ಜೈಶ್ ಮುಖ್ಯಸ್ಥ ಬಂಧನ: ಸ್ಪಷ್ಟನೆ ಕೇಳಲಿರುವ ಭಾರತ

ನವದೆಹಲಿ: ಪಠಾಣ್‌ಕೋಟ ದಾಳಿಯ ಸೂತ್ರಧಾರ ಎನ್ನಲಾದ ಜೈಶ್-ಇ- ಮೊಹ್ಮದ್ ಸಂಘಟನೆಯ ಮುಖ್ಯಸ್ಥ ಮೌಲಾನಾ ಮಸೂದ್ ಅಝರ್ ಅವರನ್ನು ಪಾಕಿಸ್ತಾನ ಬಂಧಿಸಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಉಭಯ ದೇಶಗಳ ನಡುವಿನ ಕಾರ್ಯದರ್ಶಿ ಮಟ್ಟದ ಮಾತುಕತೆಗಳ ಸಾಧ್ಯತೆಯನ್ನು ಜೀವಂತವಾಗಿರಿಸಿವೆ. ಆದರೆ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವ ಮುನ್ನ ಈ ಬಗ್ಗೆ ಭಾರತ ಪಾಕಿಸ್ತಾನದಿಂದ ಸ್ಪಷ್ಟನೆ ಕೇಳಲಿದೆ.
"ಮೌಲಾನಾ ಮಸೂದ್ ಅಝರ್, ಆತನ ಸಹೋದರ ಹಾಗೂ ಜೈಶ್ ಸಂಘಟನೆಯ ಇತರರನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದು ವಿಚಾರಣೆಗೆ ಗುರಿಪಡಿಸಿದ್ದಾರೆ" ಎಂದು ಪಾಕಿಸ್ತಾನದ ಹಿರಿಯ ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ ಪಾಕಿಸ್ತಾನದ ಪ್ರಧಾನಿ ಸಚಿವಾಲಯ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಜೈಶ್ ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ಹೇಳಲಾಗಿದೆಯೇ ವಿನಃ ಅಝರ್ ಬಂಧನದ ಬಗ್ಗೆ ಉಲ್ಲೇಖವಿಲ್ಲ. ಆದ್ದರಿಂದ ಮಸೂದ್ ಬಂಧನವನ್ನು ಖಚಿತಪಡಿಸಿಕೊಳ್ಳಬೇಕಾಗಿದೆ ಎಂದು ಭಾರತ ಹೇಳಿದೆ.
ಪ್ರಧಾನಿ ನರೇಂದ್ರ ಮೋದಿಯವರು ವಿದೇಶಾಂತ ಸಚಿವೆ ಸುಷ್ಮಾ ಸ್ವರಾಜ್ ಹಾಗೂ ಕಾರ್ಯದರ್ಶಿ ಎಸ್.ಜೈಶಂಕರ್ ಜತೆ ಪರಿಸ್ಥಿತಿಯ ಅವಲೋಕನ ಮಾಡಿದ್ದು, ಪಾಕಿಸ್ತಾನದ ಹೇಳಿಕೆ ಬಗ್ಗೆ ಭಾರತಕ್ಕೆ ಇನ್ನೂ ನಂಬಿಕೆ ಇಲ್ಲ ಎಂದು ಉನ್ನತ ಮೂಲಗಳು ತಿಳಿಸಿವೆ.







