ಎಚ್‌ಐಎಲ್‌ಗೆ 5.70 ಕೋಟಿ ರೂ.ಬಹುಮಾನ ಮೊತ್ತ
ಹೊಸದಿಲ್ಲಿ, ಜ.13: ನಾಲ್ಕನೆ ಆವೃತ್ತಿಯ ಹಾಕಿ ಇಂಡಿಯಾ ಲೀಗ್‌ಗೆ(ಎಚ್‌ಐಎಲ್) ಒಟ್ಟು ಬಹುಮಾನ ಮೊತ್ತ 5.70 ಕೋಟಿ ರೂ. ನಿಗದಿಪಡಿಸಲಾಗಿದೆ. ಎಚ್‌ಐಎಲ್ ಜ.18ರಿಂದ ಫೆ.21ರ ತನಕ ದೇಶದ ಆರು ವಿವಿಧ ನಗರಗಳಲ್ಲಿ ನಡೆಯಲಿದೆ.
ನಾಲ್ಕನೆ ಆವೃತ್ತಿಯ ಎಚ್‌ಐಎಲ್ ಟೂರ್ನಿಯಲ್ಲಿ ಚಾಂಪಿಯನ್ ತಂಡ 2.50 ಕೋಟಿ ರೂ.ವನ್ನು ಮನೆಗೊಯ್ಯಲಿದೆ. ರನ್ನರ್ಸ್ ಅಪ್ ತಂಡ 1.75 ಕೋಟಿ ರೂ. ಪಡೆಯಲಿದೆ. ಟೂರ್ನಿಯಲ್ಲಿ ಮೂರನೆ ಸ್ಥಾನ ಪಡೆಯುವ ತಂಡ 75 ಲಕ್ಷ ರೂ. ಬಹುಮಾನ ಪಡೆದುಕೊಳ್ಳಲಿದೆ.
ಹಾಕಿ ಇಂಡಿಯಾವು ಕೋಲ್ ಇಂಡಿಯಾ ಟೂರ್ನಿಯ ಆಟಗಾರ ಪ್ರಶಸ್ತಿ ವಿಜೇತರಿಗೆ 50 ಲಕ್ಷ ರೂ. ಘೋಷಿಸಿದೆ. ಕೋಲ್ ಇಂಡಿಯಾ ಪಂದ್ಯಶ್ರೇಷ್ಠ ಪ್ರಶಸ್ತಿ ಮೊತ್ತವನ್ನು 50,000 ರೂ.ಗೆ ವಿಸ್ತರಿಸಲಾಗಿದೆ.
ಟೂರ್ನಿಯ ಉದಯೋನ್ಮುಖ ಆಟಗಾರ 20 ಲಕ್ಷ ರೂ. ಹಾಗೂ ಟೂರ್ನಿಯಲ್ಲಿ ಗರಿಷ್ಠ ಗೋಲು ಬಾರಿಸುವ ಆಟಗಾರ 20 ಲಕ್ಷ ರೂ. ಸ್ವೀಕರಿಸಲಿದ್ದಾರೆ. ಎಚ್‌ಐಎಲ್ ಟೂರ್ನಿಯಲ್ಲಿ ಆರು ಫ್ರಾಂಚೈಸಿಗಳಾದ ಜೇಪಿ ಪಂಜಾಬ್ ವಾರಿಯರ್ಸ್, ದಿಲ್ಲಿ ವೇವ್‌ರೈಡರ್ಸ್, ಕಳಿಂಗ ಲ್ಯಾನ್ಸರ್ಸ್, ಉತ್ತರ ಪ್ರದೇಶ ವಿಝಾರ್ಡ್ಸ್, ದಬಾಂಗ್ ಮುಂಬೈ ಹಾಗೂ ಹಾಲಿ ಚಾಂಪಿಯನ್ ರಾಂಚಿ ರೇಯ್ಸ್ ತಂಡಗಳು ಭಾಗವಹಿಸಲಿವೆ.





