ಆತ್ಮವಿಶ್ವಾಸಕ್ಕೆ ‘ಸಂಕ್ರಾಂತಿ’ ಪ್ರೇರಣೆಯಾಗಲಿ: ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಜ. 14: ಸುಗ್ಗಿ ಹಬ್ಬ ಮಕರ ಸಂಕ್ರಾಂತಿಯ ಸುಸಂದರ್ಭದಲ್ಲಿ ರಾಜ್ಯದ ಜನತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಭ ಹಾರೈಸಿದ್ದಾರೆ.
ಮಕರ ಸಂಕ್ರಾಂತಿ ಹಬ್ಬವು ನಿಜವಾಗಿಯೂ ಜಾತ್ಯತೀತ ಹಬ್ಬಗಳಲ್ಲೊಂದಾಗಿದೆ. ಸುಗ್ಗಿಯ ಹಿಗ್ಗನ್ನು ಬಿಂಬಿಸುವ ಸಂಕ್ರಾಂತಿ ಹಬ್ಬವು ಹೊಸಧಾನ್ಯಗಳ ಆಗಮನದ ಸೂಚಕ. ಸಂಕ್ರಾಂತಿಯ ಈ ಸಂದರ್ಭದಲ್ಲಿ ಅವರೆಯ ಸೊಗಡು, ಹುಣಸೆಯ ಸೊಗಸು ಹಾಗೂ ಕಬ್ಬಿನ ಸೊಬಗು ಮಾತ್ರವಲ್ಲದೆ, ಬಹುತೇಕ ಎಲ್ಲ ಕೃಷಿ ಹಾಗೂ ತೋಟಗಾರಿಕಾ ಉತ್ಪನ್ನಗಳೂ ಮಾರುಕಟ್ಟೆಯನ್ನು ಹೇರಳವಾಗಿ ಪ್ರವೇಶಿಸುತ್ತವೆ. ಈ ಹಿನ್ನೆಲೆಯಲ್ಲಿ ಸಂಕ್ರಾಂತಿ ಹಬ್ಬವನ್ನು ರೈತರ ಹಬ್ಬ ಎಂದೇ ಬಣ್ಣಿಸಬಹುದಾಗಿದೆ. ಬಡವ-ಬಲ್ಲಿದ ಹಾಗೂ ಜಾತಿ-ವರ್ಗಗಳ ಭೇದವಿಲ್ಲದೆ ಎಳ್ಳು-ಬೆಲ್ಲವ ಮೆಲ್ಲುವ ಸಂಕ್ರಾಂತಿ ಸಂಪ್ರದಾಯ ಈ ಋತುಮಾನದಲ್ಲಿ ಕೊರೆಯುವ ಚಳಿ ವೈಪರೀತ್ಯದಿಂದ ಹೊರಬರಲು ಎಲ್ಲರಿಗೂ ಅನುವು ಮಾಡಿಕೊಡುತ್ತದೆ.
ವರ್ಷವಿಡೀ ತಮ್ಮ ಜೊತೆಗಿದ್ದು ತಮ್ಮಂದಿಗೆ ದುಡಿದು ತಮ್ಮ ದುಡಿಮೆಯಲ್ಲಿ ಶ್ರಮದ ಪಾಲುದಾರರಾಗಿ ಸೇವೆಯನ್ನು ಸಲ್ಲಿಸಿದ ರಾಸುಗಳನ್ನು ಸಿಂಗರಿಸಿ ಅವುಗಳೊಂದಿಗೆ ವೈವಿಧ್ಯಮಯ ಕ್ರೀಡೆಗಳಲ್ಲಿ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡು ರೈತರು ಸಂಭ್ರಮಿಸುತ್ತಾರೆ.
ಈ ಬಾರಿಯ ಸಂಕ್ರಾಂತಿಯು ನಮ್ಮ ರಾಜ್ಯದ ರೈತರಲ್ಲಿನ ಆತ್ಮಬಲ, ಆತ್ಮ ವಿಶ್ವಾಸವನ್ನು ಹಾಗೂ ಆತ್ಮ ಸ್ಥೈರ್ಯವನ್ನು ವೃದ್ಧಿಸಲು ಪ್ರೇರಣೆಯನ್ನು ನೀಡಲಿ ಹಾಗೂ ಸ್ಫೂರ್ತಿಯನ್ನು ಕೊಡಲಿ. ರಾಜ್ಯದ ಜನತೆಯ, ವಿಶೇಷವಾಗಿ ನಮ್ಮ ರೈತರ ಬಾಳು ಬಂಗಾರವಾಗಲಿ ಎಂದು ಸಿದ್ದರಾಮಯ್ಯ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.





