ಬೆಂಗರೆ ಆಟೊ ಪಾರ್ಕ್ ಅಧಿಕೃತಗೊಳಿಸಲು ಚಾಲಕರ ಒತ್ತಾಯ
ಮಂಗಳೂರು, ಜ.12: ಬೆಂಗರೆ ಕಸಬದ ಆಟೊರಿಕ್ಷಾ ನಿಲ್ದಾಣವನ್ನು ಎತ್ತಂಗಡಿ ಮಾಡಲು ಕೆಲವು ಸ್ಥಾಪಿತ ಹಿತಾಸಕ್ತಿಗಳು ಹುನ್ನಾರ ನಡೆಸುತ್ತಿದ್ದು, ಈ ಆಟೊ ಪಾರ್ಕನ್ನು ಅಧಿಕೃತಗೊಳಿಸಬೇಕೆಂದು ಒತ್ತಾಯಿಸಿ ಬೆಂಗರೆ ಕಸಬದ ಆಟೊ ರಿಕ್ಷಾ ಚಾಲಕ ಮಾಲಕರ ಸಂಘದ ನೇತೃತ್ವದಲ್ಲಿ ಇಂದು ನಗರದ ಬಂದರು ಇಲಾಖೆಯ ಕಚೇರಿ ಎದುರು ಪ್ರತಿಭಟನೆ ನಡೆಯಿತು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಡಿವೈಎಫ್‌ಐ ಜಿಲ್ಲಾ ಉಪಾಧ್ಯಕ್ಷ ಬಿ.ಕೆ.ಇಮ್ತಿಯಾಝ್, ಬೆಂಗರೆ ಪ್ರದೇಶದ ಜನರಿಗೆ ಕನಿಷ್ಠ ದರ 20ರೂ. ಪ್ರಯಾಣ ದರ ವಿಧಿಸಿ ಉತ್ತಮ ಸೇವೆ ನೀಡುತ್ತಿರುವ ಬೆಂಗರೆ ಆಟೊ ಚಾಲಕರಿಗೆ ಅನಗತ್ಯ ತೊಂದರೆ ಕೊಡುತ್ತಿರುವುದು ಖಂಡನೀಯ ಎಂದರು ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಕಾರ್ಮಿಕ ಮುಖಂಡ ವಿಲ್ಲಿವಿಲ್ಸನ್ ಹಾಗೂ ಆಟೊ ರಿಕ್ಷಾ ಚಾಲಕರ ಸಂಘಟನೆಯ ಮುಖಂಡ ಅನ್ಸಾರ್ ಬಜಾಲ್ ಮಾತನಾಡಿದರು.
ಪ್ರತಿಭಟನೆಯ ನೇತೃತ್ವವನ್ನು ರಿಕ್ಷಾ ಚಾಲಕರ ಮಾಲಕರ ಸಂಘದ ಅಧ್ಯಕ್ಷ ಅಝೀಝ್ ಬೆಂಗರೆ, ಕಾರ್ಯದರ್ಶಿ ಮನ್ಸೂರ್ ಅಹ್ಮದ್, ಡಿವೈಎಫ್‌ಐ ಬೆಂಗರೆ ಗ್ರಾಮ ಸಮಿತಿ ಅಧ್ಯಕ್ಷ ಎ.ಬಿ.ನೌಶಾದ್, ಕಾರ್ಯದರ್ಶಿ ರಿಯಾಝ್ ಬೆಂಗರೆ, ಉಪಾಧ್ಯಕ್ಷ ಹನೀಫ್, ಹಸನ್‌ಮೋನು ಮುಂತಾದವರು ವಹಿಸಿದ್ದರು.





