ರಾಮ್ ಜೇಠ್ಮಲಾನಿಯ ನೆರವಿನ ಕೊಡುಗೆ; ಇನ್ನೂ ಅಂಗೀಕರಿಸದ ಸೋನಿಯಾ ನ್ಯಾಶನಲ್ ಹೆರಾಲ್ಡ್ ಪ್ರಕರಣ
ಹೊಸದಿಲ್ಲಿ, ಜ.13: ನ್ಯಾಶನಲ್ ಹೆರಾಲ್ಡ್ ಶೇರು ಅವ್ಯವಹಾರದ ಕುರಿತು ಬಿಜೆಪಿ ನಾಯಕ ಸುಬ್ರಹ್ಮಣ್ಯನ್ ಸ್ವಾಮಿ ಹೂಡಿರುವ ಮೊಕದ್ದಮೆಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಉಪಾಧ್ಯಕ್ಷ ರಾಹುಲ್‌ಗಾಂಧಿಯವರ ಪರ ನ್ಯಾಯಾಲಯದಲ್ಲಿ ವಾದಿಸುವ ಕೊಡುಗೆಯನ್ನು ಬಿಜೆಪಿಯ ಮಾಜಿ ನಾಯಕ ಹಾಗೂ ಹಿರಿಯ ವಕೀಲ ರಾಮ್ ಜೇಠ್ಮಲಾನಿ ಅವರ ಮುಂದಿರಿಸಿದ್ದಾರೆ.
ಅಸಾಮಾನ್ಯ ನಡೆಯೊಂದರಲ್ಲಿ ತನ್ನ ಹಾಗೂ ರಾಹುಲ್ ವಿರುದ್ಧ ಜಾರಿಗೊಳಿಸಿರುವ ಸಮನ್ಸನ್ನು ರದ್ದುಪಡಿಸುವಂತೆ ಕೋರಿದ್ದ ಸೋನಿಯಾರ ಅರ್ಜಿಯನ್ನು ದಿಲ್ಲಿ ಹೈಕೋರ್ಟ್ ತಳ್ಳಿಹಾಕಿದ 2 ದಿನಗಳ ಬಳಿಕ ಡಿ.11ರಂದು ಜೇಠ್ಮಲಾನಿ, ಸೋನಿಯಾರಿಗೆ ಪತ್ರವೊಂದನ್ನು ಬರೆದಿದ್ದರು.
ತಮ್ಮ ಪಕ್ಷದಲ್ಲಿ ಹಲವು ಮಂದಿ ಮಹಾನ್ ವಕೀಲರಿದ್ದಾರೆಂಬುದು ತನಗೆ ತಿಳಿದಿದೆ. ಆದರೂ, ತಮಗೆ ಅಗತ್ಯವಾದಲ್ಲಿ ತನ್ನ ಸೇವೆಯು ತಮಗೆ ಲಭ್ಯವಾಗುವುದು ಎಂದು ಸೋನಿಯಾರಿಗೆ ಪತ್ರ ಬರೆದಿರುವ ಜೇಠ್ಮಲಾನಿ, ನ್ಯಾಶನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾ ಹಾಗೂ ರಾಹುಲ್‌ರ ಪರ ವಾದಿಸಲು ತನಗೆ ಯಾವುದೇ ಶುಲ್ಕ ನೀಡುವ ಅಥವಾ ಬೇರೆ ‘ಉಪಕಾರ’ ಮಾಡುವ ಅಗತ್ಯವಿಲ್ಲವೆಂಬ ಭರವಸೆ ನೀಡಿದ್ದಾರೆ.
ಸೋನಿಯಾ ಹಾಗೂ ರಾಹುಲ್ ಯಾವುದೇ ತಪ್ಪು ಮಾಡಿಲ್ಲವೆಂಬುದು ತನಗೆ ಮನವರಿಕೆಯಾಗಿದೆ. ತಾನು ವಿಚಾರಣಾ ನ್ಯಾಯಾಲಯದಲ್ಲಿ ಅವರ ಪರ ನಿಃಶುಲ್ಕವಾಗಿ ವಾದಿಸಲು ಸಿದ್ಧನಿದ್ದೇನೆ. ತನ್ನ ಕ್ರಮ ಸದಾ ಸ್ವಚ್ಛ ರಾಜಕೀಯದಿಂದ ಪ್ರೇರಿತವಾಗಿರುತ್ತದೆ. ಸೋನಿಯಾ ಹಾಗೂ ರಾಹುಲ್ ಯಾವುದೇ ತಪ್ಪು ಮಾಡದಿದ್ದರೂ, ರಾಜ್ಯಸಭೆಯಲ್ಲಿ ನಡೆಯುತ್ತಿರುವುದರ ಬಗ್ಗೆ ತನಗೆ ಅಸಮಾಧಾನವಿದೆ. ಅವರು ತಪ್ಪು ಮಾಡಿದ್ದಾರೆಂದು ಶಂಕಿಸಲು ತನಗೆ ಯಾವ ಕಾರಣವೂ ಇಲ್ಲ. ಅವರ ವಿರುದ್ಧದ ಆರೋಪಗಳು ಸುಳ್ಳು ಹಾಗೂ ದುರುದ್ದೇಶಪೂರಿತವೆಂದು ಜೇಠ್ಮಲಾನಿ ಪ್ರತಿಪಾದಿಸಿದ್ದಾರೆ. ‘ಇತ್ತೀಚಿನ ಬಿಹಾರ ಚುನಾವಣೆಯಲ್ಲಿ’ ತನ್ನ ಪಾತ್ರದ ಕುರಿತು ಜ್ಞಾಪಿಸಿ ಸೋನಿಯಾ ಹಾಗೂ ರಾಹುಲ್‌ರ ಮೇಲೆ ಪ್ರಭಾವ ಬೀರಲು ಅವರು ಯತ್ನಿಸಿದ್ದಾರೆ.
ಸೋನಿಯಾ ತನ್ನ ಕೊಡುಗೆ ಸ್ವೀಕರಿಸುವರೆಂದು ಜೇಠ್ಮಲಾನಿ ಯೋಚಿಸಿದ್ದರೆ, ಆ ರೀತಿ ಆಗಲೇ ಇಲ್ಲ. ಅವರಿಗೆ ಸರಿಯಾದ ಉತ್ತರ ದೊರಕದಿದ್ದಾಗ, ಡಿ.12ರಂದು ಸೋನಿಯಾರಿಗೆ ಇನ್ನೊಂದು ಪತ್ರ ಬರೆದರು. ತನ್ನ ಕೊಡುಗೆಯ ಬಗ್ಗೆ ಸೋನಿಯಾ ಪ್ರತಿಕ್ರಿಯೆ ನೀಡದಿರುವುದರಿಂದ ತಾನು ಸ್ವಯಂ ಹೇರಿಕೊಂಡಿದ್ದ ಕರ್ತವ್ಯದಿಂದ ಬಿಡುಗಡೆಗೊಂಡಿದ್ದೇನೆಂದು ಭಾವಿಸುತ್ತೇನೆಂದು ಅವರು ಹೇಳಿದ್ದರು.
ಆದಾಗ್ಯೂ, ಕೆಲವು ದಿನಗಳ ಬಳಿಕ ಜೇಠ್ಮಲಾನಿಯವರಿಗೆ ಸೋನಿಯಾರಿಂದ ಪತ್ರವೊಂದು ಬಂದಿತು. ಆದರೆ, ಅದರಲ್ಲಿ ಅವರ ಮೊದಲ ಪತ್ರ ತಲುಪಿದ ಬಗ್ಗೆ ಮಾತ್ರ ಉಲ್ಲೇಖವಿತ್ತು.
ಜೇಠ್ಮಲಾನಿ ಹಾಗೂ ಸ್ವಾಮಿಯವರ ನಡುವೆ ಸುದೀರ್ಘ ಕಾಲದಿಂದ ದ್ವೇಷವಿದೆ. ರಾಜೀವ್‌ಗಾಂಧಿ ಹತ್ಯೆಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಪರಸ್ಪರರು ವಿಕೃತ ಟೀಕೆಗಳನ್ನು ಮಾಡಿಕೊಂಡಂದಿನಿಂದ ಅದು ಬೆಳೆದುಬಂದಿದೆ. ಸ್ವಾಮಿ, ಜೇಠ್ಮಲಾನಿಯವರಿಂದ ತೀವ್ರ ಪಾಟಿ ಸವಾಲಿಗೆ ಗುರಿಯಾಗಿದ್ದರು. ಜೇಠ್ಮಲಾನಿಯವರ ವಿರುದ್ಧ ವ್ಯಕ್ತಿಗತ ಆರೋಪ ಮಾಡುವ ಮೂಲಕ ಸ್ವಾಮಿ ಮುಯ್ಯಿ ತೀರಿಸಿದ್ದರು.





