ಜಿ20 ಶೃಂಗಸಭೆ: ಬಡತನ ನಿವಾರಣೆಗೆ ಭಾರತದ ಆದ್ಯತೆ
ಹೊಸದಿಲ್ಲಿ, ಜ.14: ಭಾರತವು ಜಿ20 ಶೃಂಗಸಭೆಯಲ್ಲಿ ವಾಣಿಜ್ಯ ಹಾಗೂ ಹೂಡಿಕೆ ವಿಷಯಗಳ ಜೊತೆಗೆ ಬಡತನ ನಿವಾರಣೆ ಹಾಗೂ ಧಾರಣಾಶೀಲ ಅಭಿವೃದ್ಧಿಯ ಬಗೆಗೂ ಹೆಚ್ಚಿನ ಒತ್ತು ನೀಡಲಿದೆಯೆಂದು, ನೀತಿ ಆಯೋಗದ ಉಪಾಧ್ಯಕ್ಷ ಅರವಿಂದ ಪನಗಾರಿಯಾ ಗುರುವಾರ ಹೊಸದಿಲ್ಲಿಯಲ್ಲಿ ತಿಳಿಸಿದ್ದಾರೆ.
‘‘ ಜಿ20 ಶೃಂಗಸಭೆಯಲ್ಲಿ ಕೇವಲ ವಾಣಿಜ್ಯ ಹಾಗೂ ಹೂಡಿಕೆಗೆ ಮಾತ್ರವೇ ಆದ್ಯತೆ ನೀಡಲಾಗದು. ಈ ವಿಷಯಗಳು ಈಗಾಗಲೇ ಜಿ20 ವೇದಿಕೆಯ ಮುಂದಿದೆ. ಆದರೆ ಚೀನಾ ಆ ಎರಡು ವಿಷಯಗಳನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಬಯಸುತ್ತಿದೆ. ಆದರೆ ನಾವು ಈ ವಿಷಯಗಳ ಜೊತೆ ಬಡತನದ ಸಮಸ್ಯೆಯ ಜೊತೆಗೆ ಸಂಪರ್ಕಿಸಲು ಇಚ್ಛಿಸಿದ್ದೇವೆ’’ ಎಂದವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಅಭಿವೃದ್ಧಿ ಹೊಂದಿರುವ ಹಾಗೂ ಹೊಂದುತ್ತಿರುವ ರಾಷ್ಟ್ರಗಳ ಒಕ್ಕೂಟವಾದ ಜಿ20ಯ ಅಧ್ಯಕ್ಷತೆಯನ್ನು ಪ್ರಸ್ತುತ ಚೀನಾ ಹೊಂದಿದೆ.
ಕಪ್ಪು ಹಣವನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಜಿ20ಯ ಸದಸ್ಯ ರಾಷ್ಟ್ರಗಳ ನಡುವೆ ಸಾಮಾನ್ಯ ತಾತ್ವಿಕ ಒಪ್ಪಂದ ಅಸ್ತಿತ್ವದಲ್ಲಿದೆ. ಆದರೆ ಅದನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಹೆಚ್ಚಿನ ಪ್ರಗತಿ ಕಂಡುಬರುವುದಿಲ್ಲವೆಂದು ಪನಗಾರಿಯಾ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.





