ಭಾರತದಲ್ಲಿ ಮುಸ್ಲಿಮ್ ಸಮುದಾಯದಲ್ಲಿ ಯುವಜನತೆಯ ಪ್ರಮಾಣ ಅತ್ಯಧಿಕ
ಹೊಸದಿಲ್ಲಿ,ಜ.14: ಭಾರತದಲ್ಲಿ ಮುಸ್ಲಿಮರಲ್ಲಿ ಮಕ್ಕಳು ಮತ್ತು ಹದಿಹರೆಯದವರ ಶೇಕಡಾವಾರು ಪ್ರಮಾಣ ಇತರ ಎಲ್ಲ ಧರ್ಮಗಳಿಂತ ಹೆಚ್ಚು ಎನ್ನುವುದು 2011ರ ಜನಗಣತಿಯ ದತ್ತಾಂಶಗಳು ಬೆಳಕಿಗೆ ತಂದಿವೆ.
ಎಲ್ಲ ಸಮುದಾಯಗಳನ್ನು ಒಂದಾಗಿ ಪರಿಗಣಿಸಿದರೆ ಭಾರತದ ಜನಸಂಖ್ಯೆಯ ಸುಮಾರು ಶೇ.41ರಷ್ಟು ಜನರು 20ವರ್ಷ ಪ್ರಾಯಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. 20-59 ವರ್ಷ ವಯೋಮಾನದವರ ಪ್ರಮಾಣ ಶೇ.50ರಷ್ಟಿದ್ದರೆ, 60 ವರ್ಷಕ್ಕೂ ಹೆಚ್ಚಿನವರ ಪ್ರಮಾಣ ಕೇವಲ ಶೇ.9ರಷ್ಟಿದೆ. ಮುಸ್ಲಿಮರಲ್ಲಿ ಮಕ್ಕಳು ಮತ್ತು ಹದಿಹರೆಯ(0-19)ದವರ ಪ್ರಮಾಣ ಶೇ.47ರಷ್ಟಿದ್ದರೆ,ಹಿಂದೂಗಳಲ್ಲಿ ಇದು ಶೇ.40ರಷ್ಟಿದೆ ಎಂದು ವರದಿಯು ತಿಳಿಸಿದೆ.
ಇಂದು ಭಾರತದಲ್ಲಿ ಪ್ರತಿ ಐದನೆ ವ್ಯಕ್ತಿ ಹದಿಹರೆಯ(10-19)ದವನಾಗಿದ್ದರೆ, ಪ್ರತಿ ಮೂರನೆ ವ್ಯಕ್ತಿ ಯುವಕ(20-24)ನಾಗಿದ್ದಾನೆ.
ಅಲ್ಲದೆ ವಿವಿಧ ಧಾರ್ಮಿಕ ಸಮುದಾಯಗಳ ಜೀವನ ಚಕ್ರಗಳು ಮಕ್ಕಳ ಸಂಖ್ಯೆಯಲ್ಲಿ ಇಳಿಕೆಯನ್ನು ಮತ್ತು ಹಿರಿಯರ ಸಂಖ್ಯೆಯಲ್ಲಿ ಏರಿಕೆಯನ್ನು ತೋರಿಸುತ್ತಿರುವುದು ಗಮನಾರ್ಹ ಅಂಶವಾಗಿದೆ. 2001ರ ಜನಗಣತಿಯಂತೆ ಇಡೀ ದೇಶದ ಜನಸಂಖ್ಯೆಯಲ್ಲಿ ಯುವಜನತೆಯ ಪಾಲು ಶೇ.45(ಹಿಂದೂ ಶೇ.44, ಮುಸ್ಲಿಮ್ ಶೇ.52,ಜೈನ್ ಶೇ.35) ಇತ್ತು.
2011ರ ಜನಗಣತಿಯಲ್ಲಿ ಕಂಡು ಬಂದಿರುವ ಇನ್ನೊಂದು ಗಮನಾರ್ಹ ಅಂಶವೆಂದರೆ ಹಿರಿಯರ ಜನಸಂಖ್ಯೆಯಲ್ಲಿನ ಬದಲಾವಣೆ. ಮುಸ್ಲಿಮ್ ಸಮುದಾಯದಲ್ಲಿ 60ವರ್ಷ ಮೇಲ್ಪಟ್ಟ ಹಿರಿಯರ ಜನಸಂಖ್ಯೆಯ ಪ್ರಮಾಣ ಕೇವಲ ಶೇ.6.4ರಷ್ಟಿದೆ, ಅಂದರೆ ಹೆಚ್ಚುಕಡಿಮೆ ರಾಷ್ಟ್ರೀಯ ಸರಾಸರಿಯ ಅರ್ಧದಷ್ಟು.





