ರಾಮಕುಂಜ: ಜಾನುವಾರು ಜಂತು ಹುಳ ನಿವಾರಣಾ ಅಭಿಯಾನ

ಕಡಬ, ಜ.14. ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಮತ್ತು ರಾಮಕುಂಜ ಹಾಲು ಉತ್ಪಾದಕರ ಸಹಕಾರ ಸಂಘದ ಜಂಟಿ ಸಹಭಾಗಿತ್ವದಲ್ಲಿ ಪಲ್ಸ್ ಪೋಲಿಯೋ ಮಾದರಿಯಲ್ಲಿ ಪ್ರತಿ 6 ತಿಂಗಳಿಗೊಮ್ಮೆ ನಡೆಯುವ ಜಂತು ನಿವಾರಣಾ ಅಭಿಯಾನ ಕಾರ್ಯಕ್ರಮಕ್ಕೆ ಸಂಘದ ವಠಾರದಲ್ಲಿ ಹೈನುಗಾರರ ಸಭೆ ನಡೆಸಲಾಗಿ ಚಾಲನೆ ನೀಡಲಾಯಿತು.
ಕೊಲ ಪಾಣಿಗ ಎಂಬಲ್ಲಿ ವೀರಪ್ಪ ದಾಸಯ್ಯ ಎಂಬವರ ತೋಟದಲ್ಲಿ ಜಾನುವಾರುಗಳನ್ನು ಒಟ್ಟು ಗೂಡಿಸಿ ಶಿಬಿರ ನಡೆಸಲಾಯಿತು. ದ.ಕ. ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕರಾದ ತಣ್ಣೀರುಪಂಥ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ನಿರಂಜನ ಭಾವಂತಬೆಟ್ಟು ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಜಾನುವಾರಗಳಲ್ಲಿ ಜಂತು ಹುಳಗಳ ಬಾಧೆಯಿಂದಾಗಿ ರೈತರಿಗೆ ಹಾಲು ಉತ್ಪಾದನಾ ವೆಚ್ಚ ಅಧಿಕವಾಗತೊಡಗಿದೆ, ಇದನ್ನು ನಿವಾರಿಸುವ ಸಲುವಾಗಿ ಈ ಯೋಜನೆಯನ್ನು ಹಮ್ಮಿಕೊಳ್ಳಲಾಗಿದ್ದು, ದುಬಾರಿ ಬೆಲೆಯ ಔಷಧಿಯನ್ನು 50% ಅನುದಾನದಲ್ಲಿ ಸಂಘಗಳ ಮೂಲಕ ಒದಗಿಸುತ್ತಿದ್ದೇವೆ, ಸದಸ್ಯರುಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿದರು.
ಸಂಘದ ಅಧ್ಯಕ್ಷ ಪಿ. ರಾಮ ಭಟ್ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿ 2016ನೇ ಸಾಲಿನಲ್ಲಿ ಸಂಘಕ್ಕೆ 50 ವರ್ಷ ತುಂಬಲಿದೆ ಅದರ ಸಲುವಾಗಿ ಸಂಘ ಸುವರ್ಣ ಮಹೋತ್ಸವ ಆಚರಿಸಲಿದ್ದು, ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಅದರ ಅಂಗವಾಗಿ ಒಕ್ಕೂಟದ 50% ಮತ್ತು ಅದಕ್ಕೆ ಸಂಘದ ವತಿಯಿಂದ 50% ಅನುದಾನವನ್ನು ಸೇರಿಸಿ ರೈತರಿಗೆ ಔಷಧಿಯನ್ನು ಉಚಿತವಾಗಿ ನೀಡಲಾಗುವುದು ಎಂದು ಹೇಳಿದರು.
ಒಕ್ಕೂಟದ ಉಪ್ಪಿನಂಗಡಿ ಶಿಬಿರ ಕಚೇರಿಯ ಪಶು ವೈದ್ಯಾಧಿಕಾರಿ ಡಾ ಕಾರ್ತಿಕ್ ಮಾಹಿತಿ ನೀಡಿದರು. ವಿಸ್ತರಣಾಧಿಕಾರಿ ಸ್ವಾಗತಿಸಿ, ಕಾರ್ಯದರ್ಶಿ ಕೆ. ಚಿತ್ತರಂಜನ್ ವಂದಿಸಿದರು.





