ಬೈಕಂಪಾಡಿ ಎಪಿಎಂಸಿ ಪ್ರಾಂಗಣದಲ್ಲಿ ಟ್ರಕ್ ಟರ್ಮಿನಲ್‌ಗೆ ಪರಿಶೀಲನೆ: ಭರತ್‌ಲಾಲ್

ಮಂಗಳೂರು, ಜ.12: ಮಂಗಳೂರು ಎಪಿಎಂಸಿಯ ಬೈಕಂಪಾಡಿ ಪ್ರಾಂಗಣದಲ್ಲಿ ಟ್ರಕ್ ಟರ್ಮಿನಲ್ ನಿರ್ಮಿಸುವ ಸಂಬಂಧ ಪರಿಶೀಲಿಸಲಾಗುವುದು ಎಂದು ರಾಜ್ಯ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ದ.ಕ. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಭರತ್‌ಲಾಲ್ ಮೀನಾ ತಿಳಿಸಿದ್ದಾರೆ.
ಅವರು ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡುತ್ತಿದ್ದರು. ವಿಷಯ ಪ್ರಸ್ತಾಪಿಸಿದ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ, ಬೈಕಂಪಾಡಿ ಎಪಿಎಂಸಿ ಪ್ರಾಂಗಣದಲ್ಲಿ ಸುಮಾರು 100 ಎಕರೆಯಷ್ಟು ಜಾಗವಿದೆ. ಆದರೆ ಅಲ್ಲಿ, ಯಾವುದೇ ಮಹತ್ವದ ಕೃಷಿ ಉತ್ಪನ್ನಗಳ ಚಟುವಟಿಕೆಗಳು ನಡೆಯದೆ ಖಾಲಿಬಿದ್ದಿವೆ. ಪ್ರಸ್ತುತ ಬೈಕಂಪಾಡಿ, ನವಮಂಗಳೂರು, ಕೈಗಾರಿಕಾ ಪ್ರದೇಶದ ಸುತ್ತಮುತ್ತ ತೀವ್ರ ಸಂಚಾರ ಸಮಸ್ಯೆ ಇದೆ. ಹೆದ್ದಾರಿಯಲ್ಲಿ ಭಾರೀ ಸಂಖ್ಯೆಯಲ್ಲಿ ಟ್ರಕ್‌ಗಳ ಪಾರ್ಕಿಂಗ್‌ನಿಂದ ಕೂಳೂರಿನಿಂದ ಸುರತ್ಕಲ್‌ವರೆಗೆ ಸಾರ್ವಜನಿಕ ಸಂಚಾರಕ್ಕೆ ಕಳೆದ ಹಲವು ವರ್ಷಗಳಿಂದ ತೀವ್ರ ತೊಂದರೆಯಾಗುತ್ತಿದೆ. ಬೈಕಂಪಾಡಿ ಎಪಿಎಂಸಿ ಪ್ರಾಂಗಣವನ್ನು ಟ್ರಕ್ ಟರ್ಮಿನಲ್ ಆಗಿ ಪರಿವರ್ತಿಸಿದರೆ ಈ ಸಮಸ್ಯೆಗೆ ಶಾಶ್ವತ ಪರಿಹಾರ ಸಾಧ್ಯವಾಗಬಹುದು ಎಂದು ಉಸ್ತುವಾರಿ ಕಾರ್ಯದರ್ಶಿಯ ಗಮನ ಸೆಳೆದರು. ಮನಪಾ ಆಯುಕ್ತ ಡಾ.ಎಚ್.ಎನ್.ಗೋಪಾಲಕೃಷ್ಣ ಮಾತನಾಡಿ, ಬೈಕಂಪಾಡಿ, ಪಣಂಬೂರು ವ್ಯಾಪ್ತಿಯಲ್ಲಿ ಹೆಚ್ಚಿನ ಕೈಗಾರಿಕೆಗಳು ಇರುವುದರಿಂದ ಬೈಕಂಪಾಡಿ ಎಪಿಎಂಸಿ ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ ಸೂಕ್ತವಾಗಿದೆ ಎಂದರು.
ಇದಕ್ಕೆ ಸ್ಪಂದಿಸಿದ ಉಸ್ತುವಾರಿ ಕಾರ್ಯದರ್ಶಿ, ಈ ವಿಚಾರವನ್ನು ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಲಿದೆ. ಈ ಕುರಿತು ವಿವರ ನೀಡಲು ಎಪಿಎಂಸಿ ಅಧಿಕಾರಿಗಳಿಗೆ ಸೂಚಿಸಿದರು.
ಮಂಗಳೂರು ಹಾಗೂ ಪುತ್ತೂರು ಉಪ ನೋಂದಣಾಧಿಕಾರಿಗಳ ಕಚೇರಿಯನ್ನು ತಾಲೂಕಿನ ಮಿನಿ ಧಾನಸೌಧಕ್ಕೆ ಇನ್ನೂ ಸ್ಥಳಾಂತರಿಸದೇ ಇರು ವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಉಸ್ತುವಾರಿ ಕಾರ್ಯದರ್ಶಿ, ಸಾರ್ವಜನಿಕರಿಗೆ ಒಂದೇ ಕಡೆ ಕಂದಾಯ ಇಲಾಖೆಯ ಎಲ್ಲ ಸೌಲಭ್ಯಗಳು ಸಿಗಬೇಕೆಂದು ಮಿನಿಧಾನಸೌಧ ನಿರ್ಮಿಸಲಾಗಿದೆ. ಇದರಲ್ಲಿ ವಿಳಂಬ ಸಲ್ಲದು. ಕೂಡಲೇ ಮಿನಿ ವಿಧಾನಸೌಧಕ್ಕೆ ಸಬ್ ರಿಜಿಸ್ಟ್ರಾರ್ ಕಚೇರಿಯನ್ನು ಸ್ಥಳಾಂತರಿಸಲು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಮಂಗಳೂರು ಮಹಾನಗರಪಾಲಿಕೆಗೆ ನೀರು ಸರಬರಾಜು ಮಾಡುವ ತುಂಬೆ ವೆಂಟೆಡ್ ಡ್ಯಾಂ ಎತ್ತರ ಹೆಚ್ಚಳದಿಂದ ಮುಳುಗಡೆಯಾಗುವ ಪ್ರದೇ ಶಗಳನ್ನು ಗುರುತು ಮಾಡಿ, ಭೂಸ್ವಾಧೀನಕ್ಕೆ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಕಂದಾಯ ಇಲಾಖೆ ಮತ್ತು ಮನಪಾ ಸಮನ್ವಯದಿಂದ ತ್ವರಿತಗತಿಯಲ್ಲಿ ಕ್ರಮ ಜರಗಿಸಲು ಭರತ್‌ಲಾಲ್ ಮೀನಾ ತಿಳಿಸಿದರು.
ಜಿಲ್ಲಾಧಿಕಾರಿ ಮಾತನಾಡಿ, ಮಂಗಳೂರು ವಿಮಾನ ನಿಲ್ದಾಣದ ರನ್ ವೇಯನ್ನು 11,000 ಅಡಿ ವಿಸ್ತರಿಸಲು 68 ಎಕರೆ ಭೂಮಿ ಅಗತ್ಯವಾಗಿದ್ದು, ಈ ಬಗ್ಗೆ 45 ಕೋ.ರೂ. ಮೊತ್ತ ಬೇಕಾಗಿದೆ. ಈ ಸಂಬಂಧ ಪರಿಷ್ಕೃತ ಯೋಜನಾ ವರದಿಯನ್ನು ರಾಜ್ಯ ಸರಕಾರಕ್ಕೆ ಸಲ್ಲಿಸಲಾಗಿದೆ. ಕಂದಾಯ ಇಲಾಖೆಯಲ್ಲಿನ ಸಿಬ್ಬಂದಿಯ ಕೊರತೆಯನ್ನು ನೀಗಿಸಲು ಗ್ರಾಮ ಲೆಕ್ಕಿಗರಿಗೆ ದ್ವಿತೀಯ ದರ್ಜೆ ಸಹಾಯಕರ ವೃಂದ ಬದಲಾವಣೆಗೆ ಅನುಮತಿ ನೀಡಬೇಕೆಂದು ಕೋರಿದರು.
ಸಭೆಯಲ್ಲಿ ಜಿಪಂ ಸಿಇಒ ಪಿ.ಐ.ಶ್ರೀವಿದ್ಯಾ, ಅಪರ ಜಿಲ್ಲಾಧಿಕಾರಿ ಕುಮಾರ್, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಶಿಕ್ಷಣ ಹಕ್ಕು ಕಾಯ್ದೆ(ಆರ್‌ಟಿಇ)ಯಡಿ ಬಡವರ ಮಕ್ಕಳು, ದುರ್ಬಲ ವರ್ಗಗಳ ಮಕ್ಕಳಿಗೆ ಆದ್ಯತೆಯಲ್ಲಿ ಶಾಲಾ ಪ್ರವೇಶ ಸಿಗುವುದನ್ನು ಖಾತರಿಪಡಿಸಬೇಕು ಎಂದು ದ.ಕ. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಭರತ್‌ಲಾಲ್ ಮೀನಾ ಶಿಕ್ಷಣ ಇಲಾಖೆಗೆ ತಿಳಿಸಿದರು.
ಎಂಡೋಸಲ್ಫಾನ್ ಸಂತ್ರಸ್ತರಿಗೆ ಬಾಕಿ ಇರುವ ಮಿತವೇತನವನ್ನು ಶೀಘ್ರವೇ ಬಿಡುಗಡೆ ಮಾಡ ಬೇಕು. ಲಭ್ಯ ಇರುವ ಮೊತ್ತವನ್ನು ಅರ್ಹ ಫಲಾನುಭವಿಗಳಿಗೆ ಬಿಡುಗಡೆ ಮಾಡಿ ಬಾಕಿ ಪಾವತಿಸಲು ಕ್ರಮ ಕೈಗೊಳ್ಳಲು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಭರತ್‌ಲಾಲ್ ಸೂಚಿಸಿದರು.







