ಪುಣೆ ಎಟಿಎಸ್ ಎಸಿಪಿಗೆ ಶಂಕಿತ ಐಸಿಸ್ ಉಗ್ರನಿಂದ ಕೊಲೆ ಬೆದರಿಕೆ
ಪುಣೆ, ಜ.13: ಶಂಕಿತ ಇಸ್ಲ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಗುಂಪಿನ ಸದಸ್ಯನೊಬ್ಬನಿಂದ ಪುಣೆಯ ಪೊಲೀಸ್ ಉಪಾಯುಕ್ತ ಭಾನುಪ್ರತಾಪ್ ಬರ್ಗೆ ಮತ್ತವರ ಕುಟುಂಬಕ್ಕೆ ಅನಾಮಧೇಯ ಕೊಲೆ ಬೆದರಿಕೆ ಪತ್ರ ಬಂದ ಬಳಿಕ ಪುಣೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಪುಣೆಯ ಭಯೋತ್ಪಾದಕ ವಿರೋಧಿ ತಂಡದ(ಎಟಿಎಸ್) ಅಧಿಕಾರಿಯಾಗಿರುವ ಬರ್ಗೆ, ಕಳೆದ ವರ್ಷ 16ರ ಹರೆಯದ ಹುಡುಗಿಯೊಬ್ಬಳನ್ನು ಐಸಿಸ್‌ಗೆ ಸೇರದಂತೆ ತಡೆದಿದ್ದರು ಹಾಗೂ ಆಕೆಯ ಉಗ್ರವಾದ ಶಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಎರಡು ವಾರಗಳ ಹಿಂದೆ ಪೊಲೀಸರಿಗೆ ಪತ್ರ ತಲುಪಿದ್ದು, ಬರೆದಾತನು ತನ್ನನ್ನು ಒಬ್ಬ ಐಸಿಸ್ ಕಾರ್ಯಕರ್ತನೆಂದು ಹೇಳಿಕೊಂಡಿದ್ದಾನೆಂದು ಪೊಲೀಸ್ ಮೂಲಗಳು ತಿಳಿಸಿವೆ.
ಪುಣೆ ಎಟಿಎಸ್ ಕಚೇರಿಯ ಹೊರಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ ಹಾಗೂ ಬರ್ಗೆಯವರ ಕುಟುಂಬದ ರಕ್ಷಣೆಗಾಗಿ ಅಧಿಕಾರಿಗಳನ್ನು ನಿಯೋಜಿಸಲಾಗಿದೆಯೆಂದು ಅಧಿಕಾರಿಗಳು ಹೇಳಿದ್ದಾರೆ.
ಆ ಹುಡುಗಿ ಅಂತರ್ಜಾಲದ ಮೂಲಕ ಐಸಿಸ್ ಕೊಂಡಿಗಳೊಂದಿಗೆ ಸಂಪರ್ಕ ಸಾಧಿಸಿದ್ದಳು ಹಾಗೂ ವಿವಿಧ ದೇಶಗಳ ಸುಮಾರು 200 ಮಂದಿ ಯುವಕರನ್ನು ಸಂಪರ್ಕಿಸಿದ್ದಳು. ವೈದ್ಯಕೀಯ ಶಿಕ್ಷಣಕ್ಕಾಗಿ ಹಾಗೂ ಮುಂದಿನ ಕೆಲಸಕ್ಕಾಗಿ ಸಿರಿಯಕ್ಕೆ ಬರುವಂತೆ ಆಕೆಗೆ ಸೂಚಿಸಲಾಗಿತ್ತೆಂಬುದು ವಿಚಾರಣೆಯ ವೇಳೆ ತಿಳಿದುಬಂದಿತೆಂದು ಬರ್ಗೆ ಹೇಳಿದ್ದರು.
ಕುಟುಂಬ ಸದಸ್ಯರು ಹಾಗೂ ಸಮುದಾಯದ ಜನರ ನೆರವಿನೊಂದಿಗೆ ಉಗ್ರವಾದ ಶಮನ ಕಾರ್ಯಕ್ರಮ ಉತ್ತೇಜನೀಯ ಫಲಿತಾಂಶದೊಂದಿಗೆ ನಡೆಯುತ್ತಿದೆಯೆಂದು ಅವರು ತಿಳಿಸಿದ್ದರು.





