ಉದ್ದಿಮೆದಾರರ ಆಕರ್ಷಣೆಗೆ ಸಾಮಾಜಿಕ ಸಾಮರಸ್ಯವೂ ಅಗತ್ಯ: ಸಚಿವ ರೈ

ದ.ಕ. ಜಿಲ್ಲಾ ಮಟ್ಟದ ಹೂಡಿಕೆದಾರರ ಸಮಾವೇಶ
ಮಂಗಳೂರು, ಜ.12: ದ.ಕ. ಜಿಲ್ಲೆಯಲ್ಲಿ ಉದ್ಯಮಶೀಲತೆಯನ್ನು ಹೊಂದಿರುವ, ಹೂಡಿಕೆಗೆ ಉತ್ಸುಕರಾಗಿರುವ ಸಾಕಷ್ಟು ಮಂದಿ ಇದ್ದು, ಜಿಲ್ಲೆಗೆ ಹೊರಗಿನಿಂದ ಉದ್ದಿಮೆದಾರ ರನ್ನು ಆಕರ್ಷಿಸಲು ಸಾಮಾಜಿಕ ಸಾಮ ರಸ್ಯದ ಅಗತ್ಯವೂ ಇದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅಭಿ ಪ್ರಾಯಿಸಿದ್ದಾರೆ. ಕರ್ನಾಟಕ ಸರಕಾರವು ಫೆಬ್ರವರಿ 3ರಿಂದ 5ರವರೆಗೆ ಬೆಂಗಳೂರಿನಲ್ಲಿ ಹಮ್ಮಿಕೊಂಡಿರುವ ರಾಜ್ಯಮಟ್ಟದ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಪೂರಕವಾಗಿ ಇಂದು ನಗರದ ಟಿ.ಎಂ.ಎ. ಪೈ ಕನ್ವೆನ್ಶನ್ ಸೆಂಟರ್‌ನಲ್ಲಿ ಆಯೋಜಿಸಲಾಗಿದ್ದ ದ.ಕ. ಜಿಲ್ಲಾಮಟ್ಟದ ಹೂಡಿಕೆದಾರರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಜಿಲ್ಲೆಯಲ್ಲಿ ಹೂಡಿಕೆಯನ್ನು ಮುಕ್ತ ಮನ ಸ್ಸಿನಿಂದ ಸ್ವಾಗತಿಸುವ ಮತ್ತು ಉದ್ದಿಮೆಗೆ ಅನುಕೂಲಕರ ವಾತಾವರಣ ಇದೆ ಎಂದು ಹೇಳಿದ ಅವರು, ಸಮಾವೇಶ ಹೆಚ್ಚಿನ ಸಂಖ್ಯೆಯ ಉದ್ದಿಮೆದಾರರನ್ನು ಆಕರ್ಷಿಸುವ ಕಾರ್ಯಕ್ರಮ ಎಂದರು. ಪರಿಸರವನ್ನು ಹಾಳು ಮಾಡದೆ ತುಲನಾತ್ಮಕ ವಾಗಿ ಹೊಂದಾಣಿಕೆ ಮಾಡಿಕೊಂಡು ಉದ್ದಿಮೆ ಯನ್ನು ಮಾಡುವ ಜೊತೆಗೆ, ಉದ್ಯಮಶೀಲ ಗುಣವುಳ್ಳ ಪ್ರತಿಭೆಗಳನ್ನು ಉಪಯೋಗಿಸಿಕೊ ಳ್ಳುವ ಅಗತ್ಯವಿದೆ ಎಂದು ಅವರು ಹೇಳಿದರು. ದ.ಕ. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಭರತ್ ಲಾಲ್ ಮೀನಾ ಮಾತ ನಾಡಿ, ಬಂದರು, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ದೇಶದ ಇತರ ರಾಜ್ಯಗಳನ್ನು ಸಂಪ ರ್ಕಿಸುವ ರಾಷ್ಟ್ರೀಯ ಹೆದ್ದಾರಿಗಳು, ರೈಲ್ವೆ ಸಂಪರ್ಕ ಮೊದಲಾದ ಎಲ್ಲ ರೀತಿಯ ಮೂಲಭೂತ ಸೌಲಭ್ಯಗಳನ್ನು ಹೊಂದಿರುವ ಮಂಗಳೂರು ಕರ್ನಾಟಕದ ಹೆಬ್ಬಾಗಿಲು ಆಗುವ ಎಲ್ಲ ಸಾಧ್ಯತೆಗಳನ್ನು ಹೊಂದಿದ್ದರೂ ಇನ್ನೂ ಏಕೆ ಆಗಿಲ್ಲ ಎಂಬ ಬಗ್ಗೆ ಗಂಭೀರ ಚಿಂತನೆಯ ಅಗತ್ಯವಿದೆ ಎಂದರು. ಜಿಲ್ಲೆಯಲ್ಲಿ ಹೂಡಿಕೆಗೆ ಉದ್ಯಮಿಗಳು ಮುಂದೆ ಬರುತ್ತಿದ್ದು, ಉದ್ದಿಮೆಗಳ ಪೂರಕವಾದ ವಾತಾವರಣವನ್ನು ಕಲ್ಪಿಸುವುದು ಹಾಗೂ ಮನೆಗೊಂದು ಉದ್ಯೋಗಾವಕಾಶ ಒದಗಿಸುವ ವ್ಯವಸ್ಥೆ ಬಗ್ಗೆ ಗಮನಹರಿಸ ಬೇಕೆಂದು ಅವರು ಅಭಿಪ್ರಾಯಿಸಿದರು. ದ.ಕ. ಜಿಲ್ಲಾಡಳಿತ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರದ ವತಿಯಿಂದ ಆಯೋಜಿಸಲಾದ ಸಮಾರಂಭವನ್ನುದ್ದೇಶಿಸಿ ಶಾಸಕರಾದ ಮೊಯ್ದಿನ್ ಬಾವ, ದ.ಕ. ಜಿಪಂ ಅಧ್ಯಕ್ಷೆ ಆಶಾ ತಿಮ್ಮಪ್ಪಗೌಡ ಮಾತನಾಡಿದರು. ಮೇಯರ್ ಜೆಸಿಂತಾ ವಿಜಯ್ ಆಲ್ಫ್ರೆಡ್, ಮುಡಾ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಉಪ ಮೇಯರ್ ಪುರುಷೋತ್ತಮ ಚಿತ್ರಾಪುರ, ಜಿಪಂ ಸಿಇಒ ಶ್ರೀವಿದ್ಯಾ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಭರತ್ ಲಾಲ್ ಮೀನಾ, ಕೆಸಿಸಿಐ ಅಧ್ಯಕ್ಷ ರಾಮ್ಮೋಹನ್ ಪೈ ಮಾರೂರು ಉಪಸ್ಥಿತರಿದ್ದರು.
ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಗೋಕುಲ್ ದಾಸ್ ನಾಯಕ್ ಸ್ವಾಗತಿಸಿದರು. ದ.ಕ. ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ವೆಂಕಟೇಶ್ ಜೆಪ್ಪು ವಂದಿಸಿದರು. ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭ ಕಂಪೆನಿಗಳ ಮುಖ್ಯಸ್ಥ ರನ್ನು ಅಭಿನಂದಿಸಲಾಯಿತು.
ಸರಕಾರ ಪೂರ್ಣ ಮನಸ್ಸಿನಿಂದ ಕಾರ್ಯ ನಿರ್ವಹಿಸಲಿ: ಶಾಸಕ ಲೋಬೊ
ಉದ್ಯಮಗಳು ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸಬೇಕಾದರೆ ಅವು ಗಳಿಗೆ ಅಗತ್ಯವಾದ ಮೂಲಭೂತ ಸೌಲಭ್ಯಗಳನ್ನು ಸರಕಾರ ಒದಗಿಸಿ ಕೊಡಬೇಕು. ದ.ಕ. ಜಿಲ್ಲೆಗೆ ಸಂಬಂಧಿಸಿ ಸರಕಾರ ಈ ಬಗ್ಗೆ ಗಮನ ಹರಿಸಬೇಕು ಎಂದು ಶಾಸಕ ಜೆ.ಆರ್.ಲೋಬೊ ಹೇಳಿದರು. ದ.ಕ. ಜಿಲ್ಲೆಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿಂದ ಉದ್ಯಮಗಳು ಫಲಪ್ರದ ವಾಗುತ್ತಿಲ್ಲ. ಸರಕಾರ ಈ ಬಗ್ಗೆ ಗಮನಹರಿಸುತ್ತಿಲ್ಲ ಎಂದು ಸರಕಾರದ ವಿರುದ್ಧವೇ ಅಸಮಾ ಧಾನ ವ್ಯಕ್ತಪಡಿಸಿದ ಅವರು, ಮುಡಿಪುವಿನಲ್ಲಿ ಐಟಿ ಪಾರ್ಕ್ ನಿರ್ಮಾಣವಾಗಿದ್ದರೂ ಅಲ್ಲಿಗೆ ಹೋಗಲು ಸರಿಯಾದ ರಸ್ತೆಯೇ ಇಲ್ಲ. ಕೈಗಾರಿಕಾ ಇಲಾಖೆಯಿಂದ ಜಾಗ ದೊರೆ ಯಬೇಕಾದರೆ ತಿಂಗಳುಗಟ್ಟಲೆ ಕಾಯಬೇಕಾಗುತ್ತದೆ. ದ.ಕ. ಜಿಲ್ಲೆಗೆ ಐಟಿ ಸೆಕ್ಟರ್‌ಗಳು ಕಾಲಿಡಬೇಕಾದರೆ ಸರಕಾರ ತನ್ನ ಕೆಲಸವನ್ನು ಪೂರ್ಣ ಮನಸ್ಸಿನಿಂದ ಮಾಡಬೇಕು ಎಂದು ಲೋಬೊ ತೀಕ್ಷ್ಣವಾಗಿ ನುಡಿದರು.
33 ಕಂಪೆನಿಗಳಿಂದ 12,000 ಕೋ.ರೂ. ಹೂಡಿಕೆ
ದ.ಕ. ಜಿಲ್ಲಾ ಬಂಡವಾಳ ಹೂಡಿಕೆದಾರರ ಸಮಾ ವೇಶದಲ್ಲಿ ಜಿಲ್ಲೆಯ 33ಕ್ಕೂ ವಿವಿಧ ಉದ್ಯಮ ಕಂಪೆನಿಗಳು 12,000 ಕೋ.ರೂ. ಬಂಡವಾಳ ಹೂಡಿಕೆಗೆ ಮುಂದಾಗಿವೆ. 4 ಎಕರೆ ಪ್ರದೇಶದಲ್ಲಿ ಸ್ಥಾಪನೆಯಾಗಲಿರುವ ದಿಯಾ ಸಿಸ್ಟಮ್ಸ್‌ನ ಮಂಗಳೂರು ಪ್ರೈ.ಲಿ.ನ ಐಟಿ ಸೆಂಟರ್ ಮತ್ತು ಬಿಪಿಒ ಸರ್ವಿಸ್ ಮೂಲಕ 1,500 ಉದ್ಯೋಗವಕಾಶದ ಗುರಿ ಹೊಂದಿದ್ದು, ಡಾ.ಬಿ.ಆರ್. ಶೆಟ್ಟಿ ಅಬುಧಾಬಿ ಸಂಸ್ಥೆಯು ಫಾರ್ಮಾ ಸುಟಿಕಲ್ಸ್ ಉದ್ದಿಮೆಯ ಮೂಲಕ 500 ಉದ್ಯೋಗಾವಕಾಶವನ್ನು ಕಲ್ಪಿಸಲಿದೆ. ಐಒಸಿಎಲ್ ಸಂಸ್ಥೆಯು ಎಲ್‌ಪಿಜಿ ಬಾಟ್ಲಿಂಗ್ ಸ್ಥಾವರ ಉದ್ದಿಮೆಯ ಮೂಲಕ 400 ಉದ್ಯೋ ಗಾವಕಾಶ, ನಿಯಾಝ್ ಸೀ ಫುಡ್ ಎಕ್ಸ್‌ಪೋರ್ಟ್ಸ್ 25 ಎಕರೆಯಲ್ಲಿ ಸಮುದ್ರ ಆಹಾರ ಉತ್ಪಾದನಾ ಘಟಕದ ಮೂಲಕ 350 ಮಂದಿಗೆ ಉದ್ಯೋಗಾವಕಾಶ ಕಲ್ಪಿಸಲಿದೆ. ಕಾಂತಿ ಅಪಾರೆಲ್ ಸಂಸ್ಥೆಯು ಗಾರ್ಮೆಂಟ್ ಸ್ಟಿಚ್ಚಿಂಗ್ ಮತ್ತು ಫಿನಿಶಿಂಗ್ ಉದ್ಯಮದ ಮೂಲಕ 300 ಮಂದಿಗೆ ಉದ್ಯೋ ಗಾವಕಾಶ, ರಿಲಾಯೆಬಲ್ ಕ್ಯಾಶ್ಯೂ ಇಂಡಸ್ಟ್ರೀಸ್ , ಗೇರುಬೀಜ ಸಂಸ್ಕರಣೆ ಉದ್ಯಮದ ಮೂಲಕ 225 ಮಂದಿಗೆ ಉದ್ಯೋಗ ಕಲ್ಪಿಸುವ ಉದ್ದೇಶ ಹೊಂದಿದೆ. ಪ್ರಸ್ತುತ ಹೂಡಿಕೆಗೆ ಮುಂದೆ ಬಂದಿರುವ 33 ವಿವಿಧ ಕಂಪೆನಿಗಳ ಮೂಲಕ ಒಟ್ಟು 4,665 ಮಂದಿಗೆ ಉದ್ಯೋಗಾವಕಾಶಗಳು ಲಭ್ಯವಾಗುವ ನಿರೀಕ್ಷೆ ಇದೆ. ಎನ್‌ಎಂಪಿಟಿಯಲ್ಲಿ ಲಾಂಗ್ ಟರ್ಮಿನಲ್, ರಿಫೈನರಿಗಳನ್ನು ಮೇಲ್ದರ್ಜೆಗೇರಿಸುವ ಯೋಜನೆಗಳಿಗಾಗಿ ಎಂಆರ್‌ಪಿಲ್ ಈ ಸಮಾ ವೇಶದಲ್ಲಿ 10,000 ಕೋ.ರೂ. ಹೂಡಿಕೆಗೆ ಮುಂದಾಗಿದ್ದು, ಸೈನ್‌ಜಿನ್ ಸಂಸ್ಥೆಯು 600 ಕೋ.ರೂ.ನ್ನು, ರುಚಿ ಸೋಯಾ ಇಂಡಸ್ಟ್ರೀಸ್ 350 ಕೋ.ರೂ., ಡಾ.ಬಿ.ಆರ್. ಶೆಟ್ಟಿ ಅಬುಧಾಬಿ ಹಾಗೂ ಡಾ.ಬಿ.ಆರ್.ಶೆಟ್ಟಿ ಸಂಸ್ಥೆಗಳು ತಲಾ 250 ಕೋ.ರೂ., ಶ್ರೀ ಅನಘ ರಿಫೈನರಿ ಪ್ರೈವೇಟ್ ಲಿಮಿಟೆಡ್ 110 ಕೋ.ರೂ., ಐಒಸಿ ಎಲ್ ಹಾಗೂ ಅನಿತಾ ಅರೋಮ್ಯಾಟಿಕ್ಸ್ ತಲಾ 100 ಕೋ.ರೂ., ದಿಯಾ ಸಿಸ್ಟಮ್ಸ್ ಮಂಗಳೂರು ಪ್ರೈವೇಟ್ ಲಿ. 50 ಕೋ.ರೂ., ಎವರ್‌ಮೋರ್ ರೆಸಾರ್ಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಗುರುಪುರ ಹೊಟೇಲ್ ಉದ್ಯಮಕ್ಕಾಗಿ 45 ಕೋ.ರೂ., ಸುಧಾಕರ ಪೈ ಮಂಗಳೂರು ಸ್ಟೀಲ್ ಉತ್ಪಾದನಾ ಘಟಕಕ್ಕಾಗಿ 25 ಕೋ.ರೂ., ನಿಯಾಝ್ ಸೀ ಫುಡ್ ಎಕ್ಸ್‌ಪೋರ್ಟ್ ಸಂಸ್ಥೆಯು ಸಮುದ್ರ ಮೀನು ಉತ್ಪನ್ನಗಳ ಉದ್ದಿಮೆಗಾಗಿ 20 ಕೋ.ರೂ., ಪ್ರೆಶಿಯಸ್ ಎಕ್ಸ್ ಪೋರ್ಟ್ 12 ಕೋ.ರೂ., ಮೆಡೋಗಾರ್ನಿಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ 11.35 ಕೋ.ರೂ., ಪ್ಲಾಂಟ್ ಟೆಕ್ ಇಂಟರ್‌ನ್ಯಾಷನಲ್ ಲಿಮಿಟೆಡ್ 8 ಕೋ.ರೂ., ಜನನಿಯಲ್ ಎಂಟರ್‌ಪ್ರೈಸಸ್ 8 ಕೋ.ರೂ., ಗಣಪತಿ ಆರ್. ಹೆಗ್ಡೆ ಗುಜರಾತ್ 7 ಕೋ.ರೂ., ಮರಿಯಮ್ ಪ್ಯಾನಲ್ಸ್ ಬೈಕಂಪಾಡಿ 6.50 ಕೋ.ರೂ., ಅಕ್ವಾಮ್ಯಾಟರ್ ಸೊಲ್ಯೂಷನ್ಸ್ 5.50 ಕೋ.ರೂ., ಆಯೆಷಾ ಪ್ಯಾನಲ್ಸ್ 5 ಕೋ. ರೂ., ರಿಲಾಯಬಲ್ ಕ್ಯಾಶ್ಯೂ ಇಂಡಸ್ಟ್ರೀಸ್ 4 ಕೋ.ರೂ., ಕಾಂತಿ ಅಪಾರೆಲ್ 3.50 ಕೋ.ರೂ., ಅಮ್ಯಾಕೋ ಮ್ಯಾನುಫ್ಯಾಕ್ಚರಿಂಗ್ ಆ್ಯಂಡ್ ಇಂಡಸ್ಟ್ರಿಯಲ್ ಸರ್ವಿಸ್ ಪ್ರೈವೇಟ್ ಲಿಮಿಟೆಡ್, ಎಂಜಿಯನ್ ಹೋಲ್ಡಿಂಗ್ಸ್, ಹೇರಂಬಾ ಕಂಫರ್ಟ್ಸ್ ತೊಕ್ಕೊಟ್ಟು, ಜಿಪ್ಸಿ ವುಡ್ಸ್ ಮೋಟೆಲ್ಸ್ ಬೆಳುವಾಯಿ, ಸಾಯಿ ಇಂಟರ್‌ನ್ಯಾಷನಲ್ ಪ್ರೈ. ಲಿ. ಪುತ್ತೂರು, ವಿಕ್ರಮ್ ರೆಸಿಡೆನ್ಸಿ ಪುತ್ತೂರು, ವಿವೇಕ್ ಟ್ರೇಡರ್ಸ್ ಧನ್ವಂತರಿ ನಗರ್ ಮೊದಲಾದ ಕಂಪೆನಿಗಳು ತಲಾ 3 ಕೋ.ರೂ.ನ್ನು, ಬೇಲೈನ್ ಪ್ಲಾಸ್ಟಿಕ್ ಇಂಡಸ್ಟ್ರೀಸ್ 2.50 ಕೋ.ರೂ. ಹಾಗೂ ಸ್ಯಾಂಕ್ಟಮ್ ಡೆಂಟಲ್ ಸ್ಪಾ ಸೋಮೇಶ್ವರ 2 ಕೋ.ರೂ.ನ್ನು ವಿವಿಧ ಉದ್ದಿಮೆಗಳಿಗಾಗಿ ಹೂಡಿಕೆ ಮಾಡಲು ಮುಂದಾಗಿವೆ.







