ವಿವಾದಾಸ್ಪದ ದ್ವೀಪದ ಮೇಲೆ ಚೀನಾದ ಪರೀಕ್ಷಾ ಹಾರಾಟ: ಫಿಲಿಪ್ಪೀನ್ಸ್‌ನಿಂದ ಪ್ರತಿಭಟನೆ
ಮನಿಲಾ, ಜ. 13: ದಕ್ಷಿಣ ಚೀನಾ ಸಮುದ್ರದಲ್ಲಿರುವ ಕೃತಕ ದ್ವೀಪವೊಂದರ ಮೇಲೆ ಚೀನಾ ನಡೆಸುತ್ತಿರುವ ಪರೀಕ್ಷಾ ಹಾರಾಟಗಳ ವಿರುದ್ಧ ಫಿಲಿಪ್ಪೀನ್ಸ್ ಪ್ರತಿಭಟನೆ ಸಲ್ಲಿಸಿದೆ ಎಂದು ವಿದೇಶ ಸಚಿವಾಲಯದ ವಕ್ತಾರರೋರ್ವರು ಬುಧವಾರ ತಿಳಿಸಿದರು.
ಚೀನಾದ ಈ ಕ್ರಮ ‘‘ಪ್ರಚೋದನಕಾರಿ’’ಕಾರಿಯಾಗಿದೆ ಹಾಗೂ ಚಾಲ್ತಿಯಲ್ಲಿರುವ ಅನೌಪಚಾರಿಕ ಸಂಹಿತೆಯ ಉಲ್ಲಂಘನೆಯಾಗಿದೆ ಎಂದು ಅದು ಬಣ್ಣಿಸಿದೆ.
ಕಳೆದ ವಾರ ಚೀನಾ ವಿವಾದಾತ್ಮಕ ಸ್ಪ್ರಾಟ್ಲಿ ದ್ವೀಪಮಾಲೆಯ ಫಿಯರಿ ಕ್ರಾಸ್‌ನಲ್ಲಿ ಮೂರು ವಿಮಾನಗಳನ್ನು ಇಳಿಸಿತ್ತು ಹಾಗೂ ಇದು ವಿಯೆಟ್ನಾಂನ ಆಕ್ರೋಶಕ್ಕೆ ಕಾರಣವಾಗಿತ್ತು. ಚೀನಾದ ಈ ನಡೆಯನ್ನು ಅಮೆರಿಕವೂ ಟೀಕಿಸಿತ್ತು ಹಾಗೂ ಇದು ಈ ವಲಯದಲ್ಲಿ ಉದ್ವಿಗ್ನತೆ ಸೃಷ್ಟಿಗೆ ಕಾರಣವಾಗುತ್ತದೆ ಎಂಬ ಕಳವಳವನ್ನು ವ್ಯಕ್ತಪಡಿಸಿತ್ತು.
‘‘ಕಗಿಟಿಂಗನ್ ರೀಫ್ ದ್ವೀಪಕ್ಕೆ ಚೀನಾ ಇತ್ತೀಚೆಗೆ ನಡೆಸಿದ ಪ್ರಾಯೋಗಿಕ ವಿಮಾನ ಹಾರಾಟಗಳ ವಿರುದ್ಧ ಜನವರಿ 8ರಂದು ನಾವು ಔಪಚಾರಿಕವಾಗಿ ಪ್ರತಿಭಟನೆ ಸಲ್ಲಿಸಿದ್ದೇವೆ’’ ಎಂದು ವಕ್ತಾರ ಚಾರ್ಲ್ಸ್ ಜೋಸ್ ಸುದ್ದಿಗಾರರಿಗೆ ತಿಳಿಸಿದರು. ಪ್ರತಿಭಟನೆ ಪತ್ರವನ್ನು ಹಸ್ತಾಂತರಿಸಲು ಚೀನಾ ರಾಯಭಾರ ಕಚೇರಿಯ ಅಧಿಕಾರಿಯೊಬ್ಬರನ್ನು ವಿದೇಶ ಸಚಿವಾಲಯ ಕಚೇರಿಗೆ ಕರೆಸಲಾಗಿತ್ತು.
ಫಿಯರಿ ಕ್ರಾಸ್ ರೀಫ್‌ಗೆ ಸ್ಥಳೀಯ ಭಾಷೆಯಲ್ಲಿ ಕಗಿಟಿಂಗನ್ ರೀಫ್ ಎಂದು ಕರೆಯಲಾಗುತ್ತದೆ.
ಪರೀಕ್ಷಾ ಹಾರಾಟಗಳು ‘‘ಪ್ರಚೋದನಕಾರಿ ಕೃತ್ಯ’’ಗಳಾಗಿದ್ದು, ದಕ್ಷಿಣ ಚೀನಾ ಸಮುದ್ರದಲ್ಲಿನ ನೌಕಾಯಾನ ಮತ್ತು ವಿಮಾನ ಹಾರಾಟ ಸ್ವಾತಂತ್ರವನ್ನು ನಿರ್ಬಂಧಿಸುತ್ತದೆ ಎಂದು ಜೋಸ್ ಹೇಳಿದರು.
ಜಪಾನ್‌ಗೆ ಚೀನಾ ಎಚ್ಚರಿಕೆ
ಬೀಜಿಂಗ್, ಜ. 13: ಪೂರ್ವ ಚೀನಾ ಸಮುದ್ರದಲ್ಲಿರುವ ವಿವಾದಾಸ್ಪದ ದ್ವೀಪ ಮಾಲೆಗಳು ಸುತ್ತ ‘‘ಪ್ರಚೋದನಕಾರಿ’’ ಕ್ರಮ ತೆಗೆದುಕೊಳ್ಳುವುದನ್ನು ನಿಲ್ಲಿಸುವಂತೆ ಚೀನಾದ ವಿದೇಶ ಸಚಿವಾಲಯ ಬುಧವಾರ ಜಪಾನ್‌ಗೆ ಎಚ್ಚರಿಕೆ ನೀಡಿದೆ. ಇದರ ಪರಿಣಾಮಗಳನ್ನು ಜಪಾನ್ ಎದುರಿಸಬೇಕಾಗುತ್ತದೆ ಎಂದು ಅದು ಹೇಳಿದೆ.
‘‘ಹಾದು ಹೋಗುವ’’ ಉದ್ದೇಶವೊಂದನ್ನು ಹೊರತುಪಡಿಸಿ ಇತರ ಯಾವುದೇ ಕಾರಣಗಳಿಗಾಗಿ ಯಾವುದೇ ವಿದೇಶಿ ನೌಕಾಪಡೆಯ ಹಡಗುಗಳು ಜಪಾನ್ ಜಲಪ್ರದೇಶವನ್ನು ಪ್ರವೇಶಿಸಿದರೆ, ಜಪಾನ್ ನೌಕಾಪಡೆಯ ಗಸ್ತು ನೌಕೆಯೊಂದು ಆ ನೌಕೆಗಳಿಗೆ ಹೊರಹೋಗುವಂತೆ ಹೇಳುತ್ತದೆ ಎಂದು ತಾನು ಚೀನಾಕ್ಕೆ ಹೇಳಿರುವುದಾಗಿ ಜಪಾನ್ ಮಂಗಳವಾರ ಹೇಳಿತ್ತು. ಜಪಾನ್‌ನ ಹೇಳಿಕೆಯ ಬಗ್ಗೆ ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸಿದ ಚೀನಾದ ವಿದೇಶ ಸಚಿವಾಲಯದ ವಕ್ತಾರ ಹಾಂಗ್ ಲೀ, ಈ ದ್ವೀಪ ಮಾಲೆಯ ಸುತ್ತ ‘‘ಸಾಮಾನ್ಯ ನೌಕಾ ಮತ್ತು ಗಸ್ತು ಚಟುವಟಿಕೆ’’ಗಳನ್ನು ನಡೆಸುವ ಹಕ್ಕು ಚೀನಾಕ್ಕಿದೆ ಎಂದು ಹೇಳಿದರು.







