ಬೈಂದೂರು: ಯುವತಿಯ ಸರ ಅಪಹರಣಕ್ಕೆ ಯತ್ನ
ಬೈಂದೂರು, ಜ.14: ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಯುವತಿಯೊಬ್ಬಳ ಕತ್ತಿನಲ್ಲಿದ್ದ ಸರ ಅಪಹರಿಸಲು ಯತ್ನಿಸಿದ ಘಟನೆ ಇಂದು ಬೆಳಗ್ಗೆ 11:45ರ ಸುಮಾರಿಗೆ ಬೈಂದೂರಿನ ಮಯೂರ ಪೆಟ್ರೋಲ್ ಬಂಕ್ ಬಳಿ ನಡೆದಿದೆ.
ಉಪ್ಪುಂದ ತೂಮಿನಹಿತ್ಲುವಿನ ಕೃಷ್ಣ ಎಂಬವರ ಮಗಳು ತ್ರಿವೇಣಿ(22) ಎಂಬಾಕೆ ತನ್ನ ತಂಗಿಯೊಂದಿಗೆ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದಾಗ ಎದುರಿನಿಂದ ಬಂದ ಸುಮಾರು 40ರಿಂದ 45 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿಯೊಬ್ಬ ತ್ರಿವೇಣಿ ತಲೆಗೆ ಮತ್ತು ಕೆನ್ನೆಗೆ ಹೊಡೆದು ಆಕೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಸಿಯಲು ಯತ್ನಿಸಿದ್ದ. ಆ ವೇಳೆ ತ್ರಿವೇಣಿ ಬೊಬ್ಬೆ ಹಾಕಿದಾಗ ಆತ ತಾಲೂಕು ಕಚೇರಿ ರಸ್ತೆಯಲ್ಲಿ ಪರಾರಿಯಾದನು ಎನ್ನಲಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





