ಮುಸ್ಲಿಂ ಜನಸಂಖ್ಯೆಯಲ್ಲಿ ಯುವ ಪಾಲು ಅಧಿಕ
ಭಾರತದ ಮುಸ್ಲಿಂ ಜನಸಂಖ್ಯೆಯಲ್ಲಿ ಹದಿಹರೆಯದವರು ಸೇರಿದಂತೆ ಮಕ್ಕಳು (0-19 ವಯೋಮಿತಿ) ಅಧಿಕ ಪ್ರಮಾಣದಲ್ಲಿ ಇರುವುದು 2011ರ ಜನಗಣತಿ ಮಾಹಿತಿಯಿಂದ ಸ್ಪಷ್ಟವಾಗಿದೆ. ಮುಸ್ಲಿಂ ಸಮುದಾಯದಲ್ಲಿ ಒಟ್ಟು ಮಕ್ಕಳ ಸಂಖ್ಯೆ ಶೇಕಡ 47 ಇದ್ದರೆ, ಹಿಂದೂ ಸಮುದಾಯದಲ್ಲಿ ಶೇಕಡ 40 ಹಾಗೂ ಜೈನ ಸಮುದಾಯದಲ್ಲಿ ಶೇಕಡ 29ರಷ್ಟು ಮಕ್ಕಳು ಇದ್ದಾರೆ.
ಎಲ್ಲ ಸಮುದಾಯದವರನ್ನು ಪರಿಗಣಿಸಿದರೆ, ಶೇಕಡ 41ರಷ್ಟು ಮಂದಿ 20 ವರ್ಷಕ್ಕಿಂತ ಕಡಿಮೆ ವಯಸ್ಸಿನವರು. 60 ವರ್ಷಕ್ಕಿಂತ ಮೇಲ್ಪಟ್ಟವರ ಸಂಖ್ಯೆ ಶೇಕಡ 9 ಇದ್ದು, ಶೇಕಡ 50ರಷ್ಟು ಮಂದಿ 20-59 ವಯೋಮಾನದವರು ಎಂದು ಮಂಗಳವಾರ ಬಿಡುಗಡೆ ಮಾಡಲಾದ ಅಂಕಿ ಅಂಶ ಹೇಳಿದೆ.
ಎಲ್ಲ ಸಮುದಾಯಗಳ ಜೀವನಚಕ್ರವನ್ನು ಗಮನಿಸಿದರೆ, ಮಕ್ಕಳ ಪ್ರಮಾಣ ಕಡಿಮೆಯಾಗುತ್ತಿದ್ದು, ಹಿರಿಯರ ಸಂಖ್ಯೆ ಹೆಚ್ಚುತ್ತಿದೆ. ಸರಾಸರಿ ಜೀವಿತಾವಧಿಯಲ್ಲಿ ವಿವಿಧ ಧರ್ಮಗಳ ಮಧ್ಯೆ ಅಗಾಧ ಅಂತರ ಕಂಡುಬರುತ್ತಿದೆ.
2001ರ ಜನಗಣತಿಯಲ್ಲಿ ಯುವ ಪಾಲು ರಾಷ್ಟ್ರೀಯವಾಗಿ ಶೇಕಡ 45ರಷ್ಟಿತ್ತು. ಮುಸಲ್ಮಾನರಲ್ಲಿ ಶೇಕಡ 52, ಹಿಂದೂಗಳಲ್ಲಿ ಶೇಕಡ 44 ಹಾಗೂ ಜೈನರಲ್ಲಿ ಶೇಕಡ 35ರಷ್ಟು ಯುವಕರಿದ್ದರು. ಅಂದರೆ ಎಲ್ಲ ಸಮುದಾಯಗಳಲ್ಲಿ ಫಲವತ್ತತೆ ಪ್ರಮಾಣ ಕಡಿಮೆಯಾಗಿದೆ. ಆದರೆ ಈ ಇಳಿಕೆ ಪ್ರಮಾಣ ಹಿಂದೂಗಳಲ್ಲಿ ಕನಿಷ್ಟ ಹಾಗೂ ಬೌದ್ಧ ಮತ್ತು ಕ್ರೈಸ್ತರಲ್ಲಿ ಅಧಿಕವಾಗಿದೆ.
ಮುಸ್ಲಿಂ ಸಮುದಾಯದಲ್ಲಿ ಜೀವಿತಾವಧಿ ಕೂಡಾ ಕಡಿಮೆ ಇರುವುದನ್ನು ಅಂಕಿ ಅಂಶ ಸ್ಪಷ್ಟಪಡಿಸಿದೆ. ಇಲ್ಲಿ 60 ವರ್ಷ ಮೇಲ್ಪಟ್ಟವರ ಸಂಖ್ಯೆ ಶೇಕಡ 6.4ರಷ್ಟಿದ್ದು, ಇದು ರಾಷ್ಟ್ರೀಯ ಸರಾಸರಿಯ ಅರ್ಧದಷ್ಟು.







