ಭಾರತ ದೂತಾವಾಸ ದಾಳಿಯಲ್ಲಿ ಪಾಕ್ ಸೇನಾಧಿಕಾರಿ ಕೈವಾಡ: ಅಫ್ಘಾನ್

ಕಾಬೂಲ್: ಅಫ್ಘಾನಿಸ್ತಾನದ ಮಝರ್-ಇ- ಷರೀಫ್‌ನಲ್ಲಿ ಕಳೆದ ವಾರ ಭಾರತ ದೂತಾವಾಸ ಕಚೇರಿ ಮೇಲೆ ನಡೆದ ದಾಳಿಯಲ್ಲಿ ಪಾಕಿಸ್ತಾನಿ ಸೇನಾಧಿಕಾರಿಗಳ ಕೈವಾಡವಿದೆ ಎಂದು ಅಫ್ಘಾನಿಸ್ತಾನದ ಉನ್ನತ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಜನವರಿ ನಾಲ್ಕರಂದು ನಡೆದ ದಾಳಿಯಲ್ಲಿ ಒಬ್ಬ ಅಫ್ಘಾನ್ ಪೊಲೀಸ್ ಮೃತಪಟ್ಟು, ಮೂವರು ನಾಗರಿಕರು ಸೇರಿದಂತೆ ಒಂಬತ್ತು ಮಂದಿ ಗಾಯಗೊಂಡಿದ್ದರು. ಇದೇ ದಿನ ಭಾರತದ ಪಠಾಣ್‌ಕೋಟ್ ವಾಯುನೆಲೆ ಮೇಲೆ ಉಗ್ರರು ದಾಳಿ ನಡೆಸಿದ್ದರು.
ಮಝರ್-ಇ- ಷರೀಫ್ ದಾಳಿಕೋರರು ಉತ್ತಮ ತರಬೇತಿ ಹೊಂದಿದ ಸೈನಿಕರಾಗಿದ್ದು, ಗಡಿಯಾಚೆಗಿನವರು. 25 ಗಂಟೆ ಕಾಳಗದಲ್ಲಿ ಅಪ್ಘಾನ್ ಭದ್ರತಾ ಪಡೆ ಸಿಬ್ಬಂದಿ ಜತೆ ಹೋರಾಟ ನಡೆಸಿದ್ದ. ಮೂವರು ದಾಳಿಕೋರರನ್ನೂ ಅಫ್ಘಾನ್ ಪೊಲೀಸರು ಹತ್ಯೆ ಮಾಡಿದ್ದರು ಎಂದು ಬಲ್ಖ್ ಪ್ರಾಂತ್ಯದ ಪೊಲೀಸ್ ಮುಖ್ಯಸ್ಥ ಸೈಯದ್ ಕಮಾಲ್ ಸಾದತ್ ಸ್ಪಷ್ಟಪಡಿಸಿದ್ದಾರೆ.
"ಇದನ್ನು ನಾವು ಕಣ್ಣಾರೆ ಕಂಡಿದ್ದೇವೆ. ಈ ದಾಳಿಕೋರರು ಪಾಕಿಸ್ತಾನದ ಸೇನೆಯವರು. ತಮ್ಮ ಕಾರ್ಯಾಚರಣೆಗೆ ವಿಶೇಷ ತಂತ್ರಗಳನ್ನು ಅನುಸರಿಸಿದ್ದಾರೆ" ಎಂದು ಸಾದರ್ ಹೇಳಿದ್ದಾಗಿ ಟೋಲೊ ಸುದ್ದಿವಾಹಿನಿ ವರದಿ ಮಾಡಿದೆ.





