ತುಮಕೂರು: ಪಾದಚಾರಿಗಳ ಮೇಲೆ ಹರಿದ ಓಮ್ನಿ; ಬಸ್ಸಿಗಾಗಿ ಕಾಯುತ್ತಿದ್ದ ಐವರ ಸಾವು
ತುಮಕೂರು, ಜ.14: ಹಬ್ಬಕ್ಕೆ ಬೇಕಾದ ಸಾಮಾನುಗಳನ್ನು ತೆಗೆದುಕೊಂಡು ಊರಿಗೆ ಹೊರಡಲು ಬಸ್ಸಿಗಾಗಿ ರಸ್ತೆ ಬದಿ ಕಾಯುತ್ತಿದ್ದ ಗುಂಪೊಂದರ ಮೇಲೆ ಮಾರುತಿ ಒಮ್ನಿ ಕಾರೊಂದು ಹರಿದ ಪರಿಣಾಮ ಐವರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 48ರ ಬಳಿ ಸಂಭವಿಸಿದೆ.
ಮೃತಪಟ್ಟವರನ್ನು ಶಿರಾ ತಾಲೂಕಿನ ಕೆಂಚಗಾನಹಳ್ಳಿಯ ಮರಡಿ ರಂಗನಾಥ(22), ಲಲಿತಮ್ಮ(35), ರತ್ನಮ್ಮ(25), ಹೊನ್ನಮ್ಮ(80) ಮತ್ತು ಹನುಮಂತರಾಯಪ್ಪ(20) ಎಂದು ಗುರುತಿಸಲಾಗಿದೆ.
ಮೃತರೆಲ್ಲರೂ ಮಧ್ಯಾಹ್ನ 2:30ರ ಸುಮಾರಿಗೆ ಹೆದ್ದಾರಿ ಪಕ್ಕದಲ್ಲಿದ್ದ ದಿಬ್ಬದ ಮೇಲೆ ಕುಳಿತು ಬಸ್ಸಿಗಾಗಿ ಕಾಯುತ್ತಿದ್ದರು. ಈ ವೇಳೆ ಬೆಂಗಳೂರಿನಿಂದ ಶಿರಾ ಕಡೆಗೆ ಹೋಗುತ್ತಿದ್ದ ಓಮ್ನಿ ಕಾರು ಏಕಾಏಕಿ ಇವರ ಮೇಲೆರಗಿದೆ. ಪರಿಣಾಮ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಕಳ್ಳಂಬೆಳ್ಳ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದು, ಕಾರು ಚಾಲಕನನ್ನು ಬಂಧಿಸಿದ್ದಾರೆ.
ಅಪಘಾತದಿಂದಾಗಿ ರಾಷ್ಟ್ರೀಯ ಹೆದ್ದಾರಿ- 48ರಲ್ಲಿ ಸುಮಾರು ಅರ್ಧಗಂಟೆಗೂ ಹೆಚ್ಚುಕಾಲ ರಸ್ತೆ ಸಂಚಾರ ಅಸ್ತವ್ಯಸ್ತವಾಗಿತ್ತು. ಈ ಹೆದ್ದಾರಿಯಲ್ಲಿ ಮೆಲಿಂದ ಮೇಲೆ ಅಪಘಾತಗಳು ನಡೆಯುತ್ತಿದ್ದು, ಸೂಚನಾ ಫಲಕ ಹಾಗೂ ಅಂಡರ್ ಪಾಸ್ ನಿರ್ಮಿಸಿಕೊಡಬೇಕು ಎಂದು ಇದೇ ವೇಳೆ ಎಐಟಿಯುಸಿ ಕಾರ್ಯಕರ್ತರು ಹೆದ್ದಾರಿಯಲ್ಲಿ ಕುಳಿತು ಧರಣಿ ನಡೆಸಿದರು.





