ಎಂಡೋಸಲ್ಫಾನ್ ಸೆಲ್ ಜವಾಬ್ದಾರಿ ಜಿಪಂ ಅಧ್ಯಕ್ಷರಿಗೆ ವಹಿಸಲಿ: ಪಿಣರಾಯಿ ಆಗ್ರಹ
ಕಾಸರಗೋಡು, ಜ.14: ಮುಂದಿನ ಚುನಾವಣೆಯಲ್ಲಿ ಕೇರಳ ದಲ್ಲಿ ಎಡರಂಗ ಅಧಿಕಾರಕ್ಕೆ ಬಂದಲ್ಲಿ ಎಂಡೋ ಸಲ್ಫಾನ್ ಸಂತ್ರಸ್ತರ ಪುನರ್ವಸತಿಗೆ ತುರ್ತು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಸಿಪಿಎಂ ಪಾಲಿಟ್ ಬ್ಯೂರೋ ಸದಸ್ಯ ಪಿಣರಾಯಿ ವಿಜಯನ್ ಭರವಸೆ ನೀಡಿದರು.
ಜಿಲ್ಲೆಯ ನಾಲ್ಕು ಗ್ರಾಪಂ ವ್ಯಾಪ್ತಿಯ ಎಂಡೋಸಲ್ಫಾನ್ ಸಂತ್ರಸ್ತ ಪ್ರದೇಶಗಳಿಗೆ ಗುರುವಾರ ಭೇಟಿ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಎಂಡೋಸಲ್ಫಾನ್ ಸೆಲ್ನ ಜವಾಬ್ದಾರಿ ಯನ್ನು ಜಿಪಂ ಅಧ್ಯಕ್ಷರಿಗೆ ವಹಿಸಬೇಕು. ಅಗತ್ಯ ಚಿಕಿತ್ಸೆ ಹಾಗೂ ಸೌಲಭ್ಯವನ್ನು ಜಿಲ್ಲೆಯಲ್ಲೇ ಕಲ್ಪಿಸಬೇಕು ಎಂದು ಅವರು ಒತ್ತಾಯಿಸಿದರು.
ಜಿಲ್ಲೆಯ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕರ ಕೊರತೆ ಇದೆ. ಪ್ಲಸ್ ಟು ತನಕ ಶಿಕ್ಷಣ ನೀಡಿದರೆ ಸಾಲದು. ಉನ್ನತ ಶಿಕ್ಷಣಕ್ಕೆ ಜೊತೆಗೆ ಉದ್ಯೋಗ ಒದಗಿಸುವ ಸೌಲಭ್ಯ ಜಿಲ್ಲೆಯಲ್ಲೇ ಕಲ್ಪಿಸುವ ವ್ಯವಸ್ಥೆ ಕಲ್ಪಿಸಬೇಕು ಎಂದು ಹೇಳಿದರು.
ಬೆಳಗ್ಗೆ ಪೆರ್ಲ ಬಡ್ಸ್ ಶಾಲೆಯಿಂದ ಪರ್ಯಟನೆ ಆರಂಭಿಸಿದ ಪಿಣರಾಯಿ ವಿಜಯನ್, ಮುಳಿಯಾರು, ಕಾರಡ್ಕ, ಎನ್ಮಕಜೆ ಗ್ರಾಪಂನ ಎಂಡೋ ಸಂತ್ರಸ್ತರ ಮನೆಗಳಿಗೆ ಭೇಟಿ ನೀಡಿ ಅಹವಾಲುಗಳನ್ನು ಸ್ವೀಕರಿಸಿದರು. ಎಂಡೋಸಲ್ಫಾನ್ ಹೂತುಹಾಕಲಾಗಿರುವ ಮುಳಿಯಾರಿನ ನೆಂಜಪರಂಬ ಎಂಬಲ್ಲಿಗೂ ಅವರು ಭೇಟಿ ನೀಡಿದರು.
ಈ ಸಂದರ್ಭ ಸಿಪಿಎಂ ಮುಖಂಡರಾದ ಎಂ.ವಿ. ಗೋವಿಂದನ್ ಮಾಸ್ಟರ್, ಸಂಸದ ಪಿ.ಕರುಣಾಕರನ್, ಕೆ.ಪಿ.ಸತೀಶ್ಚಂದ್ರನ್, ಎಂ.ವಿ.ಬಾಲಕೃಷ್ಣ ಮಾಸ್ಟರ್, ಕೆ.ಜೆ.ಥಾಮಸ್, ಮಾಜಿ ಶಾಸಕ ಸಿ.ಎಚ್.ಕುಂಞಾಂಬು ಮೊದಲಾದವರು ಉಪಸ್ಥಿತರಿದ್ದರು.





