ಖಾಸಗಿ ರಂಗದಲ್ಲಿ ಮೀಸಲಾತಿ ಅಗತ್ಯ
ಮೀಸಲಾತಿಯಿಂದ ಹಿಂದುಳಿದ ಜಾತಿಯವರಿಗೆ ಮತ್ತು ದಲಿತರಿಗೆ ಅಭಿವೃದ್ಧಿ ಹೊಂದಲು ಸಾಧ್ಯವಾಗಿದೆಯೇ?ಸರಕಾರಿ ಹುದ್ದೆಗಳು ಕ್ಷೀಣಗೊಂಡಿರುವ ಈ ಕಾಲಘಟ್ಟದಲ್ಲಿ ಖಾಸಗಿ ರಂಗದಲ್ಲಿ ಮೀಸಲಾತಿ ಒದಗಿಸಬೇಕೆಂಬ ಕೂಗು ಸಮಂಜಸವೇ?ಖಾಸಗಿ ರಂಗದಲ್ಲಿ ಜಾತಿಯಾಧಾ ರಿತವಾಗಿ ಹೇಗೆ ದಲಿತರನ್ನು ಉದ್ಯೋಗಾವಕಾಶಗಳಿಂದ ಹೊರಗಿಡಲಾಗುತ್ತಿದೆ ಎಂಬುದನ್ನು ಅಂಕಿ ಅಂಶಗಳ ಮೂಲಕ ತಿಳಿಯಬಹುದಾಗಿದೆ.
ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣ ನೀತಿಗಳನ್ನು 1990ರ ದಶಕದಿಂದೀಚೆಗೆ ಅನುಷ್ಠಾನಗೊಳಿಸಿದಾಗಿನಿಂದ ಈ ನೀತಿಗಳು ಭಾರತೀಯ ಜನತೆಯ ಮೇಲೆ ದೊಡ್ಡ ಪರಿಣಾಮ ಬೀರಿವೆ.ಶಿಕ್ಷಣ, ಆರೋಗ್ಯ ಮತ್ತು ಇತರೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ತನ್ನ ಜವಾಬ್ದಾರಿಯಿಂದ ಪ್ರಭುತ್ವವು ಹಿಂದೆ ಸರಿದಿದ್ದು, ಖಾಸಗಿ ಮತ್ತು ವಿದೇಶಿ ಶಕ್ತಿಗಳ ಕೃಪೆಗೆ ಬಿಟ್ಟಿರುವುದರಿಂದ ಭಾರತದಲ್ಲಿ ಬಡತನ ಉಲ್ಬಣಿಸಿದೆ. ವಿಶ್ವಬ್ಯಾಂಕ್‌ನ ವರದಿ ಪ್ರಕಾರ 2010ರಲ್ಲಿ ಅಂತಾರಾಷ್ಟ್ರೀಯ ಬಡತನ ರೇಖೆಯ ಮಟ್ಟ ದಿನವೊಂದಕ್ಕೆ ರೂ.75ಕ್ಕಿಂತ ಕಡಿಮೆ ಆದಾಯ ಹೊಂದಿರುವ ಭಾರತೀಯರ ಸಂಖ್ಯೆ ಶೇ. 32.7 ಇದ್ದು, ದಿನವೊಂದಕ್ಕೆ ರೂ. 120ಕ್ಕಿಂತ ಕಡಿಮೆ ಆದಾಯ ಹೊಂದಿರುವವರ ಸಂಖ್ಯೆ ಶೇ.68.7ರಷ್ಟಿದೆ. ಸಂಕಷ್ಟಕ್ಕೀಡಾಗಿರುವ ಸಾಮಾಜಿಕ ಗುಂಪುಗಳ/ಜಾತಿಗಳ ಪೈಕಿ, ದಲಿತರು ಮತ್ತು ಆದಿವಾಸಿಗಳೇ ಅತಿ ಹೆಚ್ಚು ನರಳುತ್ತಿದ್ದಾರೆ. ಇದಲ್ಲದೆ ಕೇಂದ್ರ ಮತ್ತು ರಾಜ್ಯ ಸರಕಾರಗಳೆರಡೂ ಹಲವು ಸಾರ್ವಜನಿಕ ರಂಗದ ಉದ್ದಿಮೆಗಳನ್ನು ಮುಚ್ಚಿದ್ದು, ಸರಕಾರ ಹಲವು ಕಾರ್ಯಗಳಿಗಾಗಿ ಸರಕಾರೇತರ ಸಂಸ್ಥೆಗಳನ್ನು ನೇಮಿಸಿದೆ. ಅರೆಕಾಲಿಕ, ಗುತ್ತಿಗೆ, ಹೊರಗುತ್ತಿಗೆ, ಗೌರವಧನ ಆಧಾರಿತ ಅಥವಾ ಅತಿಥಿ ನೇಮಕಾತಿಗಳು, ನಿವೃತ್ತಿ ಹೊಂದಿದವರ ನೇಮಕಾತಿ, ಇತ್ಯಾದಿಗಳು ಮೀಸಲಾತಿಯನ್ನು ಬಹುತೇಕ ನಾಶಗೊಳಿಸಿದ್ದು ಗುತ್ತಿಗೆದಾರರು ಅಥವಾ ಸರಕಾರೇತರ ಸಂಸ್ಥೆಗಳ ನಿರ್ವಹಣೆದಾರರ ಜಾತಿಯವರಿಗೆ ಇನ್ನಿಲ್ಲದ ಅವಕಾಶಗಳನ್ನು ಒದಗಿಸಿದೆ.
ರಹಸ್ಯವಾಗಿಯಾಗಲಿ ಬಹಿರಂಗವಾಗಿಯಾಗಲಿ ನೇಮಕಾತಿ ಅಥವಾ ಭಡ್ತಿಯಲ್ಲಿ ಜಾತಿ-ಆಧಾರಿತ ತಾರತಮ್ಯವು ಆಚರಣೆಯಲ್ಲಿಲ್ಲವೆಂದು ಖಾಸಗಿ ರಂಗವು ಅದೆಷ್ಟೇ ಬೊಬ್ಬೆ ಹೊಡೆದರೂ ಅದು ಕೇವಲ ಸಮಾಜವನ್ನು ದಿಕ್ಕು ತಪ್ಪಿಸುವ ತಂತ್ರವಾಗಿದೆ.ಅದಕ್ಕೆ ಬೆಂಬಲವಾಗಿ ಯಾವುದೇ ಅಂಕಿ-ಅಂಶಗಳು ಲಭ್ಯವಿಲ್ಲ.ಅದೇ ವೇಳೆ 2010ರಲ್ಲಿ ನಡೆಸಲಾದ ಅಧ್ಯಯನವು ತೋರಿಸುವುದೇನೆಂದರೆ, ದೇಶದ ಶೇ. 80ರಷ್ಟು ಒಟ್ಟಾರೆ ಬಂಡವಾಳವನ್ನು ನಿಯಂತ್ರಿಸುವ ಮೊದಲ 1,000 ಕಾರ್ಪೊರೇಟ್ ಕಂಪೆನಿಗಳ 9,052 ಮಂದಿ ಆಡಳಿತ ಮಂಡಳಿ ಸದಸ್ಯರ ಪೈಕಿ 8,204 ಮಂದಿಯು ಬ್ರಾಹ್ಮಣರು ಮತ್ತು ವೈಶ್ಯರೇ ಆಗಿದ್ದಾರೆ.ಇತರೆ ಹಿಂದುಳಿದ ವರ್ಗದವರು ಮತ್ತು ದಲಿತರು ಕ್ರಮವಾಗಿ ಕೇವಲ ಶೇ.3.8 (345) ಮತ್ತು ಶೇ. 3.5 (319)ರಷ್ಟಿದ್ದಾರೆ. ಕಾರ್ಪೊರೇಟ್ ರಂಗದಲ್ಲಿ ಜಾತಿಯಾಧಾರಿತ ಸಂರಚನೆಯ ತಾರತಮ್ಯ ಇಲ್ಲದೆ ಇದು ಸಾಧ್ಯವೇ? ಭಾರತೀಯ ಸಮಾಜದಲ್ಲಿ ಯಾವುದೇ ಸಂಸ್ಥೆ ಅಥವಾ ರಂಗ ಜಾತಿಯ ಪ್ರಭಾವ ದಿಂದ ಸಂಪೂರ್ಣವಾಗಿ ಹೊರತಾಗಿರಲು ಸಾಧ್ಯವೇ ಇಲ್ಲ ಎನ್ನುವ ಸ್ಥಿತಿ ಇನ್ನು ಮುಂದುವರಿದಿದೆ. ಇದಕ್ಕೆ ಖಾಸಗಿ ರಂಗವೂ ಹೊರತಲ್ಲ.ಇದನ್ನು ಕಡೆಗಣಿಸುವ ಬದಲಿಗೆ ಅಂತಹ ತಾರತಮ್ಯವನ್ನು ಪರಿಹರಿಸುವುದು ಹೇಗೆಂಬ ಪ್ರಾಮಾಣಿಕ ಚಿಂತನೆ ಅಗತ್ಯವಿದೆ.
ಈಗಾಗಲೇ ಕುಸಿಯುತ್ತಿರುವ ಸರಕಾರಿ ಮತ್ತು ಸಾರ್ವಜನಿಕ ರಂಗದ ಹುದ್ದೆಗಳಿಂದಾಗಿ ಸರಕಾರಿ ರಂಗದಲ್ಲಿ ಪರಿಶಿಷ್ಟ ಜಾತಿಯವರ ಸಂಖ್ಯೆಯು 6,28,000 (1991)ರಿಂದ 6,04,000 (1992) ಕ್ಕೆ ಕುಸಿದಿದ್ದರೆ, ಸಾರ್ವಜನಿಕ ರಂಗದಲ್ಲಿ 4,32,000 (1990) ರಿಂದ 3,69,000 (1992) ಕ್ಕೆ ಕುಸಿದಿದೆ. 1992-97ರ ನಡುವೆ, ಕೇಂದ್ರ ಸರಕಾರದ ಉದ್ಯೋಗಾವಕಾಶಗಳಲ್ಲಿ ಶೇ. 10.07 ರಷ್ಟು ಕುಂಠಿತಗೊಂಡಿದ್ದು, ಪರಿಶಿಷ್ಟ ಜಾತಿಯವರಿಗೆ 1,13,450 ಉದ್ಯೋಗಾವಕಾಶಗಳು ಕಣ್ಮರೆಯಾಗಿವೆ. ಪರಿಶಿಷ್ಟ ಜಾತಿಯವರ ಬಡತನ ದರವು ಶೇ. 38 (1989)ರಿಂದ ಶೇ. 48 (1992) ಕ್ಕೆ ಏರಿಕೆ ಕಂಡಿದೆ.
ಹೆಚ್ಚು ಸಮಾನತೆಯುಳ್ಳ ಯಾವುದೇ ಸಮಾಜವು ಹೆಚ್ಚು ಸೌಹಾರ್ದಯುತವಾಗಿರುತ್ತದೆ. ದಲಿತರನ್ನು ಉತ್ತಮವಾದ ಹಾಗೂ ಅತ್ಯವಶ್ಯವಾದ ಶಿಕ್ಷಣ, ಭೂಮಿ, ಸಾರ್ವಜನಿಕ ಸ್ಥಳಗಳು, ಸಾರ್ವಜನಿಕ ಸೌಲಭ್ಯಗಳು, ಬಂಡವಾಳ ಮತ್ತು ಉದ್ಯೋಗಗಳನ್ನು ಪಡೆಯುವುದರಿಂದ ದೂರವಿಡುವ ಜಾತಿಯಾಧಾರಿತ ತಾರತಮ್ಯವೇ ಭಾರತದಲ್ಲಿ ಜಾತಿಗಳ ನಡುವಿನ ಅಸಮಾನತೆಗೆ ಮುಖ್ಯ ಕಾರಣಗಳಲ್ಲೊಂದಾಗಿದೆ. ಇಂತಹ ದೊಡ್ಡ ಅಸಮಾನತೆಯ ಕಂದರವೇ ನಮ್ಮ ರಾಷ್ಟ್ರದ ಸೌಹಾರ್ದತೆಯ ಅಧೋಗತಿಗೆ ಕಾರಣವಾಗಿದೆ. ಚಳವಳಿಯ ಮೂಲಕ ಜಾತಿ ತಾರತಮ್ಯ ಮತ್ತು ಅಸಮಾನತೆಗಳ ವಿರುದ್ಧ ಹೋರಾಡಿ ಉತ್ತಮ ಸಮಾಜ ನಿರ್ಮಾಣ ಮಾಡಬೇಕಿದೆ. ಮೂಢಾಂಧತೆಯ ಆರೆಸ್ಸೆಸ್‌ನ ರಾಜಕೀಯ ಅಂಗವಾದ ಬಿಜೆಪಿಯು ಮೀಸಲಾತಿಯ ಕೆಲವು ಅಂಶಗಳನ್ನು ತೋರಿಕೆಗಾಗಿ ಬೆಂಬಲಿಸಿದರೂ ಅದು ಜಾತಿ ತಾರತಮ್ಯವನ್ನು ಹರಡುವ ವರ್ಣಾಶ್ರಮ ಧರ್ಮ ಮತ್ತು ಮನುಸ್ಮತಿಯನ್ನು ಎತ್ತಿಹಿಡಿಯುತ್ತದೆ. ಅದು ಹಿಂಸಾತ್ಮಕ ರೀತಿಯಲ್ಲಿ ಮೀಸಲಾತಿ-ವಿರೋಧಿ ಹೋರಾಟಗಳಿಗೆ ಬೆಂಬಲ ನೀಡಿದೆ ಮತ್ತು ಮೀಸಲಾತಿ ಜಾರಿಯನ್ನು ಹಲವು ವರ್ಷಗಳ ಕಾಲ ವಿಳಂಬ ಮಾಡಿದೆ. ಯುಪಿಎ ಸರಕಾರದ ಕನಿಷ್ಠ ಸಾಮಾನ್ಯ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷವು ಖಾಸಗಿ ರಂಗದಲ್ಲಿ ಮೀಸಲಾತಿ ವಿಷಯವನ್ನು ಸೇರಿಸಿಕೊಳ್ಳಲು ಒಪ್ಪಿಕೊಂಡರೂ ಅದರಲ್ಲಿ ಬಳಸಿರುವ ಎರಡು ನಾಲಿಗೆಯ ಮಾತುಗಳು ವಿಶ್ವಾಸಘಾತುಕತನಕ್ಕೆ ಸಾಕ್ಷಿಯಾಗಿದ್ದು, ಇದು ರಾಜಕೀಯ ಇಚ್ಛಾಶಕ್ತಿ ಇಲ್ಲದಿರುವುದನ್ನು ತೋರುತ್ತದೆ. ಸಣ್ಣ ದನಿ ಹೊರಡಿಸಿದ್ದ ಪ್ರಧಾನಮಂತ್ರಿಗಳು ಕಾರ್ಪೊರೇಟ್ ಜಗತ್ತು ಅವರ ಮೇಲೆ ಒತ್ತಡ ತಂದಾಕ್ಷಣ ಮೌನವಹಿಸಿದರು. ಪರ್ಯಾಯ ಸಮಾಜಿಕ-ಆರ್ಥಿಕ ನೀತಿಗಳ ಆಡಳಿತ ಮಾತ್ರವೇ ಸಾಮಾಜಿಕ ನ್ಯಾಯ ಮತ್ತು ಪ್ರಜಾಸತ್ತಾತ್ಮಕ ಆಡಳಿತದ ಪ್ರಮುಖ ಅಳತೆಗೋಲಾದ ಮೀಸಲಾತಿಯಯನ್ನು ನಾಶಗೊಳಿಸುತ್ತಿರುವ ಕುತಂತ್ರವನ್ನು ತಡೆಯಲು ಸಾಧ್ಯ.
ಚಾರಿತ್ರಿಕವಾಗಿ ಆಸ್ತಿಯ ಹಕ್ಕಿನಿಂದ ವಂಚಿತರಾಗಿ ರುವುದು, ಇತರೆ ಜಾತಿಗಳಿಗೆ ಹೋಲಿಸಿದರೆ ಕಡಿಮೆ ಕೂಲಿ ಮತ್ತು ಅಸ್ಪೃಶ್ಯತೆಯ ಆಚರಣೆಗಳಿಂದಾಗಿ ಮುಂದುವರಿದ ಜಾತಿಗಳು ಮತ್ತು ಇನ್ನಿತರ ಹಿಂದುಳಿದ ಜಾತಿಗಳಿಗೆ ಹೋಲಿಸಿದರೆ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಅತಿ ಹೆಚ್ಚು ಹಿಂದುಳಿದಿದ್ದಾರೆ. ಈ ಹಿನ್ನೆಲೆಯಲ್ಲಿ ಇಂತಹ ಚಾರಿತ್ರಿಕ ತಾರತಮ್ಯವನ್ನು ಪರಿಹರಿಸಲು ಸರಕಾರಿ ಮತ್ತು ಸಾರ್ವಜನಿಕ ರಂಗದಲ್ಲಿ ಮೀಸಲಾತಿ ಜಾರಿಗೆ ತರಲಾಗಿದೆ. ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣ ಯುಗದ ಮುಖ್ಯ ಗುಣಲಕ್ಷಣವೆಂದರೆ ದಲಿತರ ಮೀಸಲಾತಿಯನ್ನು ಖಾಸಗಿ ರಂಗದ ವ್ಯಾಪ್ತಿಯಿಂದ ಹೊರಗಿಡುವುದು, ಇದರಿಂದ ಪರೋಕ್ಷವಾಗಿ ಮತ್ತು ಹಿಂಬಾಗಿಲ ಮೂಲಕ ಮೀಸಲಾತಿ-ನಾಶಕ್ಕೆ ಕಾರಣವಾಗಿದೆ.
ದೇಶದ ಉನ್ನತ ಶಿಕ್ಷಣ ಸಂಸ್ಥೆಗಳಾದ ಐಐಟಿ, ಐಐಎಂಗಳಲ್ಲಿ ಉಪನ್ಯಾಸಕರ ಪೈಕಿ ದಲಿತರ ಸಂಖ್ಯೆ ಶೇ.2ಕ್ಕೂ ಕಡಿಮೆಯಿದೆ. ಸಾವಿರಾರು ವರ್ಷಗಳಿಂದ ಶಿಕ್ಷಣದಿಂದ ವಂಚಿತರಾಗಿದ್ದ ದಲಿತರು ಇದೀಗ ಉತ್ತಮ ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗಿದ್ದಾರೆ.ಶಿಕ್ಷಣದ ಮೀಸಲಾತಿಯಿಂದ ಶಿಕ್ಷಣ ಪಡೆದು ಉದ್ಯೋಗ ಪಡೆಯುವ ಹೊತ್ತಿಗೆ, ಸರಕಾರಿ ಹುದ್ದೆಗಳು ಇನ್ನಿಲ್ಲವಾಗಿ ಮೀಸಲಾತಿಯಿಂದ ಯಾವ ಪ್ರಯೋಜನವೂ ಇಲ್ಲವಾಗಿದೆ. ಹಾಗಾಗಿ ಖಾಸಗಿ ರಂಗದಲ್ಲಿ ಮೀಸಲಾತಿ ಅನಿವಾರ್ಯ.







