ಚುಟುಕು ಸುದ್ದಿಗಳು
ಸಚಿವ ಸೊರಕೆ ಪ್ರವಾಸ
ಉಡುಪಿ, ಜ.14: ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ ಜ.18ರವರೆಗೆ ಉಡುಪಿ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ. ಜ.15ರಂದು ಬೆಳಗ್ಗೆ 8ಕ್ಕೆ ಉಡುಪಿ ಪ್ರವಾಸಿ ಮಂದಿರದಲ್ಲಿ ಅಹವಾಲು ಸ್ವೀಕಾರ, 10ಕ್ಕೆ ಗಂಗೊಳ್ಳಿಯಲ್ಲಿ ಚರ್ಚ್ ನವೀಕರಣಕ್ಕೆ ಶಿಲಾನ್ಯಾಸ, ಸಂಜೆ 6ಕ್ಕೆ ಮಂಗಳೂರು ಶ್ರೀ ಕುದ್ರೋಳಿ ನಾರಾಯಣಗುರು ಕಾಲೇಜಿನ ಬೆಳ್ಳಿಹಬ್ಬ. ಜ. 16ರಂದು ಬೆಳಗ್ಗೆ 8ಕ್ಕೆ ಹಿರಿಯಡ್ಕ ಶಾಸಕರ ಕಚೇರಿಯಲ್ಲಿ ಅಹವಾಲು ಸ್ವೀಕಾರ, 10:30ರಿಂದ ಕುರ್ಕಾಲುನಲ್ಲಿ, ಸಂಜೆ 6ಕ್ಕೆ ವಕ್ವಾಡಿಯಲ್ಲಿ ಜಿಲ್ಲಾ ಮಟ್ಟದ ಯುವಜನ ಮೇಳ, 6:30ಕ್ಕೆ ಅಡ್ವೆ ನಂದಿಕೂರು ಕೋಟಿ-ಚೆನ್ನಯ್ಯ ಜೋಡುಕೆರೆ ಕಂಬಳ, 7ಕ್ಕೆ ಪಡುಬೆಳ್ಳೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಜ.17ರಂದು ಬೆಳಗ್ಗೆ 8:30ಕ್ಕೆ ಅತ್ತೂರು ಚರ್ಚ್‌ನ ವಾರ್ಷಿಕ ಜಾತ್ರೆ, 10:30ಕ್ಕೆ ಉಡುಪಿ ಬೋರ್ಡ್ ಹೈಸ್ಕೂಲ್‌ನಲ್ಲಿ ವಸ್ತು ಪ್ರದರ್ಶನ ಉದ್ಘಾಟನೆ, ಅಪರಾಹ್ನ 2:30ಕ್ಕೆ ಕಾಪು ರಾಜೀವಭವನ, ರಾತ್ರಿ 8ರಿಂದ ಪರ್ಯಾಯ ಮಹೋತ್ಸವದ ವಿವಿಧ ಕಾರ್ಯಕ್ರಮ, ಜ.18ರ ಮುಂಜಾನೆ 2:30ಕ್ಕೆ ಉಡುಪಿ ಪರ್ಯಾಯ ಮೆರವಣಿಗೆ, 6ಕ್ಕೆ ಉಡುಪಿ ಪರ್ಯಾಯ ದರ್ಬಾರ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು ಎಂದು ಪ್ರಕಟನೆ ತಿಳಿಸಿದೆ.
ನಾಳೆ ಅಡ್ವೆ-ನಂದಿಕೂರು ಕಂಬಳ
ಪಡುಬಿದ್ರೆ, ಜ.14: ಅಡ್ವೆ ನಂದಿಕೂರಿನ ಕೋಟಿ ಚೆನ್ನಯ ಜೋಡುಕರೆ ಕಂಬಳೋತ್ಸವಕ್ಕೆ ಜ.16ರಂದು ಬೆಳಗ್ಗೆ 8ಕ್ಕೆ ನಂದಿಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಮಧ್ವರಾಯ ಭಟ್ ಚಾಲನೆ ನೀಡುವರು. ಸಂಜೆ 6ಕ್ಕೆೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಆಶೀರ್ವಚನ ನೀಡುವರು. ಇದೇ ಸಂದರ್ಭ ಜಯ ಸಿ. ಸುವರ್ಣ, ಬಾರ್ಕೂರು ಶಾಂತರಾಮ ಶೆಟ್ಟಿ, ಮನೋಹರ ಶೆಟ್ಟಿ, ದೇವೇಂದ್ರ ಕೋಟ್ಯಾನ್, ಆದರ್ಶ್ ಶೆಟ್ಟಿ, ಎರ್ಮಾಳು ರೋಹಿತ್ ಹೆಗ್ಡೆ, ದೇವಿಪ್ರಸಾದ್ ಶೆಟ್ಟಿಯವರನ್ನು ಸನ್ಮಾನಿಸಲಾಗುವುದು. ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು ಎಂದು ಪ್ರಕಟನೆ ತಿಳಿಸಿದೆ.
ಜ.17ರಂದು ವಿಶಿಷ್ಟ ಮಕ್ಕಳ ಮೇಳ
ಮಂಗಳೂರು, ಜ.14: ಅಶಕ್ತ ಮಕ್ಕಳ ಮತ್ತು ಹೆತ್ತವರ ವೇದಿಕೆ ಯಾದ ಆಶಾ ಜ್ಯೋತಿಯ ಆಶ್ರಯದಲ್ಲಿ ಜ.17ರಂದು ವಿಶಿಷ್ಟ ರಿಗಾಗಿ ವಿಶಿಷ್ಟ ಮೇಳ ಕಾರ್ಯಕ್ರಮವನ್ನು ಡೊಂಗರಕೇರಿ ಕೆನರಾ ಹೈಸ್ಕೂಲ್‌ನಲ್ಲಿ ಆಯೋಜಿಸಲಾಗಿದೆ ಎಂದು ಸಂಘಟಕಿ ಸಾವಿತ್ರಿ ತಿಳಿಸಿದರು.
ವಿಶೇಷ ಮಕ್ಕಳಿಗಾಗಿ ನಡೆಯುವ ಕಾರ್ಯಕ್ರಮದಲ್ಲಿ ತಿರು ಗುವ ತೊಟ್ಟಿಲು, ಕುದುರೆ,ಒಂಟೆ ಸವಾರಿ, ಗಾಯನ, ನೃತ್ಯ, ಸಾಮೂಹಿಕ ಕುಣಿತದ ಮೂಲಕ ಪ್ರತಿಭಾ ಪ್ರದರ್ಶನ, ವಿಕಲ ಚೇತನ ಮತ್ತು ಅವರ ಪಾಲಕರಿಗೆ ಮನರಂಜನಾ ಆಟಗಳು, ಸರಕಾರದಿಂದ ಸಿಗಬಹುದಾದ ಸೌಲಭ್ಯಗಳ ಕುರಿತು ಮಾಹಿತಿ ಮತ್ತು ಅಂಗವಿಕಲತೆಯ ಪ್ರಮಾಣ ಪತ್ರ ಇಲ್ಲದವರಿಗೆ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಆಶಾಜ್ಯೋತಿ ಸಂಸ್ಥೆಯ ಅಧ್ಯಕ್ಷ ಬಿ. ಶ್ರೀನಿವಾಸ ರಾವ್, ಕಾರ್ಯದರ್ಶಿ ವಿ.ಮುರಳೀಧರ ನಾಕ್, ಖಜಾಂಚಿ ಕೆ.ವಿಶ್ವನಾಥ ಪೈ, ವಿನೋದ್ ಶೆಣೈ ಉಪಸ್ಥಿತರಿದ್ದರು.
ಜ.17ರಂದು ಪಲ್ಸ್ ಪೋಲಿಯೊ ಚಾಲನೆ
ಉಡುಪಿ, ಜ.14: ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ ಉಡುಪಿಯ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಜ.17ರ ಬೆಳಗ್ಗೆ 8ಕ್ಕೆ ರಾಷ್ಟ್ರೀಯ ಪಲ್ಸ್ ಪೋಲಿಯೊ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ ಎಂದು ಪ್ರಕಟನೆೆ ತಿಳಿಸಿದೆ.
ಜ.17: ವಸ್ತು ಪ್ರದರ್ಶನ, ಮಾರಾಟ ಮೇಳ
ಉಡುಪಿ, ಜ.14: ಜಿಲ್ಲಾ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಕೈಗಾರಿಕಾ ವಿಭಾಗದ ವತಿಯಿಂದ ಜಿಲ್ಲಾ ಮಟ್ಟದ ಕೈಗಾರಿಕಾ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಜ.17ರಿಂದ 19ರವರೆಗೆ ಬೆಳಗ್ಗೆ 10ರಿಂದ ರಾತ್ರಿ 9ರವರೆಗೆ ಉಡುಪಿ ಬೋರ್ಡ್ ಹೈಸ್ಕೂಲ್ ಆವರಣದಲ್ಲಿ ನಡೆಯಲಿದೆ. ವಸ್ತುಪ್ರದರ್ಶನ ಮತ್ತು ಮಾರಾಟ ಮೇಳವನ್ನು ಜ.17ರಂದು ಬೆಳಗ್ಗೆ 10:30ಕ್ಕೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ ಉದ್ಘಾಟಿಸುವರು. ಜ.17- 24: ‘ಗುರುಗಳ ಗುರು ನಾರಾಯಣ’ ಕಾವ್ಯ ಕತೆ ಕಾರ್ಯಕ್ರಮ
ಮಂಗಳೂರು, ಜ.14: ಡಾನ್‌ಬಾಸ್ಕೋ ಮಿನಿ ಹಾಲ್‌ನಲ್ಲಿ ಜ.17ರಿಂದ 24ರವರೆಗೆ ‘ಗುರುಗಳ ಗುರು ನಾರಾಯಣ’ ಕಾವ್ಯ ಕತೆ ಹಮ್ಮಿಕೊಳ್ಳಲಾಗಿದೆ. ಪೇರೂರಿನ ಧರ್ಮ ಸಂಶೋಧನಾ ಕೇಂದ್ರ ಈ ಗುರುಕತೆಯನ್ನು ಹಮ್ಮಿಕೊಂಡಿದ್ದು, ಪ್ರತೀ ದಿನ ಸಂಜೆ 4:30ರಿಂದ 6:30ವರೆಗೆ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.
ಎಸ್ಸೆಸ್ಸೆಫ್‌ನಿಂದ ಅಕ್ಕಿ ವಿತರಣೆ
ಉಳ್ಳಾಲ, ಜ.14: ತಾಜುಲ್ ಉಲಮಾ ಉರೂಸ್ ಪ್ರಚಾರಾರ್ಥ ಎಸ್ಸೆಸ್ಸೆಫ್ ತೊಕ್ಕೊಟ್ಟು ಸೆಕ್ಟರ್ ರಿಲೀಫ್ ಸರ್ವಿಸ್ ವತಿಯಿಂದ 60 ಫಲಾನುಭವಿಗಳಿಗೆ ಅಕ್ಕಿ ವಿತರಣಾ ಕಾರ್ಯಕ್ರಮವು ಸೇವಂತಿಗುಡ್ಡೆಯ ವಿಕಾಯತುಲ್ ಇಸ್ಲಾಂ ಮದ್ರಸಾ ಹಾಲ್‌ನಲ್ಲಿ ಇತ್ತೀಚೆಗೆ ನಡೆಯಿತು. ಸೆಕ್ಟರ್ ಅಧ್ಯಕ್ಷ ಇಲ್ಯಾಸ್ ಸಖಾಫಿ ಅಧ್ಯಕ್ಷತೆ ವಹಿಸಿದ್ದರು.ವಿಕಾಯತುಲ್ ಇಸ್ಲಾಂ ಮದ್ರಸ ಉಪಾಧ್ಯಕ್ಷ ನೌಶಾದ್ ಸೇವಂತಿಗುಡ್ಡೆ, ಮನ್ಸೂರ್ ಮದನಿ ವಳವೂರು, ಅಲ್ತಾಫ್ ಕುಂಪಲ, ಫಾರೂಕ್ ಸೇವಂತಿಗುಡ್ಡೆ, ಅಶ್ರಫ್ ಸೇವಂತಿಗುಡ್ಡೆ, ಇಸ್ಮಾಯೀಲ್ ಸೇವಂತಿಗುಡ್ಡೆ, ಬದ್ರುದ್ದೀನ್ ಸೇವಂತಿಗುಡ್ಡೆ, ಶಮೀರ್ ಸೇವಂತಿಗುಡ್ಡೆ, ವಿಾಯತುಲ್ ಇಸ್ಲಾಂ ಮದ್ರಸದ ಪ್ರಧಾನ ಕಾರ್ಯದರ್ಶಿ ಮುಸ್ತಫಾ ಉಪಸ್ಥಿತರಿದ್ದರು. ಅನ್ಸಾರ್ ಅಳೇಕಲ ಸ್ವಾಗತಿಸಿದರು. ಜಾಫರ್ ಯು.ಎಸ್. ವಂದಿಸಿದರು.
ಹೆಚ್ಚಿನ ದರ ವಿಧಿಸದಂತೆ ಮನವಿ
ಉಡುಪಿ, ಜ.14: ಪರ್ಯಾಯ ಮಹೋತ್ಸವಕ್ಕೆ ದೇಶವಿದೇಶದಿಂದ ಆಗಮಿಸುವ ಗ್ರಾಹಕರು ಹಾಗೂ ಭಕ್ತರಿಗೆ ಉಡುಪಿಯ ಹೊಟೇಲು ಹಾಗೂ ಅಂಗಡಿಗಳಲ್ಲಿ ಹೆಚ್ಚಿನ ದರ ವಿಧಿಸದೆ ನ್ಯಾಯಬೆಲೆಯಲ್ಲಿ ಉತ್ತಮ ವಸ್ತುಗಳನ್ನು ಮಾರಾಟ ಮಾಡುವ ಮೂಲಕ ಉಡುಪಿಯ ಕೀರ್ತಿಯನ್ನು ಹೆಚ್ಚಿಸಬೇಕೆಂದು ಉಡುಪಿ ಜಿಲ್ಲಾ ವರ್ತಕರ ಸಂಘದ ಅಧ್ಯಕ್ಷ ಐರೋಡಿ ಸಹನಶೀಲ ಪೈ ಪ್ರಕಟನೆಯಲ್ಲಿ ಮನವಿ ಮಾಡಿದ್ದಾರೆ.
ಮಾರೂರು ಗ್ರಾಮದ ಮರು ಭೂಮಾಪನ ಕಾರ್ಯ ಪೂರ್ಣ
ಮಂಗಳೂರು, ಜ.14: ದ.ಕ ಜಿಲ್ಲೆ ಮಂಗಳೂರು ತಾಲೂಕು ಮಾರಾರು ಗ್ರಾಮದ ಮರು ಭೂಮಾಪನಾ ಕಾರ್ಯವು ಪೂರ್ಣಗೊಂಡಿದ್ದು, ತತ್ಸಂಬಂಧ ಹೊಸದಾಗಿ ತಯಾರಿಸಲಾಗಿರುವ ಎಲ್ಲಾ ದಾಖಲೆಗಳನ್ನು ಮತ್ತು ಪಹಣಿಗಳನ್ನು ಕರ್ನಾಟಕ ಭೂಕಂದಾಯ ನಿಯಮ 1964 ಕಲಂ 127(3) ಮತ್ತು ಕರ್ನಾಟಕ ಭೂಕಂದಾಯ ನಿಯಮಾವಳಿ 1966ರ ನಿಯಮ 61ರಂತೆ ಜಾರಿಗೆ ತರುವ ಬಗ್ಗೆ ಸಾರ್ವಜನಿಕರ ಮಾಹಿತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ. ಸಾರ್ವಜನಿಕರು ಮರು ಭೂಮಾಪನದನ್ವಯ ಹೊಸದಾಗಿ ತಯಾರಿಸಲಾಗಿರುವ ಭೂದಾಖಲೆಗಳು ಮತ್ತು ಹಕ್ಕು ದಾಖಲೆಗಳನ್ನು ಆಯಾ ತಾಲೂಕಿನ ತಹಶೀಲ್ದಾರ್ ಕಚೇರಿಯ ಕೆಲಸದ ದಿನ ಹಾಗೂ ಕಚೇರಿಯ ವೇಳೆಯಲ್ಲಿ ದೊರಕುವಂತೆ ಮಾಡಲಾಗಿದೆ.
ಇಂದು ‘ಪಣಂಬೂರು ಸಂಕ್ರಾಂತಿ ಉತ್ಸವ’
ಮಂಗಳೂರು, ಜ.14: ಶ್ರೀ ಕ್ಷೇತ್ರ ಪಣಂಬೂರು ನಂದನೇಶ್ವರ ದೇವಸ್ಥಾನದ ಆಶ್ರಯದಲ್ಲಿ ಯಕ್ಷಗಾನ ಕಲಾ ಮಂಡಳಿ, ಪಣಂಬೂರು ರೋಟರಿ ಕ್ಲಬ್ ಪೋರ್ಟ್ ಟೌನ್ ಹಾಗೂ ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನದ ಸಹಯೋಗದಲ್ಲಿ ಯಕ್ಷನಂದನದ ವತಿಯಿಂದ ‘ಪಣಂಬೂರು ಸಂಕ್ರಾಂತಿ ಉತ್ಸವ-2016’ ಜ.15 ರಂದು ನಡೆಯಲಿದೆ ಎಂದು ಯಕ್ಷನಂದನದ ಸಂಚಾಲಕ ಪಿ. ಸಂತೋಷ್ ಐತಾಳ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬೆಳಗ್ಗೆ 8:30ರಿಂದ ವಿದ್ಯಾರ್ಥಿಗಳಿಗಾಗಿ ಚಿತ್ರ ರಚನೆ ಸ್ಪರ್ಧೆ, ಪ್ರಾಥಮಿಕ, ಪ್ರೌಢ ಹಾಗೂ ಸಾರ್ವಜನಿಕ ವಿಭಾಗದಲ್ಲಿ ಜಾನಪದ ಶೈಲಿಯ ನೃತ್ಯ ಸ್ಪರ್ಧೆ ಜರಗಲಿದೆ. ಅಂಗನವಾಡಿ, ಕಿರಿಯ ಹಾಗೂ ಹಿರಿಯ ಪ್ರೌಢಶಾಲಾ ವಿಭಾಗದಲ್ಲಿ ಪೌರಾಣಿಕ ವೇಷ ಸ್ಪರ್ಧೆ ನಡೆಯಲಿದೆ. ಅಲ್ಲದೆ, ಸಾರ್ವಜನಿಕ ವಿಭಾಗದಲ್ಲಿ ಆಶು ಭಾಷಣ ಸ್ಪರ್ಧೆಯೂ ನಡೆಯಲಿದೆ.ಉತ್ಸವವನ್ನು ಕಟೀಲು ದುರ್ಗಾ ಪರಮೇಶ್ವರಿ ದೇವಳದ ವಾಸುದೇವ ಆಸ್ರಣ್ಣ ಉದ್ಘಾಟಿಸುವರು. ಉತ್ಸವದ ಸಮಾರೋಪದ ಅಧ್ಯಕ್ಷತೆಯನ್ನು ಪತಂಜಲಿ ಯೋಗ ಶಿಕ್ಷಣ ಸಮಿತಿಯ ಸಂಚಾಲಕ ರವೀಶಕುಮಾರ್ ವಹಿಸುವರು ಎಂದವರು ತಿಳಿಸಿದರು.ಡಾ.ಪಿ.ಸತ್ಯಮೂರ್ತಿ ಐತಾಳ್, ರವಿ ಅಲೆವೂರಾಯ, ಶಂಕರ ನಾರಾಯಣ ಮೈರ್ಪಾಡಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ನಾಳೆ ವಿವೇಕಾನಂದ ಜಯಂತಿ ಆಚರಣೆ
ಮುಲ್ಕಿ, ಜ.14: ಕಿನ್ನಿಗೋಳಿಯ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆಯ ವಿವೇಕಾನಂದ ಜಯಂತಿ ಅಂಗವಾಗಿ ಕಾಯಕರತ್ನ ಪ್ರಶಸ್ತಿ ಪ್ರದಾನ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮವು ಜ.16ರಂದು ಸಂಜೆ 6ಕ್ಕೆ ಮುಲ್ಕಿ ಕಾರ್ನಾಡು ಗಾಂಧಿ ಮೈದಾನದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಜಗನ್ನಾಥ ಶೆಟ್ಟಿ ನಿಡ್ಡೋಡಿ ಚಾವಡಿಮನೆ ತಿಳಿಸಿದ್ದಾರೆ.
ಸಂಸದ ನಳಿನ್‌ಕುಮಾರ್ ಕಟೀಲು ಕಾರ್ಯಕ್ರಮ ಉದ್ಘಾಟಿ ಸುವರು ಎಂದು ಪ್ರಕಟನೆ ತಿಳಿಸಿದೆ.
ಗ್ರಾಮ ಸಂಪರ್ಕ ಕಾರ್ಯಕ್ರಮ
ಉಡುಪಿ, ಜ.14: ಸರಕಾರದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಪ್ರಚಾರ ಮಾಡುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಗ್ರಾಮ ಸಂಪರ್ಕ ಕಾರ್ಯಕ್ರಮ ಕಾರ್ಕಳ ತಾಲೂಕಿನ ಪಡುಕುಡೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಸರಕಾರದ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಗಣೇಶ್ ಕುಮಾರ್ ಗಂಗೊಳ್ಳಿ ಮತ್ತು ಬಳಗ ಸಂಗೀತದ ಮೂಲಕ ಹಾಗೂ ಚಿಕ್ಕಮಗಳೂರಿನ ತೊಗಲು ಗೊಂಬೆ ಕಲಾತಂಡದ ಸದಸ್ಯರಿಂದ ತೊಗಲುಗೊಂಬೆ ಪ್ರದರ್ಶನದ ಮೂಲಕ ಅರಿವು ಮೂಡಿಸಿದರು.







