ಮಕ್ಕಳಲ್ಲಿ ರಕ್ತಹೀನತೆ ಸಮಸ್ಯೆ ನಿವಾರಣೆಗೆ ನೂತನ ಬಹು ಪೋಷಕಾಂಶ ಪೂರಕ ಆಹಾರ
ಹೊಸದಿಲ್ಲಿ,ಜ.14: ದೇಶದಲ್ಲಿ ಮಕ್ಕಳನ್ನು ವ್ಯಾಪಕವಾಗಿ ಕಾಡುತ್ತಿರುವ ರಕ್ತಹೀನತೆ ಸಮಸ್ಯೆಯನ್ನು ನಿಭಾಯಿಸಲು ನೂತನ ಬಹು ಪೋಷಕಾಂಶ ಪೂರಕ ಆಹಾರದೊಡನೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್) ಯು ಸಜ್ಜಾಗಿದೆ.
ಭಾರತದಲ್ಲಿ ಶೇ.70ಕ್ಕೂ ಅಧಿಕ ಮಕ್ಕಳು ರಕ್ತಹೀನತೆಯಿಂದ ಬಳಲುತ್ತಿದ್ದು, ಸರಕಾರವು ಕಳೆದ ಹಲವು ದಶಕಗಳಿಂದಲೂ ಕಬ್ಬಿಣಾಂಶ ಮತ್ತು ಫಾಲಿಕ್ ಆ್ಯಸಿಡ್‌ಯುಕ್ತ ಪೂರಕ ವಿತರಣೆಯಂತಹ ಕಾರ್ಯಕ್ರಮಗಳನ್ನು ನಡೆಸುತ್ತಿದೆ.
ಮಕ್ಕಳಲ್ಲಿ ವ್ಯಾಪಕವಾಗಿರುವ ರಕ್ತಹೀನತೆಯನ್ನು ತಡೆಗಟ್ಟಲು ಹೈದರಾಬಾದ್‌ನ ರಾಷ್ಟ್ರೀಯ ಪೋಷಕಾಂಶ ಸಂಸ್ಥೆಯು ಬಹು ಪೋಷಕಾಂಶ ಮಿಶ್ರಣವನ್ನು ಅಭಿವೃದ್ಧಿಗೊಳಿಸಿದೆ. ಇದನ್ನು ಮಕ್ಕಳಿಗೆ ಪೂರಕ ಪೋಷಕಾಂಶಗಳನ್ನು ಒದಗಿಸಲು ಸರಕಾರವು ಹಮ್ಮಿಕೊಂಡಿರುವ ಮಧ್ಯಾಹ್ನದೂಟದಂತಹ ಕಾರ್ಯಕ್ರಮಗಳಲ್ಲಿ ಸೇರಿಸಲಾಗುವುದು ಎಂದು ಐಸಿಎಂಆರ್‌ನ ಮಹಾ ನಿರ್ದೇಶಕಿ ಸೌಮ್ಯ ಸ್ವಾಮಿನಾಥನ್ ಅವರು ಗುರುವಾರ ಇಲ್ಲಿ ತಿಳಿಸಿದರು.
ಈ ಬಗ್ಗೆ ನಾವು ಮಹಿಳಾ ಮತ್ತು ಮಕ್ಕಳ ಸಚಿವಾಲಯದೊಂದಿಗೆ ಮಾತುಕತೆಯನ್ನು ಆರಂಭಿಸಿದ್ದೇವೆ ಎಂದ ಅವರು, ಸಂಶೋಧನೆಯ ಆರಂಭಿಕ ಪ್ರಯೋಗಗಳನ್ನು ಪೂರ್ಣಗೊಳಿಸಲಾಗಿದೆ ಮತ್ತು ಮಕ್ಕಳಲ್ಲಿ ರಕ್ತಹೀನತೆಯ ಮಟ್ಟ ಗಮನೀಯ ಪ್ರಮಾಣದಲ್ಲಿ ತಗ್ಗಿರುವುದು ಕಂಡುಬಂದಿದೆ ಎಂದರು.





