ದ.ಕ. ಜಿಲ್ಲೆ ಜನರನ್ನು ನಿಂದಿಸಿದ್ದ ವಾಟಾಳ್‌ರಿಂದ ವಿಷಾದ

ಮಂಗಳೂರು : ಮಹದಾಯಿ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಕರ್ನಾಟಕ ಬಂದ್ ವೇಳೆ ದಕ್ಷಿಣ ಕನ್ನಡ ಜಿಲ್ಲೆಯ ಜನರು ಬಂದ್‌ಗೆ ಬೆಂಬಲ ನೀಡದ ಬಗ್ಗೆ ಜಿಲ್ಲೆಯ ಜನರು ಮಾನವೀಯತೆ ಇಲ್ಲದವರು ಎಂದು ಜರೆದಿದ್ದ ಕನ್ನಡ ಚಳವಳಿ ಪಕ್ಷದ ವಾಟಾಳ್ ನಗರದಲ್ಲಿ ಗುರುವಾರ ವಿಷಾದ ವ್ಯಕ್ತಪಡಿಸಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದಕ್ಷಿಣ ಜಿಲ್ಲೆಯ ಜನರ ಬಗ್ಗೆ ದ್ವೇಷದಿಂದ ಹಾಗೆ ಮಾತನಾಡಿಲ್ಲ. ನಿಮಗೆ ಬೇಸರವಾಗಿದ್ದರೆ ಅದನ್ನು ಹಿಂತೆಗೆದುಕೊಳ್ಳಿ. ನಾನೂ ಮಾತನ್ನು ಹಿಂತೆಗೆದುಕೊಳ್ಳುತ್ತೇನೆ. ಅದನ್ನು ಇಲ್ಲಿಗೆ ಮುಗಿಸೋಣ ಎಂದು ಹೇಳುವ ಮೂಲಕ ಪರೋಕ್ಷವಾಗಿ ಕ್ಷಮೆಯಾಚಿಸಿದರು.
ಸಿಎಂ ಜತೆ ಮಾತುಕತೆ
ಯೋಜನೆ ವಿಚಾರದಲ್ಲಿ ದ್ವೇಷ ಬೆಳೆಯುವ ಮುನ್ನ ಸಭೆ ಕರೆಸಿ ಜನರಿಗೆ ವಿಷಯ ಮನದಟ್ಟು ಮಾಡಿಕೊಡುವುದು ಸಿಎಂ ಕರ್ತವ್ಯವಾಗಿತ್ತು. ಅದನ್ನು ಅವರು ಮಾಡಬೇಕಿತ್ತು. ಇನ್ನೂ ಕಾಲ ಮೀರಿಲ್ಲ. ಕರಾವಳಿಯ ಜನರನ್ನು ಕರೆಸಿ ತಜ್ಞರ ಮೂಲಕ ಪಶ್ಚಿಮ ಘಟ್ಟ, ಅರಣ್ಯ ರಕ್ಷಣೆ ಸಹಿತ ಇಡೀ ಯೋಜನೆಯ ಮಾಹಿತಿ ನೀಡಿ, ಸೌಹಾರ್ದವಾಗಿ ಸಮಸ್ಯೆ ಪರಿಹರಿಸಿಕೊಳ್ಳಬೇಕಿದೆ. ಯೋಜನೆ ಕುರಿತು ಎರಡೂ ಪ್ರದೇಶದ ಜನರನ್ನು ಕರೆಸಿ ಮಾತುಕತೆ ನಡೆಸುವಂತೆ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಮನವಿ ಮಾಡುವುದಾಗಿ ಅವರು ಹೇಳಿದರು.
ಕರಿಪತಾಕೆ ಪ್ರದರ್ಶನ: ಬಂಧನ
ಮಹದಾಯಿ ಯೋಜನೆ ಕುರಿತಂತೆ ಬಂದ್ ನಡೆಸದ ದಕ್ಷಿಣ ಕನ್ನಡದ ಜನರು ಮನವೀಯತೆ ಇಲ್ಲದವರು ಎಂಬ ಹೇಳಿಕೆ ನೀಡಿದ್ದ ವಾಟಾಳ್ ನಾಗರಾಜ್ ತಂಗಿದ್ದ ಹೋಟೆಲ್‌ಗೆ ಸಹ್ಯಾದ್ರಿ ಸಂಚಯದ ಕಾರ್ಯಕರ್ತರು ಆಗಮಿಸಿ, ಕಪ್ಪು ಪತಾಕೆ ಪ್ರದರ್ಶನದ ಪ್ರಯತ್ನ ಮಾಡಿದರು. ಮೊದಲೇ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಪೊಲೀಸರು, ಪ್ರದರ್ಶನಕಾರರನ್ನು ಬಂಧಿಸಿದ ಪ್ರಸಂಗ ನಡೆಯಿತು.








