ಗಡಿಭಾಗದಲ್ಲಿ ಶಾಂತಿ ಕದಡುವ ಯತ್ನ: ಎಚ್.ಕೆ.ಪಾಟೀಲ್

ಬೆಂಗಳೂರು, ಜ.13: ಮಹಾ ರಾಷ್ಟ್ರದ ಕೆಲವು ಸಂಘಟನೆಗಳು ಗಡಿ ಭಾಗದಲ್ಲಿ ಶಾಂತಿ ಕದಡುವ ಪ್ರಯತ್ನಗಳನ್ನು ನಡೆಸುತ್ತಿರು ವುದು ಸರಿಯಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಹಾಗೂ ಗಡಿ ವಿವಾದ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಭಯ ರಾಜ್ಯಗಳ ಗಡಿಯಲ್ಲಿ ನಡೆಯುತ್ತಿರುವ ಶಾಂತಿ ಕದಡುವ ಪ್ರಯತ್ನವನ್ನು ನಿಯಂತ್ರಿಸುವ ಕೆಲಸವನ್ನು ಕರ್ನಾಟಕ ಮತ್ತು ಮಹಾರಾಷ್ಟ್ರ ಸರಕಾರಗಳು ಒಟ್ಟಾಗಿ ಮಾಡುತ್ತಿವೆ ಎಂದರು.
ಕರ್ನಾಟಕ ಹಾಗೂ ಮಹಾರಾಷ್ಟ್ರದ ಗಡಿ ವಿವಾದ ಅನಗತ್ಯ. ಮಹಾಜನ್ ವರದಿಯೆ ಅಂತಿಮ ಎಂದು ನಾವು ಒಪ್ಪಿಕೊಂಡಿದ್ದೇವೆ. ‘ಮರಾಠ ಟೈಗರ್’ ಚಲನಚಿತ್ರ ಬಿಡುಗಡೆ ವಿಚಾರವನ್ನು ಮುಂದಿಟ್ಟುಕೊಂಡು ಗೊಂದಲಗಳನ್ನು ಸೃಷ್ಟಿಸಲಾಗುತ್ತಿದೆ ಎಂದು ಅವರು ಕಿಡಿಕಾರಿದರು.
ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕವು ಆರಂಭದಿಂದಲೂ ಶಾಂತಿಯನ್ನು ಕಾಪಾಡಿಕೊಂಡು ಬಂದಿದೆ. ದೇಶದ ಮೊದಲ ಪ್ರಧಾನಿ ಜವಾಹರ್‌ಲಾಲ್ ನೆಹರು, ಇಂದಿರಾಗಾಂಧಿ, ರಾಜೀವ್‌ಗಾಂಧಿ ಆಡಳಿತಾವಧಿಯಲ್ಲಿಯೂ ಈ ವಿವಾದ ಉದ್ಭವಿಸಿದಾಗ ಚರ್ಚೆ ಮೂಲಕವೇ ಇತ್ಯರ್ಥ ಪಡಿಸಲಾಗಿದೆ ಎಂದು ಎಚ್.ಕೆ.ಪಾಟೀಲ್ ಹೇಳಿದರು. ಗಡಿ ವಿವಾದವನ್ನು ನ್ಯಾಯಾಲಯದ ಮೇಟ್ಟಿಲೇರಿಸಿದ್ದು ಮಹಾರಾಷ್ಟ್ರ ಸರಕಾರವೇ ಹೊರತು, ಕರ್ನಾಟಕವಲ್ಲ. ಮಹಾಜನ್ ವರದಿಯನ್ನು ಒಪ್ಪಿಕೊಳ್ಳುವುದಾಗಿ ಮಹಾರಾಷ್ಟ್ರ ಸರಕಾರ ಹೇಳಿಕೆ ನೀಡಿತ್ತು. ಆದರೆ, ವರದಿ ಬಂದ ನಂತರ ಆಕ್ಷೇಪಗಳನ್ನು ವ್ಯಕ್ತಪಡಿಸುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನನ್ನ ಮೇಲೆ ವಿಶ್ವಾಸವಿಟ್ಟು, ಗಡಿ ವಿಚಾರಕ್ಕೆ ಸಂಬಂಧಿಸಿದ ಜವಾಬ್ದಾರಿಯನ್ನು ನೀಡಿದ್ದು, ಅವರ ವಿಶ್ವಾಸವನ್ನು ಉಳಿಸಿಕೊಳ್ಳುತ್ತೇನೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.







