತ ದಂಪತಿಯ ಅಂತ್ಯಸಂಸ್ಕಾರ ತೋಟತ್ತಾಡಿ ಚರ್ಚ್‌ನಲ್ಲಿ ನಡೆಯಿತು. ಮೃತರ ಮನೆಗೆ ಶಾಸಕ ಕೆ ವಸಂತ ಬಂಗೇರ ಭೇಟಿ ನೀಡಿ ಕುಟುಂಬಕ್ಕ ಸ್ವಾಂತನ ಹೇಳಿದರು. ಆರೋಪಿಗಳ ಬಂಧನಕ್ಕೆ ಶಾಸಕರ ಒತ್ತಾಯ
ವೃದ್ದ ದಂಪತಿ ಕೊಲೆ ಪ್ರಕರಣದ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಶಾಸಕ ಕೆ. ವಸಂತ ಬಂಗೇರ ಒತ್ತಾಯಿಸಿದ್ದಾರೆ. ಈ ಬಗ್ಗೆ ಈಗಾಗಲೇ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದೇನೆ. ಪೋಲೀಸರು ಆರೋಪಿಗಳ ಬಂಧನಕ್ಕೆ ಎಲ್ಲ ರೀತಿಯ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಒಂದೆರಡು ದಿನಗಳಲ್ಲಿ ಆರೋಪಿಗಳು ಬಂಧನವಾಗಲಿದ್ದಾರೆ ಎಂದು ಶಾಸಕ ಕೆ ವಸಂತ ಬಂಗೇರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.







