ಭಾರತೀಯ ಸೇನೆ ಯಾವುದಕ್ಕೂ ಸನ್ನದ್ಧ ಸೇನಾ ಮುಖ್ಯಸ್ಥ ಜ| ದಲ್ಬೀರ್ ಸಿಂಗ್ ಗುಡುಗು

ಹೊಸದಿಲ್ಲಿ,ಜ.13: ಭಾರತಕ್ಕೆ ನೋವನ್ನುಂಟು ಮಾಡಿದವರಿಗೆ ನಮ್ಮ ಆಯ್ಕೆಯ ಸಮಯ ಮತ್ತು ಸ್ಥಳದಲ್ಲಿ ಅಂತಹುದೇ ನೋವನ್ನುಣ್ಣಿಸುವುದಾಗಿ ರಕ್ಷಣಾ ಸಚಿವ ಮನೋಹರ ಪಾರಿಕ್ಕರ್ ಅವರು ಎಚ್ಚರಿಕೆ ನೀಡಿದ ಬೆನ್ನಲ್ಲೇ ಭೂಸೇನೆಯ ದಂಡನಾಯಕ ಜ| ದಲ್ಬೀರ್ ಸಿಂಗ್ ಅವರು,ಭಾರತೀಯ ಸೇನೆಯು ಯಾವುದೇ ಕಾರ್ಯಕ್ಕೂ ಸನ್ನದ್ಧವಾಗಿದೆ ಎಂದು ಗುಡುಗಿದ್ದಾರೆ.
ಆದರೆ ರಕ್ಷಣಾ ಸಚಿವರ ಹೇಳಿಕೆಗೆ ಪ್ರತಿಕ್ರಿಯಿಸಲು ತಾನು ಬಯಸುವುದಿಲ್ಲ ಎಂದು ಅವರು ಹೇಳಿದರು.ಬುಧವಾರ ಇಲ್ಲ್ಲಿ ಸುದ್ದಿಗಾರರೊಂದಿಗೆ ಜ.2ರ ಪಠಾಣ್‌ಕೋಟ್ ದಾಳಿಯ ಕುರಿತು ಮಾತನಾಡಿದ ಅವರು,ವಾಯುನೆಲೆಯ ಮೇಲೆ ದಾಳಿ ನಡೆಸಿದ್ದ ಆರು ಭಯೋತ್ಪಾದಕರನ್ನು ಮಟ್ಟ ಹಾಕುವ ಕಾರ್ಯಾಚರಣೆ ಸಂದರ್ಭ ಭದ್ರತಾ ಪಡೆಗಳ ನಡುವೆ ಸಮನ್ವಯದ ಸಮಸ್ಯೆಯಿರಲಿಲ್ಲ ಎಂದು ಒತ್ತಿ ಹೇಳಿದರು.
ಕಾರ್ಯಾಚರಣೆಯ ಸಂದರ್ಭ ಭದ್ರತಾ ಪಡೆಗಳ ನಡುವೆ ಸಮನ್ವಯದ ಕೊರತೆಯಿತ್ತು,ಎಲ್ಲ ಭಯೋತ್ಪಾದಕರನ್ನು ಕೊಲ್ಲಲು ಮತ್ತು ವಾಯುನೆಲೆಯನ್ನು ಆತಂಕಮುಕ್ತಗೊಳಿಸಲು ತಗುಲಿದ ಮೂರು ದಿನಗಳ ಸಮಯ ತುಂಬ ದೀರ್ಘವಾಗಿತ್ತು ಎಂಬ ಆರೋಪಗಳಿಗೆ ಅವರು ಉತ್ತರಿಸುತ್ತಿದ್ದರು.
ಇಬ್ಬರು ಭಯೋತ್ಪಾದಕಕರು ಅಡಗಿಕೊಂಡಿದ್ದ ಕಟ್ಟಡದಲ್ಲಿ ಇಬ್ಬರು ಯೋಧರಿದ್ದರು. ನಾವು ಅವರನ್ನು ಮೊದಲು ಸುರಕ್ಷಿತವಾಗಿ ಹೊರಗೆ ತೆಗೆದು ಬಳಿಕ ಪ್ರತಿದಾಳಿಯನ್ನು ನಡೆಸಬೇಕಾಗಿತ್ತು. ಅದು ಸುಲಭದ ಕಾರ್ಯಾಚರಣೆಯಾಗಿರಲಿಲ್ಲ ಮತ್ತು ಸಾವುನೋವುಗಳನ್ನು ಕನಿಷ್ಠಗೊಳಿಸಲು ನಾವು ನಮ್ಮದೇ ಸಮಯವನ್ನು ತೆಗೆದುಕೊಂಡಿದ್ದೆವು ಎಂದು ಸುಹಾಗ್ ವಿವರಿಸಿದರು.
ಕಾರ್ಯಾಚರಣೆಯನ್ನು ಪೂರ್ಣಗೊಳಿಸಲು ಸಮಯದ ನಿರ್ಧಾರವನ್ನು ಸ್ಥಳದಲ್ಲಿರುವ ಅದರ ಮುಖ್ಯಸ್ಥರಿಗೇ ಬಿಡಬೇಕಾಗುತ್ತದೆ ಎಂದರು.
ಭಯೋತ್ಪಾದಕರೊಂದಿಗೆ ಮೊದಲ ಮುಖಾಮುಖಿಯ ಮೊದಲ ಕೆಲವು ನಿಮಿಷಗಳಲ್ಲಿ ನಮ್ಮ ಯೋಧರು ಕೊಲ್ಲಲ್ಪಟ್ಟಿದ್ದರು, ಆ ಬಳಿಕ ನಮ್ಮ ಪಡೆಗಳಲ್ಲಿ ಯಾವುದೇ ಸಾವುನೋವು ಸಂಭವಿಸಿಲ್ಲ ಎಂದು ಅವರು ಹೇಳಿದರು. ಭಾರೀ ಬಿಗಿಭದ್ರತೆಯ ವಾಯುನೆಲೆಯಲ್ಲಿ ಪ್ರವೇಶಿಸಲು ಭಯೋತ್ಪಾದಕರಿಗೆ ಅವಕಾಶ ನೀಡಿದ್ದೇ ಭದ್ರತಾ ವ್ಯವಸ್ಥೆಯಲ್ಲಿನ ಲೋಪದೋಷಗಳು ಎಂಬ ಟೀಕೆಗಳಿಗೆ ಸರಕಾರವು ಗುರಿಯಾಗಿತ್ತು.
ಸಂಭವನೀಯ ದಾಳಿಗಳ ಬಗ್ಗೆ ಗುಪ್ತಚರ ಮಾಹಿತಿಗಳಿದ್ದರೂ ಭಯೋತ್ಪಾದಕರು ಹೇಗೆ ಒಳಪ್ರವೇಶಿಸಿದ್ದರು ಎಂಬ ಬಗ್ಗೆ ಎನ್‌ಐಎ ತನಿಖೆಯನ್ನು ನಡೆಸುತ್ತಿದೆ. ಅದು ಕಳವಳಕಾರಿ ವಿಷಯವಾಗಿದೆ ಮತ್ತು ನಾವು ಕಲಿಯಬೇಕಾದ ಮುಖ್ಯ ಪಾಠಗಳಲ್ಲಿ ಒಂದಾಗಿದೆ ಎಂದ ಅವರು, ಭಯೋತ್ಪಾದಕರು ಜಮ್ಮು-ಕಾಶ್ಮೀರದ ಮೂಲಕ ಗಡಿಯೊಳಕ್ಕೆ ನುಗ್ಗುವ ಪ್ರಯತ್ನ ವಿಫಲಗೊಂಡ ನಂತರ ಪಂಜಾಬ್ ಗಡಿಯನ್ನು ಬಳಸಿಕೊಂಡಿದ್ದರು ಎಂದರು.







