ನೆಹ್ರಾಗೆ ಟ್ವೆಂಟಿ-20 ತಂಡಕ್ಕೆ ಆಯ್ಕೆಯಾಗುವಾಸೆ

ಹೊಸದಿಲ್ಲಿ, ಜ.13: ಭಾರತದ ಹಿರಿಯ ವೇಗದ ಬೌಲರ್ ಆಶೀಷ್ ನೆಹ್ರಾ ಮುಂಬರುವ ಆಸ್ಟ್ರೇಲಿಯ ವಿರುದ್ಧದ ಟ್ವೆಂಟಿ-20 ಸರಣಿಗೆ ಟೀಮ್ ಇಂಡಿಯಾಕ್ಕೆ ವಾಪಸಾಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
37ರ ಹರೆಯದ ನೆಹ್ರಾ 2011ರಲ್ಲಿ ನಡೆದ ವಿಶ್ವಕಪ್‌ನಲ್ಲಿ ಪಾಕಿಸ್ತಾನದ ವಿರುದ್ದದ ಸೆಮಿಫೈನಲ್‌ನಲ್ಲಿ ಕೊನೆಯ ಪಂದ್ಯ ಆಡಿದ್ದರು. ಬೆರಳು ನೋವಿನಿಂದಾಗಿ ವಿಶ್ವಕಪ್‌ನ ಫೈನಲ್‌ನಲ್ಲಿ ಆಡಿರಲಿಲ್ಲ.
ಜ.26 ರಿಂದ ಅಡಿಲೇಡ್‌ನಲ್ಲಿ ಆರಂಭವಾಗಲಿರುವ ಆಸ್ಟ್ರೇಲಿಯ ವಿರುದ್ಧದ 3 ಪಂದ್ಯಗಳ ಟ್ವೆಂಟಿ-20 ಸರಣಿಯಲ್ಲಿ ಐದು ವರ್ಷಗಳ ನಂತರ ಭಾರತ ತಂಡಕ್ಕೆ ಆಯ್ಕೆಯಾಗುವುದನ್ನು ಎದುರು ನೋಡುತ್ತಿದ್ದಾರೆ.
ಕಳೆದ 2-3 ವರ್ಷಗಳಿಂದ ತನ್ನನ್ನು ತಂಡಕ್ಕೆ ಆಯ್ಕೆ ಮಾಡದೇ ಇರುವುದು ಅಚ್ಚರಿ ಮೂಡಿಸಿದೆ. ತಂಡಕ್ಕೆ ಮತ್ತೊಮ್ಮೆ ಆಯ್ಕೆಯಾದರೆ ಉತ್ತಮ ಪ್ರದರ್ಶನ ನೀಡುವೆ. ಆ ನಿಟ್ಟಿನಲ್ಲಿ ನಾನು ಈಗಾಗಲೇ ಕಠಿಣ ಶ್ರಮಪಡುತ್ತಿರುವೆ ಎಂದು ನೆಹ್ರಾ ಹೇಳಿದ್ದಾರೆ.
‘‘ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡುವುದಕ್ಕಾಗಿ ತಾನು ಯಾವಾಗಲೂ ಕಠಿಣ ಶ್ರಮ ಪಡುತ್ತೇನೆ. ಭಾರತ ತಂಡದಲ್ಲಿ ಆಡುವುದೇ ಒಂದು ಭಾಗ್ಯ. ತಂಡದಲ್ಲಿ ಆಯ್ಕೆಯಾಗದೇ ಇದ್ದಾಗ ತುಂಬಾ ಬೇಸರವಾಗುತ್ತದೆ. ನಾನು 17 ವರ್ಷಗಳ ಹಿಂದೆ ಕ್ರಿಕೆಟ್‌ಗೆ ಕಾಲಿಟ್ಟಿದ್ದೆ. ಉಪ ಖಂಡದಲ್ಲಿ ತನ್ನಂತಹ ಬೌಲರ್‌ಗಳು ಹಲವು ಬಾರಿ ಗಾಯಗೊಂಡಿದ್ದಾರೆ. 10-12 ಶಸ್ತ್ರಚಿಕಿತ್ಸೆಯನ್ನು ಮಾಡಿಸಿಕೊಂಡಿದ್ದಾರೆ. ಆದಾಗ್ಯೂ ವೇಗದ ಬೌಲರ್ ಆಗಿ ಈಗಲೂ ಮುಂದುವರಿದಿದ್ದಾರೆ’’ ಎಂದು ನೆಹ್ರಾ ನುಡಿದರು.







