ಅಮೆರಿಕದಿಂದ ಕೆಲಸದ ವೀಸಾ ಶುಲ್ಕ 3 ಪಟ್ಟ್ಟು

ಬೆಂಗಳೂರು, ಜ.14: ಅಮೆರಿಕ ಸರಕಾರವು ಎಚ್-1ಬಿ ಹಾಗೂ ಎಲ್-1 ವೀಸಾಗಳ ಶುಲ್ಕವನ್ನು ಮೂರು ಪಟ್ಟು ಹೆಚ್ಚಿಸುವ ಮೂಲಕ 146 ಶತಕೋಟಿ ಡಾಲರ್‌ಗಳ ಭಾರತೀಯ ಮಾಹಿತಿ ತಂತ್ರಜ್ಞಾನ ಸೇವಾ ಉದ್ಯಮಕ್ಕೆ ಭಾರೀ ಹೊಡೆತ ನೀಡಿದೆ. ಚುನಾವಣಾ ವರ್ಷದಲ್ಲಿ ಅಮೆರಿಕನ್ನರ ಉದ್ಯೋಗ ನಷ್ಟ ಭೀತಿಯನ್ನು ನಿವಾರಿಸುವುದು ಈ ಕ್ರಮದ ಉದ್ದೇಶವೆನ್ನಲಾಗಿದೆ.
2010ರಲ್ಲಿ ಅಮೆರಿಕವು ವೀಸಾ ಶುಲ್ಕವನ್ನು 5 ವರ್ಷಗಳ ಕಾಲಕ್ಕೆ ದುಪ್ಪಟ್ಟುಗೊಳಿಸಿತ್ತು. ಆದರೆ, ಈ ಬಾರಿಯ ಶುಲ್ಕ ಹೆಚ್ಚಳವು 2025ರವರೆಗೆ ಅಂದರೆ 10 ವರ್ಷಗಳಕಾಲ ವಿಸ್ತರಣೆಯಾಗಲಿದೆ.
ಎಚ್-1ಬಿ ಹಾಗೂ ಎಲ್-1 ವಲಸೇತರ ವೀಸಾಗಳ ಅತಿ ದೊಡ್ಡ ಬಳಕೆದಾರರಾಗಿರುವ ಭಾರತದ ಐಟಿ ಕಂಪೆನಿಗಳು ಈ ಶುಲ್ಕ ಹೆಚ್ಚಳದಿಂದಾಗಿ 40 ಲಕ್ಷ ಡಾಲರ್ ನಷ್ಟ ಅನುಭವಿಸಿಲಿದ್ದು, ತಮ್ಮ ಅತಿದೊಡ್ಡ ಗಿರಾಕಿ ಮಾರುಕಟ್ಟೆಗೆ ಪ್ರತಿ ವರ್ಷ ಕಳುಹಿಸಲಾಗುತ್ತಿರುವ ನೌಕರರ ಸಂಖ್ಯೆಯನ್ನು ಅನಿವಾರ್ಯವಾಗಿ ಪುನರವಲೋಕನ ಮಾಡುವಂತಾಗಿದೆ. ಇದು, ಈ ಕಂಪೆನಿಗಳು ಅಮೆರಿಕದಲ್ಲಿ ಮಾಡುತ್ತಿರುವ ವ್ಯವಹಾರದ ಮೇಲೆ ಪರಿಣಾಮ ಬೀರಬಹುದು ಹಾಗೂ ಅವುಗಳನ್ನು ಅಮೆರಿಕದ ಪ್ರತಿ ಸ್ಪರ್ಧಿಗಳಿಗಿಂತ ಕಡಿಮೆ ಸ್ಪರ್ಧಾತ್ಮಕವಾಗಿಸಬಹದು.
ಹಾಲಿ ವೀಸಾಗಳ ಬೆಲೆ 2 ಸಾವಿರ ಡಾಲರ್ ಇದೆ. ಇನ್ನೀಗ ಎಚ್-1ಬಿ ವೀಸಾಗಳಿಗೆ 4 ಸಾವಿರ ಡಾಲರ್ ಹಾಗೂ ಎಲ್-1ಎ ಮತ್ತು ಎಲ್-1ಬಿ ವೀಸಾ ಅರ್ಜಿಗಳಿಗೆ 4,500 ಡಾಲರ್ ಹೆಚ್ಚುವರಿಯಾಗಿ ತರಬೇಕಾಗುತ್ತದೆ. ಶೇ.50ರಷ್ಟು ಹೆಚ್ಚು ನೌಕರರು ಎಚ್-1ಬಿ ಅಥವಾ ಎಲ್-1 ವಲಸೇತರ ಸ್ಥಾನಮಾನ ಹೊಂದಿದ್ದು, 50ಅಥವಾ ಅದಕ್ಕೆ ಹೆಚ್ಚು ನೌಕರರನ್ನು ನೇಮಿಸುವ ಅರ್ಜಿದಾರರಿಗೆ ಹೆಚ್ಚುವರಿ ಶುಲ್ಕ ಅನ್ವಯವಾಗುತ್ತದೆ, ಹೆಚ್ಚಿನ ದೊಡ್ಡ ಭಾರತೀಯ ಐಟಿ ಕಂಪೆನಿಗಳು ಈ ನಗರಗಳಲ್ಲಿ ಬರುತ್ತವೆ.
ಎಚ್-1ಬಿ ವಲಸೇತರ ವೀಸಾ ಆಗಿದ್ದು, ಅದು ಅಮೆರಿಕದ ಕಂಪೆನಿಗಳಿಗೆ (ಭಾರತೀಯ ಕಂಪೆನಿಗಳ ಅಮೆರಿಕನ್ ಘಟಕಗಳೂ ಸೇರಿ) ತಾತ್ಕಾಲಿಕವಾಗಿ ವಿದೇಶಿ ಉದ್ಯೋಗಿಗಳ ನೇಮಕಾತಿಗೆ ಅವಕಾಶ ನೀಡುತ್ತದೆ. ಎಲ್-1 ಎಂಬುದೂ ವಲಸೇತರ ವೀಸಾ ಆಗಿದ್ದು, ವ್ಯವಸ್ಥಾಪನ, ಕಾರ್ಯವಾಹಿ ಅಥವಾ ವಿಶೇಷ ಜ್ಞ್ಞಾನ ವರ್ಗಗಳ ವಿದೇಶಿ ಕೆಲಸಗಾರರನ್ನು ಅಮೆರಿಕಕ್ಕೆ ತಾತ್ಕಾಲಿಕವಾಗಿ ವರ್ಗಾವಣೆ ಮಾಡಲು ಸಹಕಾರಿಯಾಗಿದೆ.







