ಸಂಘರ್ಷಪೀಡಿತ ವಲಯಗಳು ಮಕ್ಕಳ ನರಕ: ಪ್ರತಿ 4ರಲ್ಲಿ 1 ಮಗುವಿನ ಭವಿಷ್ಯ ಅಪಾಯದಲ್ಲಿ; ಯುನಿಸೆ ಫ್
ಲಂಡನ್, ಜ. 12: ಸಂಘರ್ಷ ವಲಯಗಳಲ್ಲಿ ಬೆಳೆಯುವ ಪ್ರತಿ ನಾಲ್ಕು ಮಕ್ಕಳ ಪೈಕಿ ಒಂದು ಮಗು ಶಿಕ್ಷಣದಿಂದ ವಂಚಿತವಾಗುತ್ತದೆ ಎಂದು ವಿಶ್ವಸಂಸ್ಥೆಯ ಮಕ್ಕಳ ಸಂಸ್ಥೆ ಯುನಿಸೆಫ್ ಮಂಗಳವಾರ ಹೇಳಿದೆ. ದಕ್ಷಿಣ ಸುಡಾನ್, ನೈಜರ್, ಸುಡಾನ್ ಮತ್ತು ಅಫ್ಘಾನಿಸ್ತಾನ ಮುಂತಾದ ದೇಶಗಳಲ್ಲಿ ಪರಿಸ್ಥಿತಿ ಭೀಕರವಾಗಿದೆ ಎಂದು ಅದು ಹೇಳಿದೆ.
ಸಂಘರ್ಷ ಪೀಡಿತ 22 ದೇಶಗಳಲ್ಲಿ ಶಾಲೆಗೆ ಹೋಗುವ ಪ್ರಾಯದ ಸುಮಾರು 2.4 ಕೋಟಿ ಮಕ್ಕಳು ಶಾಲೆಯಿಂದ ಹೊರಗಿದ್ದಾರೆ ಎಂದು ಯುನಿಸೆಫ್ ನಡೆಸಿದ ಅಧ್ಯಯನವೊಂದರ ವೇಳೆ ಬೆಳಕಿಗೆ ಬಂದಿದೆ.
ಈ ಪೈಕಿ ಶಾಲೆಯಿಂದ ಹೊರಗಿರುವ ಮಕ್ಕಳ ಪ್ರಮಾಣ ದಕ್ಷಿಣ ಸುಡಾನ್‌ನಲ್ಲಿ 51% ಆಗಿದ್ದು ಅತ್ಯಧಿಕವಾಗಿದೆ. ನಂತರದ ಸ್ಥಾನದಲ್ಲಿ ಬರುವುದು ನೈಜರ್ (47%), ಸುಡಾನ್ (41%) ಮತ್ತು ಅಫ್ಘಾನಿಸ್ತಾನ (40%).
‘‘ಮಕ್ಕಳು ಶಾಲೆಯಲ್ಲಿಲ್ಲದಿರುವಾಗ ಅವರು ಶೋಷಣೆಗೊಳಗಾಗುವ ಅಪಾಯ ಅತಿ ಹೆಚ್ಚು. ಅವರನ್ನು ಸಶಸ್ತ್ರ ಗುಂಪುಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ’’ ಎಂದು ಯುನಿಸೆಫ್‌ನ ಶಿಕ್ಷಣ ಮುಖ್ಯಸ್ಥೆ ಜೋ ಬೌರ್ನ್ ಹೇಳುತ್ತಾರೆ.
‘‘ಒಮ್ಮೆ ಸಂಘರ್ಷ ಮುಗಿದ ಬಳಿಕ, ತಮ್ಮ ಸಮುದಾಯಗಳನ್ನು ಹೇಗೆ ಮರುನಿರ್ಮಿಸಬೇಕು ಎಂಬ ಬಗ್ಗೆ ಜ್ಞಾನ ಮತ್ತು ಕೌಶಲಗಳನ್ನು ಶಾಲೆಗಳು ಮಕ್ಕಳಿಗೆ ನೀಡುತ್ತವೆ. ತಾವು ಅನುಭವಿಸಿದ ಆಘಾತವನ್ನು ನಿಭಾಯಿಸಲು ಅಗತ್ಯವಾದ ಸ್ಥಿರತೆ ಮತ್ತು ವ್ಯವಸ್ಥೆಯನ್ನು ಶಾಲೆಗಳು ಕಡಿಮೆ ಅವಧಿಯಲ್ಲಿ ಮಕ್ಕಳಿಗೆ ಒದಗಿಸುತ್ತವೆ’’ ಎಂದು ಬೌರ್ನ್ ನುಡಿದರು.
ಶಿಕ್ಷಣವಿಲ್ಲದೆ ಮಕ್ಕಳು ಬೆಳೆದರೆ, ಅವರ ಭವಿಷ್ಯ ಡೋಲಾಯಮಾನವಾಗಿರುತ್ತದೆ ಎಂದು ಯುನಿಸೆಫ್ ಹೇಳುತ್ತದೆ.
‘‘ಪ್ರಾಥಮಿಕ ಓದುವಿಕೆ ಮತ್ತು ಬರೆಯುವಿಕೆ ಜ್ಞಾನವಿಲ್ಲದೆ, ಈ ಮಕ್ಕಳು ತಮ್ಮ ಭವಿಷ್ಯವನ್ನು ಕಳೆದುಕೊಳ್ಳುವ ಅಪಾಯವನ್ನು ಎದುರಿಸುತ್ತಾರೆ ಹಾಗೂ ದೊಡ್ಡವರಾದಾಗ ತಮ್ಮ ಸಮಾಜ ಮತ್ತು ಆರ್ಥಿಕತೆಗೆ ದೇಣಿಗೆ ನೀಡುವ ಅವಕಾಶವನ್ನು ಕಳೆದುಕೊಳ್ಳುತ್ತಾರೆ’’’ ಎಂದು ಬೌರ್ನ್ ಹೇಳುತ್ತಾರೆ.
ಮಾನವೀಯ ಪರಿಹಾರ ಕಾರ್ಯಗಳಲ್ಲಿ ಶಿಕ್ಷಣ ಅತ್ಯಂತ ನಿರ್ಲಕ್ಷಕ್ಕೊಳಗಾದ ಕ್ಷೇತ್ರವಾಗಿದೆ. 2014ರಲ್ಲಿ, ಒಟ್ಟು ಮಾನವೀಯ ನೆರವಿನ ಕೇವಲ 2 ಶೇಕಡ ಶಿಕ್ಷಣಕ್ಕೆ ಲಭಿಸಿದೆ ಎಂದು ಯುನೆಸ್ಕೊ ಜೂನ್‌ನಲ್ಲಿ ಹೇಳಿತ್ತು.
ಆದರೆ, ಸಂಘರ್ಷ ಪೀಡಿತ ಪ್ರದೇಶಗಳಲ್ಲಿ ಶಿಕ್ಷಣಕ್ಕೆ ಇದಕ್ಕಿಂತ 10 ಪಟ್ಟು ಹೆಚ್ಚು, ಅಂದರೆ ಹೆಚ್ಚುವರಿಯಾಗಿ 230 ಕೋಟಿ ಡಾಲರ್ ನಿಧಿ ಬೇಕಾಗಿದೆ ಎಂದು ಯುನೆಸ್ಕೊ ಹೇಳಿದೆ.





