ಭಾರತ-ಪಾಕ್ ನಡುವೆ ಮಾತುಕತೆ ಮುಂದೂಡಿಕೆ

ಮಸೂದ್ ಅಝರ್ ಬಂಧನ ಖಚಿತಪಡಿಸದ ಪಾಕ್
ಹೊಸದಿಲ್ಲಿ, ಜ.14: ಪಠಾಣ್‌ಕೋಟ್ ಭಯೋತ್ಪಾದಕ ದಾಳಿಯ ಶಂಕಿತ ರೂವಾರಿ, ಜೈಷೆ ಮುಹಮ್ಮದ್‌ನ ವರಿಷ್ಠ ವೌಲಾನಾ ಮಸೂದ್ ಅಝರ್‌ನ ಕುರಿತು ತನಗೇನೂ ತಿಳಿದಿಲ್ಲವೆಂದು ಪಾಕಿಸ್ತಾನದ ವಿದೇಶಾಂಗ ಕಚೇರಿ ಗುರುವಾರ ಹೇಳಿದೆ.
ಇಸ್ಲಾಮಾಬಾದ್‌ನಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಪಾಕಿಸ್ತಾನದ ವಿದೇಶಾಂಗ ಕಚೇರಿಯ ವಕ್ತಾರ ಖಾಝಿ ಖಲೀಲುಲ್ಲಾ, ಅಂತಹ ಬಂಧನದ ಬಗ್ಗೆ ತನಗೆ ತಿಳಿದಿಲ್ಲ ಎಂದಿದ್ದಾರೆ. ಭಾರತ ಹಾಗೂ ಪಾಕಿಸ್ತಾನಗಳ ನಡುವಣ ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದ ಮಾತುಕತೆ ಸದ್ಯ ಮುಂದೂಡಲಾಗಿದೆ ಯೆಂದು ಅವರು ತಿಳಿಸಿದ್ದಾರೆ.
ಭಾರತ-ಪಾಕಿಸ್ತಾನ ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದ ಮಾತುಕತೆ ನಾಳೆ ನಡೆಯುವುದಿಲ್ಲ. ಹೊಸ ದಿನಾಂಕ ನಿಗದಿಯ ಬಗ್ಗೆ ಪರಸ್ಪರ ಸಮಾಲೋಚನೆ ನಡೆಯುತ್ತಿದೆಯೆಂದು ಖಲೀಲುಲ್ಲಾ ಹೇಳಿದ್ದಾರೆ.
7 ಮಂದಿ ಭದ್ರತಾ ಯೋಧರ ಸಾವಿಗೆ ಕಾರಣವಾದ ಜ.2ರ ಪಠಾಣ್‌ಕೋಟ್ ಭಯೋ ತ್ಪಾದಕ ದಾಳಿಯ ಕುರಿತು ಭಾರತದ ತನಿಖೆಗೆ ಪಾಕಿಸ್ತಾನ ಸರಕಾರವು ಎಲ್ಲ ರೀತಿಯ ಸಹಕಾರ ನೀಡಿದೆ.
ಜೈಷೆ ಮುಹಮ್ಮದ್‌ನ ಮುಖ್ಯಸ್ಥ ಅಝರ್, ಆತನ ಸಹೋದರ ಹಾಗೂ ಸಂಘಟನೆಯ ಇತರ ಕೆಲವು ಸದಸ್ಯರನ್ನು ಗೌಪ್ಯ ಸ್ಥಳವೊಂದಕ್ಕೆ ಒಯ್ಯಲಾಗಿದೆ. ಸಂಬಂಧಿತ ಅಧಿಕಾರಿಗಳು ಪಠಾಣ್‌ಕೋಟ್ ವಾಯುನೆಲೆ ದಾಳಿಯ ಬಗ್ಗೆ ಅಲ್ಲಿ ಅವರ ವಿಚಾರಣೆ ನಡೆಸುತ್ತಿದ್ದಾರೆಂದು ಪಾಕಿಸ್ತಾನವು ಬುಧವಾರ ಘೋಷಿಸಿತ್ತು. ಅಜ್ಞಾತವಾಗುಳಿಯ ಬಯಸಿದ್ದ ಪಾಕಿಸ್ತಾನದ ಹಿರಿಯ ವಿಶೇಷ ಭದ್ರತಾ ಅಧಿಕಾರಿಯೊಬ್ಬರು ಇದನ್ನು ಸುದ್ದಿಸಂಸ್ಥೆಗೆ ತಿಳಿಸಿದ್ದರು.







