ಬಿಜೆಪಿ ಸಂಸದ ಕಾಣೆಯಾಗಿದ್ದಾರೆ! ಬಿಹಾರದ ಪಟ್ಟಣದಲ್ಲಿ ಭಿತ್ತಿಪತ್ರ
ಪಾಟ್ನಾ, ಜ.14: ಕಳೆದ 2014ರ ಲೋಕಸಭಾ ಚುನಾವಣೆಯ ಬಳಿಕ ಬಿಜೆಪಿ ಸಂಸದ ಹಾಗೂ ಕೇಂದ್ರ ಸಚಿವ ಗಿರಿರಾಜಸಿಂಗ್ ಕ್ಷೇತ್ರಕ್ಕೆ ಕಾಲಿರಿಸಿಲ್ಲವೆಂದು ಆರೋಪಿಸಿದ ಭಿತ್ತಿಪತ್ರಗಳು ಬಿಹಾರದ ಸಂಸದೀಯ ಕ್ಷೇತ್ರದಲ್ಲಿ ಕಾಣಿಸಿಕೊಂಡಿವೆ.
ಹಿಂದಿ ಭಾಷೆಯಲ್ಲಿರುವ ಈ ಭಿತ್ತಿಪತ್ರಗಳನ್ನು ಗುರುವಾರ ಬಿಹಾರದ ಶೇಖ್‌ಪುರ ಜಿಲ್ಲೆಯ ಬಾರ್ಬಿಘಾ ಪಟ್ಟಣದ ವಿವಿಧೆಡೆಗಳಲ್ಲಿ ಅಂಟಿಸಲಾಗಿದ್ದು. ಅವುಗಳಲ್ಲಿ ಸ್ಥಳೀಯ ಸಂಸದ ‘ಕಾಣೆಯಾಗಿದ್ದಾರೆ’ ಎಂದು ಬರೆಯಲಾಗಿದೆಯೆಂದು ಜಿಲ್ಲೆಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಒಂದೂವರೆ ವರ್ಷ ಕಳೆದರೂ, ಗಿರಿರಾಜಸಿಂಗ್ ಬಾರ್ಬಿಘಾದಲ್ಲಿ ಅಭಿವೃದ್ಧಿ ಕಾರ್ಯಗಳಿಗಾಗಿ ತನ್ನ ಸಂಸದರ ಸ್ಥಳೀಯಾಭಿವೃದ್ಧಿ ಯೋಜನೆಯ ನಿಧಿಯನ್ನು ಖರ್ಚು ಮಾಡಿಲ್ಲವೆಂದು ಭಿತ್ತಿಪತ್ರದಲ್ಲಿ ಆರೋಪಿಸಲಾಗಿದೆ.
ಬಾರ್ಬಿಘಾದ ಅನೇಕ ಮಂದಿ, ಭಿತ್ತಿ ಪತ್ರಗಳ ಬಗ್ಗೆ ಸಮ್ಮತಿ ಸೂಚಿಸುವ ಮೂಲಕ, ಸಂಸದ ಸಿಂಗ್ ವಿರುದ್ಧ ತಮ್ಮ ಆಕ್ರೋಶವನ್ನು ಪ್ರಕಟಿಸಿದ್ದಾರೆಂದು ಸ್ಥಳೀಯ ನಿವಾಸಿ ಧನಂಜಯ್ ಸಿಂಗ್ ಎಂಬವರು ತಿಳಿಸಿದ್ದಾರೆ.
ಕ್ಷೇತ್ರದ ಜನರು ಎದುರಿಸುತ್ತಿರುವ ಸಮಸ್ಯೆಗಳ ಪಟ್ಟಿಯೊಂದನ್ನು ಭಿತ್ತಿಪತ್ರದಲ್ಲಿ ನೀಡಲಾಗಿದೆ. ಗಿರಿರಾಜ ಸಿಂಗ್ ಈ ಹಿಂದೆ ವಿಭಿನ್ನ ಹೇಳಿಕೆಗಳನ್ನು ನೀಡುವ ಮೂಲಕ ವಿವಾದಗಳಿಗೆ ಕಾರಣವಾಗಿದ್ದರು.





