ಸಮ-ಬೆಸ ನಿಯಮ ರದ್ದತಿ ಬೇಡ: ಸುಪ್ರೀಂಕೋರ್ಟ್ ಮಹತ್ವದ ಆದೇಶ
ಹೊಸದಿಲ್ಲಿ,ಜ.14: ದಿಲ್ಲಿಯಲ್ಲಿ ಜನವರಿ 1ರಿಂದ ಜಾರಿಗೆ ಬಂದಿರುವ ಸಮಬೆಸ ವಾಹನಸಾರಿಗೆ ಪ್ರಯೋಗವನ್ನು ರದ್ದುಗೊಳಿಸಬಾರದೆಂದು ಸುಪ್ರೀಂಕೋರ್ಟ್ ಗುರುವಾರ ಮಹತ್ವದ ಆದೇಶ ನೀಡಿದೆ. ‘‘ಜನರು, ಇಂಧನ ತ್ಯಾಜ್ಯಗಳ ಹೊರಸೂಸುವಿಕೆಯಿಂದ ಸಾಯುತ್ತಿದ್ದಾರೆ. ಸರಕಾರವು ಮಾಲಿನ್ಯವನ್ನು ನಿಯಂತ್ರಿಸಲು ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಸಹಕರಿಸಬೇಕೆಂದು ಅದು ಹೇಳಿದೆ.
ಹದಿನೈದು ದಿನಗಳಿಂದ ನಡೆಯುತ್ತಿರುವ ಸಮಬೆಸ ವಾಹನ ಸಂಚಾರ ನಿಯಮದ ಪ್ರಾಯೋಗಿಕ ಪರೀಕ್ಷೆ ಜಾರಿಗೊಂಡ ಬಳಿಕ ತಾನು ಸೇರಿದಂತೆ ಉನ್ನತ ನ್ಯಾಯಾಧೀಶರು ಒಟ್ಟಾಗಿ ಕಾರುಗಳಲ್ಲಿ ಪ್ರಯಾಣಿಸಿ, ಕಚೇರಿಗೆ ಆಗಮಿಸುತ್ತಿದ್ದೇವೆ ಎಂದು ಸಿಜೆಐ ತಿಳಿಸಿದರು. ಜನವರಿ 1ರಿಂದ ಆರಂಭಗೊಂಡಿದ್ದ ಈ ಪ್ರಯೋಗವು, ನಾಳೆ ಕೊನೆಗೊಳ್ಳಬೇಕಿತ್ತು.
ದಿಲ್ಲಿಯಲ್ಲಿ ಸಮಬೆಸ ಸಂಖ್ಯೆಯ ನೋಂದಣಿಯ ವಾಹನಗಳನ್ನು ಪ್ರತ್ಯೇಕವಾಗಿ ಎರಡು ದಿನಗಳಿಗೊಮ್ಮೆ ಓಡಿಸುವ ನಿಯಮವನ್ನು ಕೇಜ್ರಿವಾಲ್ ಸರಕಾರ ಜಾರಿಗೊಳಿಸಿತ್ತು.
ಸಮಬೆಸ ಸಂಖ್ಯಾ ವಾಹನ ಸಂಚಾರ ನಿಯಮದ ಪ್ರಾಯೋಗಿಕ ಪರೀಕ್ಷೆಯನ್ನು ಕಡಿತಗೊಳಿಸಲು ಸಾಧ್ಯವಿಲ್ಲವೆಂದು ದಿಲ್ಲಿ ಹೈಕೋರ್ಟ್ ಕಳೆದ ವಾರ ತೀರ್ಪು ನೀಡಿತ್ತು. ಇದೀಗ, ಸಮಬೆಸ ವಾಹನ ಸಂಚಾರ ನಿಯಮವನ್ನು ರದ್ದುಪಡಿಸುವಂತೆ ಕೋರಿ ನ್ಯಾಯವಾದಿಯೊಬ್ಬರು ಸಲ್ಲಿಸಿದ ಮೇಲ್ಮನವಿಯನ್ನು ಸುಪ್ರೀಎಕೋರ್ಟ್ ತಿರಸ್ಕರಿಸಿದೆ.
ವಾಹನಗಳಿಂದ ಹೊಗೆ ಮಾಲಿನ್ಯದ ವಿರುದ್ಧ ಹೋರಾಡಲು ಸರಕಾರವು ಪ್ರಾಯೋಗಿಕವಾಗಿ ಜಾರಿಗೊಳಿಸಿದ್ದ ಸಮಬೆಸ ಸಂಖ್ಯೆಯ ವಾಹನ ಸಂಚಾರ ನಿಯಮವನ್ನು ಇನ್ನು ಮುಂದುವರಿಸಲು ಸಾಧ್ಯವಿಲ್ಲವೆಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ತಿಳಿಸಿದ್ದರು. ಸಮಬೆಸ ನೋಂದಣಿ ಸಂಖ್ಯೆಯ ವಾಹನ ಸಂಚಾರ ನಿಯಮದಿಂದಾಗಿ ರಾಜಧಾನಿಯಲ್ಲಿ ವಾಯುವಿನ ಗುಣಮಟ್ಟದ ಮೇಲೆ ಆಗಿರುವ ಪರಿಣಾಮವನ್ನು ಅಂದಾಜಿಸಲು ತನ್ನ ಸರಕಾರಕ್ಕೆ ಕಾಲಾವಕಾಶ ಬೇಕಿದೆಯೆಂದು ಅವರು ಹೇಳಿದ್ದರು.
ಕಾರು ಸೇರಿದಂತೆ ಖಾಸಗಿ ವಾಹನಗಳ ಸಂಚಾರವನ್ನು ನಿರ್ಬಂಧಿಸಿದಲ್ಲಿ, ಭಾರೀ ಸಂಖ್ಯೆಯ ನಾಗರಿಕರ ಸುಗಮ ಪ್ರಯಾಣಕ್ಕೆ ಅವಕಾಶ ನೀಡುವಂತಹ ಸಮರ್ಥ ಸಾರಿಗೆ ವ್ಯವಸ್ಥೆಯನ್ನು ದಿಲ್ಲಿಯು ಹೊಂದಿಲ್ಲವೆಂದು ಸಮಬೆಸ ವಾಹನ ಸಂಚಾರ ನಿಯಮದ ವಿರೋಧಿಗಳು ಆಪಾದಿಸಿದ್ದಾರೆ. ಅಷ್ಟೇ ಅಲ್ಲದೆ, ಈ ನಿಯಮ ಜಾರಿಗೆ ಬಂದ ನಂತರವೂ ರಾಜಧಾನಿಯ ವಾಯುವಿನ ಗುಣಮಟ್ಟದಲ್ಲಿ ಯಾವುದೇ ಮಹತ್ವದ ಸುಧಾರಣೆಯಾಗಿಲ್ಲವೆಂದು ಅವರು ಹೇಳಿದ್ದಾರೆ.







