ಫಿಫಾ ಬ್ಯಾಲನ್ ಡಿ’ಒರ್: ಹೊಸ ಅಲೆ ಸೃಷ್ಟಿಸಿದ ಮೆಸ್ಸಿ, ರೊನಾಲ್ಡೊ

ಝೂರಿಕ್, ಜ.13: 1991ರಿಂದ ಆರಂಭವಾಗಿರುವ ಫಿಫಾ ಬ್ಯಾಲನ್ ಡಿ’ಒರ್ ಪ್ರಶಸ್ತಿಯನ್ನು ಆರಂಭಿಕ ದಿನಗಳಲ್ಲಿ ವಿಶ್ವಕಪ್‌ನಲ್ಲಿ ಮಿಂಚುತ್ತಿದ್ದ ಸ್ಟಾರ್ ಆಟಗಾರರು ಗೆಲ್ಲುತ್ತಿದ್ದರು. ಇತ್ತೀಚೆಗಿನ ವರ್ಷಗಳಲ್ಲಿ ಈ ಪ್ರವೃತ್ತಿಯನ್ನು ಕ್ರಿಸ್ಟಿಯಾನೊ ರೊನಾಲ್ಡೊ ಹಾಗೂ ಲಿಯೊನೆಲ್ ಮೆಸ್ಸಿ ಬದಲಾಯಿಸಿದ್ದಾರೆ. ಈ ಇಬ್ಬರು ಆಟಗಾರರು ವೈಯಕ್ತಿಕ ಪ್ರದರ್ಶನದ ಮೂಲಕ ಫುಟ್ಬಾಲ್‌ನಲ್ಲಿ ಪ್ರಾಬಲ್ಯ ಸಾಧಿಸಿ ಫಿಫಾ ಪ್ರಶಸ್ತಿಯನ್ನು ಗೆಲ್ಲುತ್ತಾ ಬಂದಿದ್ದಾರೆ.
ಮೊದಲ 16 ವರ್ಷಗಳ ಕಾಲ ವಿಶ್ವಕಪ್ ವಿಜೇತ ತಂಡದ ಸ್ಟಾರ್ ಆಟಗಾರರು ಫಿಫಾ ವರ್ಷದ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದರು. 1994ರಲ್ಲಿ ಬ್ರೆಝಿಲ್‌ನ ರೊಮಾರಿಯೊ, 1998ರಲ್ಲಿ ಫ್ರಾನ್ಸ್‌ನ ಝೈನುದ್ದೀನ್ ಝೈದಾನ್, 2002ರಲ್ಲಿ ಬ್ರೆಝಿಲ್‌ನ ರೊನಾಲ್ಡೊ ಹಾಗೂ 2006ರಲ್ಲಿ ಇಟಲಿಯ ಫಾಬಿಯೊ ಕಾನಾವಾರೊ ಫಿಫಾ ಪ್ರಶಸ್ತಿ ಸ್ವೀಕರಿಸಿದ್ದರು.
2008ರಲ್ಲಿ ರೊನಾಲ್ಡೊ ಫಿಫಾ ಪ್ರಶಸ್ತಿಯನ್ನು ಜಯಿಸುವ ಮೂಲಕ ಹೊಸ ಪ್ರವೃತ್ತಿಗೆ ನಾಂದಿ ಹಾಡಿದ್ದರು. ಆಗ ಮ್ಯಾಂಚೆಸ್ಟರ್ ಯುನೈಟೆಡ್ ತಂಡ ಪ್ರತಿನಿಧಿಸಿದ್ದ ರೊನಾಲ್ಡೊ ಇಂಗ್ಲೆಂಡ್ ಕ್ಲಬ್ ಪ್ರೀಮಿಯರ್ ಲೀಗ್, ಯುಇಎಫ್‌ಎ, ಚಾಂಪಿಯನ್ಸ್ ಲೀಗ್ ಹಾಗೂ ಫಿಫಾ ಕ್ಲಬ್ ವಿಶ್ವಕಪ್ ಜಯಿಸಲು ಕಾರಣರಾಗಿದ್ದರು.
2010ರಲ್ಲಿ ಫಿಫಾ ವರ್ಷದ ಆಟಗಾರ ಪ್ರಶಸ್ತಿ ಹಾಗೂ ಫ್ರಾನ್ಸ್ ಫುಟ್ಬಾಲ್ ಬ್ಯಾಲನ್ ಡಿ’ಒರ್‌ನ್ನು ವಿಲೀನಗೊಳಿಸಿ ‘ಫಿಫಾ ಬ್ಯಾಲನ್ ಡಿ’ಒರ್’ ಪ್ರಶಸ್ತಿಯನ್ನು ಆರಂಭಿಸಲಾಯಿತು. 2008 ರಿಂದ ರೊನಾಲ್ಡೊ ಹಾಗೂ ಮೆಸ್ಸಿ ಫಿಫಾದ ಪ್ರತಿಷ್ಠಿತ ಪ್ರಶಸ್ತಿಯ ಮೇಲೆ ಏಕಸ್ವಾಮ್ಯ ಸಾಧಿಸುತ್ತಾ ಬಂದಿದ್ದಾರೆ.
ಅರ್ಜೆಂಟೀನದ ಸ್ಟಾರ್ ಆಟಗಾರ ಮೆಸ್ಸಿ ಐದು ಬಾರಿ(2009, 2010, 2011, 2012, 2015) ಫಿಫಾ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಪೋರ್ಚುಗಲ್‌ನ ರೊನಾಲ್ಡೊ ಮೂರು ಬಾರಿ(2008, 2013, 2014) ಫಿಫಾ ಪ್ರಶಸ್ತಿ ಜಯಿಸಿದ್ದಾರೆ. ಅತ್ಯಂತ ಮುಖ್ಯವಾಗಿ ವಿಶ್ವಕಪ್ ನಡೆದ ವರ್ಷದಲ್ಲೂ ವಿಶ್ವ ಚಾಂಪಿಯನ್ ತಂಡದ ಸ್ಟಾರ್ ಆಟಗಾರರನ್ನ ಸ್ಪರ್ಧೆಯಲ್ಲಿ ಹಿಂದಿಕ್ಕಿ ಪ್ರಶಸ್ತಿಯನ್ನು ಜಯಿಸಿದ್ದರು.
2010 ರಲ್ಲಿ ವಿಶ್ವಕಪ್ ನಡೆದ ವರ್ಷದಲ್ಲಿ ಸ್ಪೇನ್‌ನ ವಿಶ್ವಕಪ್ ಹೀರೋಗಳಾಗಿ ಮೂಡಿ ಬಂದಿದ್ದ ಆ್ಯಂಡ್ರಿಯಸ್ ಇನಿಯೆಸ್ತಾ ಹಾಗೂ ಕ್ಸೇವಿ ಅವರನ್ನು ಸ್ಪರ್ಧೆಯಲ್ಲಿ ಹಿಂದಿಕ್ಕಿದ ಮೆಸ್ಸಿ ಫಿಫಾ ಪ್ರಶಸ್ತಿಯನ್ನು ಜಯಿಸಿ ಚಾಂಪಿಯನ್ ತಂಡದ ಆಟಗಾರರು ಪ್ರಶಸ್ತಿ ಜಯಿಸುವ ಸಂಪ್ರದಾಯಕ್ಕೆ ಅಂತ್ಯ ಹಾಡಿದ್ದರು. 2014ರಲ್ಲಿ ಜರ್ಮನಿಯ ವಿಶ್ವಕಪ್ ವಿಜೇತ ಹೀರೊ ಮ್ಯಾನುಯೆಲ್ ನೆಯೆರ್‌ರನ್ನು ಹಿಂದಿಕ್ಕಿದ್ದ ರೊನಾಲ್ಡೊ ಫಿಫಾ ಪ್ರಶಸ್ತಿಗೆ ಭಾಜನರಾಗಿ ಹೊಸ ಪ್ರವೃತ್ತಿಯನ್ನು ಮುಂದುವರಿಸಿದ್ದರು.
ಕಳೆದ 8 ವರ್ಷಗಳಿಂದ ಫಿಫಾ ಬ್ಯಾಲನ್ ಡಿ ಒರ್ ಪ್ರಶಸ್ತಿಯ ಮೇಲೆ ಅಧಿಕಾರ ಚಲಾಯಿಸಿರುವ ಮೆಸ್ಸಿ ಹಾಗೂ ರೊನಾಲ್ಡೊ ತಂಡದ ಶ್ರೇಷ್ಠ ಪ್ರದರ್ಶನಕ್ಕಿಂತ ವೈಯಕ್ತಿಕ ಪ್ರದರ್ಶನವೇ ಮುಖ್ಯ ಎಂದು ಸಾಬೀತುಪಡಿಸಿದ್ದರು. ಕಳೆದ 8 ವರ್ಷಗಳಿಂದ ಮೆಸ್ಸಿಯ ಅರ್ಜೆಂಟೀನ ತಂಡ ಹಾಗೂ ರೊನಾಲ್ಡೊರ ಪೋರ್ಚುಗಲ್ ತಂಡ ಯಾವೊಂದು ಪ್ರಮುಖ ಪ್ರಶಸ್ತಿಯನ್ನು ಜಯಿಸಿಲ್ಲ. ಆದರೆ, ಈ ಇಬ್ಬರು ಪ್ರತಿನಿಧಿಸಿರುವ ಕ್ಲಬ್‌ಗಳು(ಬಾರ್ಸಿಲೋನ ಹಾಗೂ ರಿಯಲ್ ಮ್ಯಾಡ್ರಿಡ್) ಹಲವು ಪ್ರಶಸ್ತಿಗಳನ್ನು ಜಯಿಸಿವೆ.
ಈ ಅವಧಿಯಲ್ಲಿ ಬಾರ್ಸಿಲೋನ ಐದು ಬಾರಿ ಸ್ಪಾನಿಶ್ ಲೀಗ್ ಪ್ರಶಸ್ತಿಯನ್ನು ಜಯಿಸಿತ್ತು. ಜೊತೆಗೆ ಮೂರು ಚಾಂಪಿಯನ್ಸ್ ಲೀಗ್ ಹಾಗೂ ಮೂರು ಕ್ಲಬ್ ವಿಶ್ವಕಪ್‌ನ್ನು ಗೆದ್ದುಕೊಂಡಿತ್ತು. ಮ್ಯಾಡ್ರಿಡ್ ತಂಡ ತಲಾ ಒಂದು ದೇಶೀಯ ಲೀಗ್, ಚಾಂಪಿಯನ್ಸ್ ಲೀಗ್ ಹಾಗು ಕ್ಲಬ್ ವಿಶ್ವಕಪ್‌ನ್ನು ಜಯಿಸಿತ್ತು.
ಫುಟ್ಬಾಲ್ ಕ್ಲಬ್‌ನಲ್ಲಿ ಗೋಲ್ ಯಂತ್ರವಾಗಿರುವ ರೊನಾಲ್ಡೊ ಹಲವು ಕ್ಲಬ್ ದಾಖಲೆಗಳನ್ನು ಮುರಿದಿದ್ದಾರೆ. ಅತ್ಯಂತ ವೇಗವಾಗಿ 200 ಗೋಲು ಬಾರಿಸಿದ್ದಾರೆ. ಲಾಲಿಗದಲ್ಲಿ ಅತ್ಯಂತ ಹೆಚ್ಚು ಬಾರಿ ಹ್ಯಾಟ್ರಿಕ್ ಸಾಧಿಸಿದ್ದಾರೆ. ಯುಇಎಫ್‌ಎ ಚಾಂಪಿಯನ್ಸ್ ಲೀಗ್‌ನಲ್ಲಿ ಗರಿಷ್ಠ ಗೋಲುಗಳನ್ನು ಬಾರಿಸಿದ್ದಾರೆ.







